ದೇವರ ದಯೆಯಿಂದ ನಿದ್ದೆಯ ವಿಚಾರದಲ್ಲಿ ನಾನು ಅದೃಷ್ಟವಂತ. ಎಷ್ಟು ಹೊತ್ತು ಮಲಗಿದರೂ ಎಲ್ಲೇ ಮಲಗಿದರೂ ನಿದ್ದೆ ಬರುತ್ತದೆ. ಕೆಲವೊಂದು ಸಲ ನಿದ್ದೆಮಾಡಬಾರದಾದ ಸ್ಥಳದಲ್ಲೂ ನಿದ್ದೆ ಬರುವುದುಂಟು. ಈ ವಿಷಯದಲ್ಲಿ ಪಿ.ಎಚ್.ಡಿ ಯ ತರಗತಿಗಳಿಗೋಸ್ಕರ ಪ್ರಯಾಗದಲ್ಲಿದ್ದಾಗ ನಡೆದ ಘಟನೆಯೊಂದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ.
ಮಾರ್ಚ್ ತಿಂಗಳಿಗಾಗಲೇ ಚಳಿ ಕಳೆದು ಸೆಖೆ ಆರಂಭವಾಗಿತ್ತು. ನಮ್ಮ ತರಗತಿಗಳೂ ಮಾರ್ಚ್ ತಿಂಗಳಲ್ಲೇ ನಡೆಯುತ್ತಿದ್ದವು. ಹಿರಿಯ ವಿದ್ವಾಂಸರ ಭಾಷಣಗಳನ್ನು ಅಲ್ಲಿ ಆಯೋಜಿಸಲಾಗುತ್ತಿತ್ತು. ಕೆಲವು ಹಿರಿಯರ ಮಾತುಗಳು ಹೊರಗಡೆ ಶೃಂಗಾರ ಒಳಗಡೆ ಗೋಳಿಸೊಪ್ಪಿನಂತೆ ಇರುತ್ತವೆ. ಇಂತಹ ಸಂದರ್ಭದಲ್ಲಿ ಪ್ರಯಾಗದ ಹಿರಿಯ ವಿದ್ವಾಂಸರಾದ ಪ್ರೊ. ಹರದತ್ತ ಶರ್ಮಾ ಅವರ ವ್ಯಾಖ್ಯಾನವನ್ನು ನಮ್ಮ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿತ್ತು. ಯಾವುದೋ ವಿಷಯದ ಬಗ್ಗೆ ಹಿಂದಿಯಲ್ಲಿ ಮಾಡುತ್ತಿದ್ದ ವ್ಯಾಖ್ಯಾನ ನನಗಂತೂ ಜೋಗುಳ ಹಾಡಿದಂತಾಗಿತ್ತು. ಅಲ್ಲದೇ ಕಂಬವೊಂದಕ್ಕೆ ಒರಗಿಕೊಂಡು ಕೂತಿದ್ದೆ. ಇದರಿಂದಾಗಿ ವ್ಯಾಖ್ಯಾನ ನಡೆಯುತ್ತಿದ್ದಾಗ ಚೆನ್ನಾಗಿ ನಿದ್ದೆ ಮಾಡಿದ್ದೆ.
ಬೋಧಿಸುತ್ತಿರುವವರೂ ಗಮನಿಸಿದರು. ಹತ್ತು ನಿಮಿಷಗಳ ನಂತರ ನನ್ನ ಪಕ್ಕದವನ ಹತ್ತಿರ ನನ್ನನ್ನು ಎಬ್ಬಿಸಲು ಹೇಳಿದರು. ನಾನು ಆವಾಗಿನಿಂದ ನೋಡ್ತಾ ಇದ್ದೆ. ನೀನೇ ಏಳುತ್ತೀ ಅಂತ ಅಂದುಕೊಂಡೆ. ಆದರೆ ನಿನಗೆ ಎಚ್ಚರವಾಗಲಿಲ್ಲ, ಆದ್ದರಿಂದ ಎಬ್ಬಿಸಲು ಹೇಳಿದೆ ಎಂದರು. ನಾನು ಎದ್ದುನಿಂತು ನನ್ನನ್ನು ಕ್ಷಮಿಸಿ ಎಂದು ಹೇಳಿದೆ.
ನಮ್ಮ ತರಗತಿಯ ಮುಖ್ಯಸ್ಥರಾಗಿದ್ದ ಪ್ರೊ.ಲಲಿತ್ ಕುಮಾರ್ ತ್ರಿಪಾಠಿಯವರಿಗೆ ಅವಮಾನವಾದಂತಾಯಿತು. ತಾನು ಕರೆಸಿದ ವಿದ್ವಾಂಸರ ತರಗತಿಯಲ್ಲಿ ವಿದ್ಯಾರ್ಥಿಯೊಬ್ಬನು ನಿದ್ದೆ ಮಾಡುತ್ತಿದ್ದಾನೆಂದರೆ ಅವಮಾನವಲ್ಲವೇ ? ತಕ್ಷಣವೇ ನನ್ನನ್ನು ಎದುರಿಗೆ ಕರೆದು ಕೂರಿಸಿದರು. ತದನಂತರ ನನ್ನ ನಿದ್ದೆಗೂ ಸಮಜಾಯಿಷಿ ಕೊಟ್ಟರು. दक्षिण में लोगों के आदत ऐसा है । मैं जब दक्षिण में गया था तब देखा । दोपहर में खाने के बाद सब लोग सो जातें हैं । चार बजे तक सब बंद रहते है । इसके बाद फिर से सब काम चालू हो जाता है । ये लडका दक्षिण का है इसलिए सो रहा था ।
ಅವರೇನೂ ಕೋಪಿಸಿಕೊಳ್ಳಲಿಲ್ಲ. ಹಿರಿಯರಾದ ಅವರು ತರಗತಿಯಲ್ಲಿ ನಿದ್ದೆ ಮಾಡುವ ನನ್ನಂತಹ ಎಷ್ಟು ಜನರನ್ನು ನೋಡಿರಲಿಕ್ಕಿಲ್ಲ? ತಮ್ಮ ಬೋಧನೆ ಮುಗಿಸಿ ತೆರಳಿದರು. ತದನಂತರ ಪ್ರೊ.ಲಲಿತ್ ಕುಮಾರ್ ತ್ರಿಪಾಠಿ ಅವರು ಇಡಿಯ ತರಗತಿಯನ್ನು ತರಾಟೆಗೆ ತೆಗೆದುಕೊಂಡರು. ನೀವು ಪಾಠ ಕೇಳುವುದಿಲ್ಲ. ನಾವು ನಿಮಗೆ ಬೋಧಿಸಲಿಕ್ಕೆ ಯಾರ್ಯಾರನ್ನೋ ಕರೆಸುತ್ತೇವೆ. ಅವರೆದುರು ನೀವು ಮರ್ಯಾದೆ ತೆಗೆಯುತ್ತೀರಿ ಎಂದು ಎಲ್ಲರನ್ನೂ ಬೈದರು. ಕೊನೆಯಲ್ಲಿ ವಿಶೇಷವಾಗಿ ನನ್ನನ್ನುದ್ದೇಶಿಸಿ सूर्य, आप क्यों सोते हैं जिससे हमें ऐसे बहाना बनाना पडता है । ಏನನ್ನೂ ಉತ್ತರಿಸುವ ಸ್ಥಿತಿಯಲ್ಲಿ ನಾನಿರಲಿಲ್ಲವಾದ್ದರಿಂದ ಮೌನಿಯಾದೆ.
ನೀವು ಗಂಗಾನಾಥ ಝಾ ಕ್ಯಾಂಪಸ್ ನಲ್ಲಿದ್ದೀರ?
ಪ್ರತ್ಯುತ್ತರಅಳಿಸಿ