ಸೋಮವಾರ, ಜೂನ್ 7, 2021

ಭಾಷೆಗಳೂ ಶಬ್ದಗಳೂ ಅನುವಾದವೂ

ಭಾಷಾಪ್ರಪಂಚ ವಿಚಿತ್ರವಾದುದು. ಭಾಷೆಗಳ ನಡುವೆ ಕಾಣುವ ವೈಶಿಷ್ಟ್ಯಗಳನ್ನು ಪಟ್ಟಿ ಮಾಡುತ್ತಾ ಹೋದರೆ ಮುಗಿದಷ್ಟು ಅಂಶಗಳು ದೊರೆಯಬಹುದು. ವ್ಯಾಕರಣದ ನಿಯಮಗಳನ್ನು ಕಲಿತು ಮಾತನಾಡುವುದಕ್ಕಿಂತ ಮಾತನಾಡುತ್ತಿರುವವರ ನಡುವೆ ಕಲೆತು ಮಾತನಾಡಿದಾಗ ಭಾಷೆ ಹೆಚ್ಚು ಆಪ್ತವಾಗುತ್ತದೆ. ಸಾಮಾನ್ಯವಾಗಿ ಹೊಸ ಭಾಷೆಗಳನ್ನು ಕಲಿಯುವಾಗ ನಮಗೆ ಗೊತ್ತಿರುವ ಭಾಷೆಯಲ್ಲಿ ಯೋಚಿಸಿ ಆ ವಾಕ್ಯವನ್ನೇ ತರ್ಜುಮೆ ಮಾಡುತ್ತೇವೆ. ಯಾವಾಗ ಚಿಂತನೆಯಲ್ಲೂ ಭಾಷೆಯೊಂದು ಒದಗಿ ಬರುತ್ತದೆಯೋ ಆವಾಗ ಆ ಭಾಷೆ ಆಪ್ತವಾದಂತೆ ಎಂಬುವುದು ಅನೇಕರ ಅಭಿಪ್ರಾಯ.

ನನ್ನ ವಿಚಾರಕ್ಕೆ ಬರುವುದಾರೆ ಮನೆಯಲ್ಲಿ ಆಡುವ ಚಿತ್ಪಾವನೀ ಭಾಷೆ, ಶಾಲೆಯಲ್ಲಾಡಿದ ಕನ್ನಡ, ಕಾಲೇಜು ಹಾಗೂ ಉದ್ಯೋಗದ ಸ್ಥಳದಲ್ಲಾಡುತ್ತಿರುವ ಸಂಸ್ಕೃತ ಹೀಗೆ ಮೂರು ಭಾಷೆಗಳು ಆಪ್ತವಾದ ಭಾಷೆಗಳಾಗಿವೆ.  ಈ ಭಾಷೆಗಳಲ್ಲಾಡುವಾಗ ಅದೇ ಭಾಷೆಯಲ್ಲಿ ಯೋಚನೆಯನ್ನೂ ಮಾಡುತ್ತೇನೆ.  ಕೆಲವೊಂದು ಕಡೆಗಳಲ್ಲಿ ಮೂರೂ ಭಾಷೆಯ ವಾಕ್ಯರಚನಾಶೈಲಿ ಭಿನ್ನವಾಗಿದೆ. ಉದಾಹರಣೆಗೆ ನಾನು ನಿನ್ನೊಂದಿಗೆ ಬರುತ್ತೇನೆ ಎನ್ನುವಾಗ ನಿನ್ನ ಎಂದು ಷಷ್ಠೀ ವಿಭಕ್ತಿಯನ್ನು ಕನ್ನಡದಲ್ಲೂ, ತೂಸವ ಏಸ ಎನ್ನೂವಾಗ ತೂ ಎಂದು ಪ್ರಥಮಾ ವಿಭಕ್ತಿಯನ್ನು ಚಿತ್ಪಾವನೀ ಭಾಷೆಯಲ್ಲಿಯೂ, ಭವತಾ ಸಹ ಆಗಚ್ಛಾಮಿ ಎನ್ನುವಾಗ ಭವತಾ ಎಂದು ತೃತೀಯಾ ವಿಭಕ್ತಿಯನ್ನು ಸಂಸ್ಕೃತದಲ್ಲಿಯೂ ಬಳಸಲಾಗುತ್ತದೆ. ಸಂಸ್ಕೃತದಲ್ಲಿ ಇಂತಹ ಸಂದರ್ಭದಲ್ಲಿ ತೃತೀಯಾವಿಭಕ್ತಿಯನ್ನು ಬಳಸಬೇಕು ಎಂಬ ನಿಯಮವನ್ನು ನಾನು ಓದಿರುವೆನಾದರೂ ಮಾತನಾಡುವಾಗ ನಿಯಮವನ್ನು ನೆನಪಿಸಿಕೊಂಡು ಮಾತನಾಡುವುದಿಲ್ಲ. ಅದು ಸಹಜವಾಗಿಯೇ ನನ್ನ ಬಾಯಿಯಿಂದ ಬರುತ್ತದೆ. 

ಹೀಗಿದ್ದರೂ ಕೂಡಾ ಕೆಲವೊಮ್ಮೆ ಒಂದು ಭಾಷೆಯ ಪ್ರಭಾವ ಮತ್ತೊಂದು ಭಾಷೆಯ ಮೇಲೆ ಆಗುವುದಿದೆ. ಕನ್ನಡ ಮಾತನಾಡುವಾಗ ಹಲವಾರು ಬಾರಿ ಸಹಜವಾಗಿ ಸಂಸ್ಕೃತದ ಶಬ್ದಗಳು ಬರುತ್ತವೆ. ಒಂದು ಭಾಷೆಯ ಗುಂಗಿನಲ್ಲಿದ್ದಾಗ ಮತ್ತೊಂದು ಭಾಷೆಯಲ್ಲಿ ಮಾತನಾಡತೊಡಗಿದರೆ ಗುಂಗಿನಲ್ಲಿರುವ ಭಾಷೆಯ ಶಬ್ದಗಳೇ ಬರಲಾರಂಭಿಸುತ್ತವೆ. ಕೆಲವೊಂದು ಬಾರಿ ಶಬ್ದಶಃ ಅನುವಾದವೂ ಆಗಿಬಿಡುತ್ತದೆ.

ನನ್ನ ದೂರದ ಸಂಬಂಧಿಯೊಬ್ಬರು ಮದುವೆಗಾಗಿ ಬೆೆಂಗಳೂರಿನಿಂದ ಊರಿಗೆ ಹೊರಡುತ್ತಿದ್ದರು. ನಾನು ಕೂಡಾ ಅವರ ಮನೆಗೆ ತಯಾರಿಗೆಂದು ಹಿಂದಿನ ದಿನವೇ ಹೋಗಿದ್ದೆ. ಅವರ ಮನೆಯಲ್ಲಿ ಚಿತ್ಪಾವನೀಯನ್ನು ಮಾತನಾಡುತ್ತಾರೆ. ಅವರ ಪಕ್ಕದ ಮನೆಯಲ್ಲೂ ಚಿತ್ಪಾವನೀಯನ್ನಾಡುವ ಕುಟುಂಬವೊಂದಿದೆ. ಬೆಳಿಗ್ಗೆ ಬೇಗ ಕಾರಿನಲ್ಲಿ ಅವರು ಹೊರಟರು. ನಾನು ಅವರನ್ನು ಬೀಳ್ಕೊಟ್ಟು ಬರುವಾಗ ಪಕ್ಕದ ಮನೆಯವರು ಕಂಡರು. ಅವರಲ್ಲೂ ಚಿತ್ಪಾವನೀಯಲ್ಲಿ ಮಾತಾಡಿ ಮನೆಗೆ ವಾಪಾಸ್ಸಾದಾಗ ಮೇಲಿನ ಮನೆಯವರು ಕಂಡರು. ಇವರಲ್ಲೂ ಹೊರಟದ್ದನ್ನು ತಿಳಿಸೋಣ ಎಂದುಕೊಂಡೆ. ಚಿತ್ಪಾವನೀ ಗುಂಗಿನಲ್ಲಿದ್ದ ನಾನು ಕನ್ನಡದಲ್ಲಿ ಆರಂಭಿಸಿದೆ.

ಈಗಷ್ಟೇ ಹೋದ್ರು ಅಂತ ಹೇಳಿದೆ. ಈ ವಾಕ್ಯಕ್ಕೆ ಕನ್ನಡದಲ್ಲಿ ಅಮಂಗಲಕರವಾದ ಅರ್ಥವಿದೆ. ಇದನ್ನು ನಾನೂ ತಿಳಿಯದವನೇನಲ್ಲ. ಆದರೆ ಚಿತ್ಪಾವನೀ ಭಾಷೆಯ ಎಷ್ಶಾ ಗೆಲ್ಲಿ ಎಂಬುವುದರೆ ಶಬ್ದಾನುವಾದ ಈಗಷ್ಟೇ ಹೋದ್ರು ಎನ್ನುವುದು. ಹಿಂದಿನ ದಿನದಿಂದ ಇದ್ದ ಚಿತ್ಪಾವನೀಯ ಗುಂಗು ನನ್ನ ಬಾಯಿಯಿಂದ ಈ ಮಾತನ್ನಾಡಿಸಿತ್ತು. ಕೇಳಿಸಿಕೊಂಡವರು ಹೊರಟ್ರಾ..... ಒಳ್ಳೆದಾಯ್ತು ಎಂದು ಹೇಳಿದಾಗ ನನ್ನ ವಾಕ್ಯದ ಅಮಂಗಳಕರವಾದ ಅರ್ಥ ಹೊಳೆಯಿತು. 

ಹೀಗೆ ಕೆಲವೊಂದು ಬಾರಿ ನಮ್ಮ ಗುಂಗಿನಲ್ಲಿರುವ ಭಾಷೆಯಿಂದ ಹೊರಬರಲಾಗುವುದಿಲ್ಲ. ಆದರೂ ಕೂಡಾ ಇಂತಹ ಸಂದರ್ಭಗಳಲ್ಲಿ ಅನರ್ಥಗಳೇನೂ ಘಟಿಸುವುದಿಲ್ಲ. ಭಾಷಾವಿಷಯದಲ್ಲಿ ಯೋಚಿಸುವವರು ಈ ಹಾದಿಯಲ್ಲೂ ಯೋಚನಾಲಹರಿಯನ್ನೂ ವಿಸ್ತರಿಸಬಹುದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಶ್ರೀಮದ್ರಾಮಾಯಣೀ ಗಂಗಾ

ವಾಲ್ಮೀಕಿಗಿರಸಂಭೂತಾ ರಾಮಾಂಭೋನಿಧಿಸಂಗತಾ । ಶ್ರೀಮದ್ರಾಮಾಯಣೀ ಗಂಗಾ ಪುನಾತಿ ಭುವನತ್ರಯಮ್ ॥ ಎಂಬ ಮಾತಿನ ಮೂಲಕ ಹಿರಿಯರು ರಾಮಾಯಣವನ್ನು ಗಂಗೆಯೆಂದೇ ಕರೆದಿದ್ದಾರೆ. ರಾಮಾಯ...