ಭಾನುವಾರ, ಜೂನ್ 25, 2023

ಕವಿನಾಮಾಂಕಿತ ಷಡರ ಚಕ್ರಬಂಧ

ವಿವಿಧ ಚಿತ್ರಗಳ ಆಕಾರದಲ್ಲಿ ಅಕ್ಷರಗಳನ್ನು ಜೋಡಿಸಿ ಪದ್ಯಗಳನ್ನು ರಚಿಸುವುದೇ ಚಿತ್ರಬಂಧ. ಮೊದಲು ಚಿತ್ರವನ್ನು ಬಿಡಿಸಿ ಅನಂತರ ಎಲ್ಲಿ ಯಾವ ಅಕ್ಷರಗಳು ಬರಬೇಕು, ಹೇಗೆ ಅವುಗಳ ಪುನರಾವರ್ತನೆಯಾಗಬೇಕು ಎಂದು ಕೂಲಂಕಷವಾಗಿ ನೋಡುತ್ತಾ ಒಂದು ವಿಷಯದ ಬಗ್ಗೆ ಅರ್ಥಗರ್ಭಿತವಾದ ಪದ್ಯವನ್ನು ಬರೆಯುವುದೇ ಕಷ್ಟಸಾಧ್ಯ. ಅಷ್ಟಾವಧಾನದಲ್ಲಿ ಇಂತಹ ಪದ್ಯ ರಚಿಸುವುದು ಅಸಾಧ್ಯ ಎಂದುಕೊಂಡರೆ ತಪ್ಪೇನಿಲ್ಲ. ಚಿತ್ರವು ಎದುರಿನಲ್ಲಿ ಇಲ್ಲದೆ, ಬರೆಯಲು ಪೆನ್ನೂ ಇಲ್ಲದಾಗ ಅನೇಕ ಜನರು ವಿವಿಧ ವಿಷಯಗಳನ್ನು ಕುರಿತಾಗಿ ಕೇಳುತ್ತಿರುವಾಗ, ಅನೇಕ ಛಂದಸ್ಸುಗಳಲ್ಲಿ ಪದ್ಯರಚನೆ ನಡೆಯುತ್ತಿರುವಾಗ ಇಂತಹ ಚಿತ್ರಬಂಧಗಳಿಗೆ ಅವಧಾನಿ ಕೈಹಾಕುವುದು ಸಾಹಸವೇ ಸರಿ.

ಶತಾವಧಾನಿ ಗಣೇಶ್ ಅವಧಾನಗಳಲ್ಲಿ ಚಿತ್ರಬಂಧಗಳನ್ನೂ ರಚಿಸಬಹುದು ಎಂಬುವುದನ್ನು ತೋರಿಸಿದ್ದಾರೆ. ಚಿತ್ರಬಂಧಗಳಲ್ಲೂ ಕೆಲವೊಂದು ಬಂಧಗಳು ಸರಳ ಎಂದೆನಿಸುತ್ತವೆ. ಇನ್ನು ಕೆಲವು ಬಂಧಗಳು ಸಂಕೀರ್ಣ. ನಿನ್ನೆಯ (24-06-2023) ಅವಧಾನದಲ್ಲಿ ಗಣೇಶಭಟ್ಟ ಕೊಪ್ಪಲತೋಟ ಸಂಕೀರ್ಣವಾದ ಬಂಧರಚನೆಗೆ ಕೈ ಹಾಕಿ ಸೈ ಎನಿಸಿಕೊಂಡಿದ್ದಾರೆ.

ಗಂಗಾನದಿಯ ವರ್ಣನೆಯನ್ನು ಕವಿನಾಮಾಂಕಿತ ಷಡರ ಚಕ್ರಬಂಧದಲ್ಲಿ ಮಾಡಿದ ಪದ್ಯ ಹೀಗಿದೆ.

ಜನ್ಯಳ್ ಜಾಹ್ನವಿ ತೋಷಕಂ ಪರಮದಳ್ ಸಾವಿಲ್ಲಿ ಪುಣ್ಯಪ್ರದಂ

ಧನ್ಯಾತ್ಮರ್ಗೆನೆ ಟಕ್ಕೆಯಂತರಕೆನಲ್ಕಾಚನ್ದ್ರನಾರ್ದ್ರತ್ವಮೇ-

ನನ್ಯಂ ನೀಗಿರೆ ಕರ್ಮಮೇ ವರಮವಳ್ ವಕ್ರತ್ವದಿಂ ತೋರ್ದುದೈ

ದೈನ್ಯಕ್ಕಂಜದಗಾಧಯಾನೆ ನರರಿಂದಂ ಪೂಜ್ಯೆ ಮೇಲ್ ಪಾರ್ವುದೈ

 ಜಾಹ್ನವಿ ಸಂತೋಷವನ್ನು ನೀಡುವವಳು, ಧನ್ಯರಿಗೆ ಗಂಗೆಯಲ್ಲಿನ ಸಾವು ಪುಣ್ಯವನ್ನು ನೀಡುವಂತಹದು, ಗಂಗೆ ಧರ್ಮಕ್ಕೆ ಧ್ವಜದಂತಿರುವವಳು (ಟಕ್ಕೆ – ಧ್ವಜ, ಅಱ- ಧರ್ಮ), ಚಂದ್ರನಂತೆ ಶೀತಲಳಾದವಳು, ಕರ್ಮಬಂಧವನ್ನು ಕಳಚಿ ಮೋಕ್ಷವನ್ನು ಕೊಡುವವಳು, ಭೂಮಿಯಲ್ಲಿ ವಕ್ರವಾಗಿ (ಓರೆಕೋರೆಯಾಗಿ) ಕಾಣಿಸುವವಳು, ದೀನಸ್ಥಿತಿಯಿದ್ದರೂ (ಭೂಮಿಗಿಳಿಯುವ ಸಂದರ್ಭದಲ್ಲಿ ಎಷ್ಟೇ ಕಷ್ಟ ಬಂದರೂ) ಹೆದರದೆ ಆಳವಾದ ಹರಿವಿನಿಂದ ಚಲಿಸುವವಳಾಗಿ, ಜನರಿಂದ ಪೂಜಿಸಲ್ಪಟ್ಟವಳಾಗಿ ಮೇಲೆ ಬಂದು (ಉಕ್ಕಿ) ಹರಿಯುತ್ತಿದ್ದಾಳೆ.

ಪದ್ಯದಲ್ಲಿನ ಅಕ್ಷರಗಳನ್ನು ಚಿತ್ರದಲ್ಲಿ ಬರೆದಾಗ ಆರು ಕಡ್ಡಿಗಳುಳ್ಳ ಚಕ್ರವೊಂದು ಸಿದ್ಧವಾಗುತ್ತದೆ. ಆದ್ದರಿಂದ ಷಡರ ಚಕ್ರಬಂಧ. ಈ ಚಕ್ರದಲ್ಲಿ ಆರನೆಯ ಅಕ್ಷರದಿಂದ ರಚಿತವಾದ ಸಣ್ಣ ಚಕ್ರವನ್ನು ನೋಡಿದಾಗ ಕವಿಯ ಹೆಸರು ಕಾಣಿಸುತ್ತದೆ. (ಚಿತ್ರದಲ್ಲಿ ಕೆಂಪು ಬಣ್ಣದಿಂದ ತೋರಿಸಲಾಗಿದೆ) ಆದ್ದರಿಂದ ಇದು ಕವಿನಾಮಾಂಕಿತ ಷಡರ ಚಕ್ರಬಂಧ.

ಮೊದಲ ಮೂರು ಸಾಲುಗಳನ್ನು ಮೂರು ಕಡ್ಡಿಗಳಲ್ಲಿ ಓದಬಹದು. ಕೊನೆಯ ಸಾಲು ಚಕ್ರದ ಪರಿಧಿಯಲ್ಲಿದೆ. ದೈ ಎಂಬಲ್ಲಿಂದ ಆರಂಭಿಸಿ ದೈ ಎಂಬುವುಬಲ್ಲಿಗೆ ಮುಗಿಯುತ್ತದೆ.

ಇಲ್ಲಿ ಇಂತಹ ಅರ್ಥಗರ್ಭಿತವಾದ ಸುಂದರ ಪದ್ಯಗಳನ್ನು ರಚಿಸುವಾಗ ಅನೇಕ ಸವಾಗಲುಗಳಿದ್ದವು

ಶಾರ್ದೂಲವಿಕ್ರೀಡಿತ ಛಂದಸ್ಸನ್ನು ಅನುಸರಿಸಬೇಕು.

ಪ್ರತಿ ಪಾದದ ಎರಡನೇ ಅಕ್ಷರ ಪ್ರಾಸಾಕ್ಷರವೇ (ನ್ಯ) ಇರತಕ್ಕದ್ದು.

ಕವಿಯ ಹೆಸರು ಬರುವಂತೆ ಮಾಡಲು ಮೊದಲ ಮೂರು ಪಾದಗಳ ಆರನೆಯ ಅಕ್ಷರಗಳು ತೋ,ಟ,ಕ ಎಂದೂ ಹದಿನಾಲ್ಕನೆಯ ಅಕ್ಷರಗಳು ವಿ, ಚ, ಕ್ರ ಎಂದೂ ಇರಬೇಕು

ಮೊದಲ ಮೂರು ಪಾದಗಳ ಹತ್ತನೆಯ ಅಕ್ಷರ ಇರಬೇಕು. ಅದು ಚಕ್ರದ ಮಧ್ಯದಲ್ಲಿರುತ್ತದೆ.

ಮೂರನೆಯ ಪಾದದ ಕೊನೆಯ ಅಕ್ಷರ, ನಾಲ್ಕನೆಯ ಪಾದದ ಮೊದಲನೆಯ ಹಾಗೂ ಕೊನೆಯ ಅಕ್ಷರಗಳು ಸಮಾನವಾಗಿರಬೇಕು. (ದೈ)

ಕೊನೆಯ ಸಾಲು ರಚಿಸುವಾಗ ಏಳು ಅಕ್ಷರಗಳು ಮೊದಲೇ ಸಿದ್ಧವಾಗಿರುತ್ತವೆ. ಅದಕ್ಕನುಗುಣವಾಗಿ ಅರ್ಥ ಬರುವಂತೆ, ಛಂದಸ್ಸು ತಪ್ಪದಂತೆ ಉಳಿದ ಹನ್ನೆರಡು ಅಕ್ಷರಗಳನ್ನು ಜೋಡಿಸಬೇಕು.

ಇವಿಷ್ಟನ್ನೂ ಮನಸ್ಸಿನಲ್ಲಿಟ್ಟುಕೊಂಡು ಅವಧಾನದ ಇತರ ಅಂಗಗಳ ನಡುವೆಯೇ ಪದ್ಯ ರಚಿಸಬೇಕು.

ಇಂತಹ ಕಷ್ಟಕರವಾದ ಕವಿನಾಮಾಂಕಿತ ಷಡರಚಕ್ರಬಂಧವನ್ನು ಸುಂದರವಾಗಿ ರಚಿಸಿದ ಗಣೇಶ ಭಟ್ಟ ಕೊಪ್ಪಲತೋಟ ನಿಜವಾಗಿಯೂ ಅಭಿನಂದನಾರ್ಹರು.



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಶ್ರೀಮದ್ರಾಮಾಯಣೀ ಗಂಗಾ

ವಾಲ್ಮೀಕಿಗಿರಸಂಭೂತಾ ರಾಮಾಂಭೋನಿಧಿಸಂಗತಾ । ಶ್ರೀಮದ್ರಾಮಾಯಣೀ ಗಂಗಾ ಪುನಾತಿ ಭುವನತ್ರಯಮ್ ॥ ಎಂಬ ಮಾತಿನ ಮೂಲಕ ಹಿರಿಯರು ರಾಮಾಯಣವನ್ನು ಗಂಗೆಯೆಂದೇ ಕರೆದಿದ್ದಾರೆ. ರಾಮಾಯ...