ವಿಶ್ವದಲ್ಲಿ ಅನೇಕ ಭಾಷೆಗಳು ನಶಿಸಿ ಹೋಗುತ್ತಿವೆ ಎಂಬ ಕೂಗು ಕೇಳಿಬರುತ್ತಿವೆ. ಭಾಷೆಗಳ ನಾಶಕ್ಕೆ ಆಧುನಿಕತೆಯೇ ಮುಖ್ಯ ಕಾರಣ ಎಂಬುವುದಂತೂ ಸತ್ಯ. ಇವುಗಳೊಂದಿಗೆ ತಮ್ಮ ಭಾಷೆಯ ಮೇಲಿರುವ ದುರಭಿಮಾನ ಇತರ ಭಾಷೆಯ ಮೇಲಿರುವ ಸದಭಿಮಾನವೂ ಕಾರಣವಾಗುತ್ತದೆ. ನನ್ನ ಮಾತೃಭಾಷೆ ಗ್ರಾಮೀಣ ಭಾಷೆ. ಆ ಭಾಷೆ ಕೀಳು. ಆ ಭಾಷೆಯನ್ನು ಬಿಟ್ಟು ಎಲ್ಲಾ ಕಡೆಯೂ ಮಾನ್ಯವಾಗಿರುವ ಇಂಗ್ಲಿಷಿನಲ್ಲಾಗಲೀ ಅಥವಾ ಇನ್ಯಾವುದೇ ಭಾಷೆಯಲ್ಲಾಗಲೀ ಮಾತನಾಡಬೇಕು ಎಂಬುವುದು ಹಲವರ ಅಭಿಪ್ರಾಯ. ಇಂಗ್ಲಿಷಿನಲ್ಲಿ ಸಂಪೂರ್ಣ ವಾಕ್ಯವನ್ನಾಡುವ ಸಾಮರ್ಥ್ಯವಿಲ್ಲದಿದ್ದರೂ ವಾಕ್ಯದ ಮಧ್ಯದಲ್ಲಿ ಇಂಗ್ಲಿಷ್ ಪದಗಳನ್ನು ಸೇರಿಸಲೇಬೇಕೆಂದು ಕಠಿಣ ಪರಿಶ್ರಮ ಪಡುತ್ತಾರೆ. ಬರುಬರುತ್ತಾ ಇಂಗ್ಲಿಷ್ ಪದಗಳ ಬಳಕೆ ಸಹಜವಾಗಿ ಮಾತೃಭಾಷೆಯಲ್ಲಿನ ಪದಗಳು ಮರೆತು ಮೂಲೆ ಸೇರುತ್ತವೆ.
ಇಂಗ್ಲಿಷ್ ಭಾಷೆಯ ಪ್ರಭಾವ ಎಂದಲ್ಲ, ಸಾಮಾನ್ಯವಾಗಿ ಗ್ರಾಮೀಣ ಪ್ರದೇಶದ ಭಾಷೆಯನ್ನು ನಾನು ಮಾತನಾಡಲೇ ಬಾರದು, ನನ್ನ ಮಕ್ಕಳು ಅದನ್ನು ಕೇಳಲೂಬಾರದು ಎಂಬ ಅಭಿಪ್ರಾಯ ಅನೇಕ ಪೋಷಕರಿಗಿದೆ. ನನ್ನ ಮಿತ್ರನೊಬ್ಬ ಉತ್ತರಪ್ರದೇಶದ ಹಳ್ಳಿಯವನು. ಆತನ ಮಾತೃಭಾಷೆ ಭೋಜಪುರೀ. ಆತನ ಹೆಂಡತಿಯದ್ದೂ ಭೋಜಪುರಿಯೇ. ನನ್ನ ಮಗ ಭೋಜಪುರಿಯನ್ನು ಕಲಿಯಬಾರದು ಹಿಂದಿಯಲ್ಲೇ ಮಾತನಾಡಬೇಕು ಎಂಬುವುದು ಆತನ ಬಯಕೆ. ಹೀಗೆಯೇ ತನ್ನ ಮಗನನ್ನು ಬೆಳೆಸುತ್ತಿದ್ದಾನೆ ಕೂಡಾ.
ಸಾಮಾನ್ಯವಾಗಿ ಮಾತೆಯರು ಮಾತನಾಡುವುದು ಹೆಚ್ಚು. ಅರಳು ಹುರಿದಂತೆ ಮಾತನಾಡುವ ಅವರ ಪ್ರಭಾವ ಮನೆಯಲ್ಲಿ ಖಂಡಿತವಾಗಿಯೂ ಆಗುತ್ತದೆ. ನನ್ನ ತಾಯಿಯಾಗಲೀ, ಅನೇಕ ಅನಕ್ಷರಸ್ಥ ತಾಯಂದಿರಾಗಲೀ ಮಾತನಾಡುವುದನ್ನು ಕೇಳುವುದೇ ಒಂದು ಸೊಗಸು. ಅವರು ತಮ್ಮ ಮಾತೃಭಾಷೆಯಲ್ಲಿ ಭಾವವನ್ನು ಪ್ರಕಟಿಸುವಾಗ ಅದ್ಭುತವಾದ ಅನುಭೂತಿ ಕೇಳುಗರಿಗೂ ಆಗುತ್ತದೆ. ಅದೇ ಮಾತೃಭಾಷೆಯನ್ನು ಬಿಟ್ಟು ಬೇರೆ ಭಾಷೆಯಲ್ಲಿ ಮಾತನಾಡುವಾಗ ಕೃತ್ರಿಮತೆಯ ಅನುಭವವಾಗುತ್ತದೆ. ಅನೇಕ ವಿಶಿಷ್ಟ ಪದಗಳನ್ನಾಗಲೀ, ವಾಕ್ಯರಚನಾ ಶೈಲಿಯನ್ನಾಗಲೀ, ಧ್ವನಿಯ ಏರಿಳಿತವನ್ನಾಗಲೀ ಮಕ್ಕಳು ಕಲಿಯುವುದು ತಾಯಿಯಿಂದಲೇ. ಆದ್ದರಿಂದ ತಾಯಿಯೊಬ್ಬಳು ಚೆನ್ನಾಗಿ ಮಾತನಾಡಿದರೆ ಭಾಷೆ ಉಳಿಯುತ್ತದೆ ಎಂದು ಹೇಳಬಹುದು.
ಆದರೆ ಈಗ ತದ್ವಿರುದ್ಧವಾದ ವಾತಾವರಣ ಕಂಡುಬರುತ್ತಿದೆ. ಸ್ವಲ್ಪ ಆಧುನಿಕತೆಯ ಕಡೆಗೆ ವಾಲಿದರೆ ಸಾಕು ಹುಡುಗಿಯರು (ಮುಂದೆ ತಾಯಿಯಾಗಲಿರುವವರು) ತಮ್ಮ ಮಾತೃಭಾಷೆಯಿಂದ ದೂರವಾಗುತ್ತಾರೆ. ಅನೇಕರು ಪ್ರಯತ್ನಪೂರ್ವಕವಾಗಿ ಇದನ್ನು ಸಾಧಿಸಿದರೆ ಕೆಲವರು ಸಹಜವಾಗಿಯೇ ತಮ್ಮದಲ್ಲದ ಭಾಷೆಯನ್ನು ತಮ್ಮದನ್ನಾಗಿಸಿಕೊಳ್ಳುತ್ತಾರೆ. ಎಲ್ಲವನ್ನೂ ತಮ್ಮದನ್ನಾಗಿಸಿಕೊಂಡು ಹೊಂದಾಣಿಕೆಯಿಂದ ಬದುಕುವ ಮಹಿಳೆಯರ ಸ್ವಭಾವ ಭಾಷಾಭಿವೃದ್ಧಿಯ ವಿಷಯದಲ್ಲಿ ತೊಡಕಿಗೆ ಕಾರಣವಾಗಿದೆ.
ನಾನು ಓದಿದ ಶಾಲಾ ಕಾಲೇಜುಗಳಲ್ಲಿ ನನ್ನ ಮಾತೃಭಾಷೆಯನ್ನಾಡುವ ಸಹಪಾಠಿಗಳೇ ಇರಲಿಲ್ಲ. ನನ್ನ ಮನೆಯವರನ್ನು ಬಿಟ್ಟರೆ ಮಾತೃಭಾಷೆಯನ್ನಾಡುವ ಆತ್ಮೀಯರಾರೂ ಇರಲಿಲ್ಲ. ಫೋನ್ ಸಂಪರ್ಕ ಸರಿಯಿಲ್ಲದಿದ್ದಾಗ ವಾರಗಟ್ಟಲೇ ಮಾತೃಭಾಷೆಯ ಒಂದೇ ಒಂದು ಶಬ್ದವೂ ನನ್ನ ಬಾಯಿಂದ ಹೊರಬರದ ಸ್ಥಿತಿಯೂ ಇತ್ತು. ಆದ್ದರಿಂದ ನನ್ನ ಮಾತೃಭಾಷೆಯ ಸೊಗಡನ್ನು ನಾನು ಉಳಿಸಿಕೊಳ್ಳಲಾಗಲಿಲ್ಲ. ಆದರೂ ಕೂಡಾ ನೀನು ಚೆನ್ನಾಗಿ ಚಿತ್ಪಾವನಿ ಭಾಷೆ ಮಾತನಾಡುತ್ತೀ ಎಂದು ಕೆಲವರಿಂದಾದರೂ ಹೇಳಿಸಿಕೊಂಡ ತೃಪ್ತಿಯಿದೆ. ನನ್ನ ಸಹಪಾಠಿಗಳಲ್ಲಿ ಅನೇಕರು ಉತ್ತರಕನ್ನಡದ ಹವ್ಯಕರು. ಆದ್ದರಿಂದ ಹವ್ಯಕ ಭಾಷೆಯನ್ನು ತುಂಬಾ ಕೇಳಿದ್ದೇನೆ. ಮಾತನಾಡುವ ಸಾಮರ್ಥ್ಯವಿಲ್ಲದಿದ್ದರೂ ಪ್ರತಿ ಪದದ ಅರ್ಥವನ್ನಷ್ಟೇ ಅಲ್ಲದೇ ಭಾವವನ್ನೂ ಆಸ್ವಾದಿಸುವಷ್ಟು ಹವ್ಯಕ ಭಾಷೆಯ ಜ್ಞಾನವಿದೆ. ಇದಕ್ಕೆ ಕಾರಣ ನನ್ನ ಮಿತ್ರರೆಂದೇ ಹೇಳಬೇಕು.
ನನ್ನ ಮಿತ್ರರಲ್ಲಿ ಅನೇಕ ಹುಡುಗಿಯರೂ ಇದ್ದರು. ಅವರು ಹವ್ಯಕ ಭಾಷೆಯಾಡುವುದನ್ನು ಕೇಳಿದಾಗ ನನಗೇ ದುಃಖವಾಗುತ್ತಿತ್ತು. ಅವರು ಮಾತನಾಡುವಾಗ ಇಂಗ್ಲಿಷಿನ ಈ ಪದಕ್ಕೆ ಹವ್ಯಕ ಭಾಷೆಯಲ್ಲಿ ಇಂತಹ ಸೊಗಸಾದ ಪದವಿದೆ, ಕನ್ನಡದ ಈ ಪದಕ್ಕಿಂತ ಹವ್ಯಕ ಭಾಷೆಯ ಈ ಪದವನ್ನು ಆಡಬೇಕಿತ್ತು. ಎಂದೆಲ್ಲಾ ಅನಿಸಿದ್ದಿದೆ. (Quick, meet, ಪುನಃ, ಸ್ವಲ್ಪ ಎಂಬ ಪದಗಳಿಗೆಲ್ಲಾ ಹವ್ಯಕ ಭಾಷೆಯಲ್ಲಿ ಸುಂದರವಾದ ಪದಗಳಿವೆ) ಐದಾರು ವರ್ಷಗಳಲ್ಲಿ ಮಿತ್ರರ ಒಡನಾಟದಿಂದ ಹವ್ಯಕವನ್ನು ಕಲಿತ ನನಗೇ ಹೀಗನಿಸುತ್ತಿರಬೇಕಾದರೆ ಹುಟ್ಟಿನಿಂದ ಹವ್ಯಕವನ್ನೇ ಆಡುತ್ತಿರುವ ಇವರು ಸಹಜವೆಂಬಂತೆ ಇತರ ಭಾಷಾ ಪದಗಳನ್ನು ಬಳಸುತ್ತಿದ್ದಾರೆ ಎಂದು ಅಚ್ಚರಿಯೆನಿಸಿತ್ತು.
ಮೊನ್ನೆಯಷ್ಟೇ ನನ್ನ ಸ್ನೇಹಿತೆಯೊಬ್ಬಳ ಮನೆಗೆ ಹೋಗಿದ್ದೆ. ಆಕೆಯ ಗಂಡ ಆಧುನಿಕ ಕಾಲೇಜುಗಳಲ್ಲಿ ಶಿಕ್ಷಣ ಪಡೆದು 7-8 ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಾಗಿರುವವನು. ಈಕೆ ಸಂಸ್ಕೃತ ಕಾಲೇಜಿನಲ್ಲಿ ಓದಿದವಳು. ಆದರೂ ಆಕೆಯ ಗಂಡನ ಮಾತುಗಳಲ್ಲಿ ಹವ್ಯಕ ಭಾಷೆಯ ಸೊಗಡಿತ್ತು(ನನ್ನೊಂದಿಗೆ ಹವ್ಯಕ ಗೆಳೆಯನೊಬ್ಬನಿದ್ದ. ಆತನೊಂದಿಗೆ ಮಾತನಾಡುವಾಗ ಗಮನಿಸಿದ್ದು.) . ಈಕೆಯದು ಆಂಗ್ಲ-ಕನ್ನಡ ಮಿಶ್ರಿತ ಹವ್ಯಕ ಭಾಷೆ. ಊಟ ಮಾಡುತ್ತಿರುವಾಗ ಗಂಡನನ್ನುದ್ದೇಶಿಸಿ ಗೊಜ್ಜು ಕೊಡಿ ಎಂದಾಗಲಂತೂ ನನಗೆ ಸಹಿಸಲಾಗಲಿಲ್ಲ. ಇದು ಗೊಜ್ಜಲ್ಲ "ಹಶಿ" ಎಂದು ಹುಟ್ಟಿದಾಗಲಿಂದ ಹವ್ಯಕವನ್ನೇ ಆಡುತ್ತಿದ್ದವಳಿಗೆ ಹವ್ಯಕ ಭಾಷೆಯನ್ನು ಕಲಿಸಿದೆ.
ಇದು ಒಬ್ಬಳ ಕತೆಯಲ್ಲ. ನಾನು ಗಮನಿಸಿದ ಅನೇಕ ಹುಡುಗಿಯರ ಭಾಷೆ ಹೀಗೆಯೇ ಇದೆ. ಹವ್ಯಕ ಭಾಷೆ ಎಂದಲ್ಲ. ಅನೇಕ ಪ್ರಾದೇಶಿಕ ಭಾಷೆಗಳ ಸ್ಥಿತಿಯೂ ಹೆಚ್ಚು ಕಡಿಮೆ ಸಮಾನವಾಗಿದೆ. ಅನೇಕ ಹುಡುಗರೂ ಇಂತಹವರಿರಬಹುದು. ಆದರೆ ನಾನು ನೋಡಿದವರಲ್ಲಿ ಅವರ ಸಂಖ್ಯೆ ಕಡಿಮೆ ಎಂದೇ ಹೇಳಬಹುದು. ನನ್ನ ಮಿತ್ರರು ಹವ್ಯಕ ಭಾಷೆಯನ್ನು ಚೆನ್ನಾಗಿ ಮಾತನಾಡದೇ ಇರುತ್ತಿದ್ದರೆ ಹವ್ಯಕ ಎಂಬ ಭಾಷೆಯನ್ನು ಜೀವನದಲ್ಲಿ ಒಮ್ಮೆಯೂ ಕೇಳಿರದ ನಾನು, 5-6 ವರ್ಷಗಳಲ್ಲೇ ಅದರ ಸೊಗಸನ್ನು ಅನುಭವಿಸಲಾಗುತ್ತಿರಲಿಲ್ಲ. ಏಕೆಂದರೆ ಅದನ್ನು ಕಲಿಯುವ ಅನಿವಾರ್ಯತೆ ನನಗಿರಲಿಲ್ಲ. ಭಾಷೆಯ ಸೊಬಗು, ಸೊಗಡು, ಸೊಗಸುಗಳನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ ಗುರುತರ ಜವಾಬ್ದಾರಿಯಿರುವ ತಾಯಂದಿರೇ ಈ ವಿಷಯದಲ್ಲಿ ಎಡವುತ್ತಿರುವುದು ವಿಪರ್ಯಾಸವೇ ಸರಿ.
ಒಪ್ಪ ಮಾತು 👌
ಪ್ರತ್ಯುತ್ತರಅಳಿಸಿಹವ್ಯಕರ ಭಾಷೆಯಲ್ಲೂ ಪ್ರಾದೇಶಿಕ ಭಿನ್ನತೆಗಳಿದ್ದು ಒಂದೊಂದೂ ಸಹ ತನ್ನದೇ ದನಿಗುರುತು (tonal identify) ಹೊಂದಿವೆ. ನಾನಂತೂ ಈ ವಿಭಿನ್ನತೆಗಳು ನಿತರಾಂ ಉಳಿಯಬೇಕು ಮತ್ತು ತಲೆಮಾರುಗಳಿಗೆ ಮುಂಬರಿಯಬೇಕೆಂದು ಬಯಸುವವ. ಹವ್ಯಕ ಅಂತಲ್ಲ, ಪ್ರಾದೇಶಿಕವಾದ ಎಲ್ಲ ಭಾಷೆಗಳೂ ಉಳಿಯಬೇಕು.
ಪ್ರತ್ಯುತ್ತರಅಳಿಸಿ