ಗುರುವಾರ, ಜೂನ್ 4, 2020

ಮಂಗ ಮನೆಯಲ್ಲೇ ಇದ್ದಾನೆ



ಪಿ.ಎಚ್.ಡಿ  ಪದವೀಧರರಾಗಿ ಸಮಾಜದಲ್ಲಿ ಜ್ಞಾನಿಗಳೆಂದು ಗುರುತಿಸಿಕೊಂಡರೂ ಅನೇಕ ಉಪನ್ಯಾಸಕರು ತಮ್ಮ ಸಣ್ಣ ಬುದ್ಧಿಯನ್ನು ಬಿಟ್ಟಿರುವುದಿಲ್ಲ. ಅನೇಕ ಬಾರಿ ಪ್ರೊ. ಎಂಬ ಅಕ್ಷರವನ್ನು ಹೆಸರಿನ ಹಿಂದೆ ಅಂಟಿಸಿಕೊಂಡ ಪ್ರೊಫೆಸರ್ ಗಳಿಗಿಂತಲೂ ಸಣ್ಣ ಪುಟ್ಟ ಕೆಲಸಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಪ್ರೊಪ್ರೈಟರ್ಗಳಳೇ ಸಮಾಜದಲ್ಲಿ ಗೌರವಯುತವಾಗಿ ಬಾಳುತ್ತಿರುತ್ತಾರೆ. (ಅವರ ಹೆಸರಿನ ಹಿಂದೆಯೂ ಪ್ರೊಪ್ರೈಟರ್ ಎಂಬರ್ಥದಲ್ಲಿ ಪ್ರೊ. ಎಂಬ ಅಕ್ಷರ ಇರುತ್ತದೆ) ವಿಶ್ವವಿದ್ಯಾಲಯಗಳಲ್ಲಂತೂ ಪ್ರೊಫೆಸರ್ ಗಳ ನಡುವೆ ಪರಸ್ಪರ ಕಲಹಗಳಾಗುವುದು ಸಹಜ. ಉಪನ್ಯಾಸಕರ ಮಧ್ಯದಲ್ಲಿ ಪರಸ್ಪರ ಕಲಹಗಳಿಲ್ಲದ ವಿಶ್ವವಿದ್ಯಾಲಯವೇ ಇಲ್ಲ ಎಂದರೂ ತಪ್ಪಲ್ಲ.  ಮರಣಂ ಪ್ರಕೃತಿಃ ಶರೀರಿಣಾಂ ವಿಕೃತಿರ್ಜೀವಿತಮುಚ್ಯತೇ ಬುಧೈಃ ಎಂಬ ಕಾಲಿದಾಸನ ಮಾತಿನಂತೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕರುಗಳಲ್ಲಿ ಕಲಹವೇ ಪ್ರಕೃತಿ. ಸಾಮರಸ್ಯವೇ ವಿಕೃತಿ.

ಎಲ್ಲಾ ವಿದ್ಯಾಲಯಗಳಲ್ಲಿರುವಂತೆಯೇ ನಮ್ಮ ವಿದ್ಯಾಲಯದಲ್ಲೂ ಇಬ್ಬರು ಅಧ್ಯಾಪಕರ ಮಧ್ಯೆ ಜಗಳವಿತ್ತು. ಎಷ್ಟರ ಮಟ್ಟಿಗೆಂದರೆ ವಿದ್ಯಾರ್ಥಿಗಳ ಎದುರಲ್ಲಿಯೇ ಪರಸ್ಪರರ ನಿಂದೆಯೂ ನಡೆಯುತ್ತಿತ್ತು. (ಗುರುವೆಂಬ ಜವಾಬ್ದಾರಿಯುತ ಸ್ಥಾನದಲ್ಲಿದ್ದೇವೆ ಎಂಬ ಕಾರಣದಿಂದ ಅವಾಚ್ಯ ಶಬ್ದಗಳ ಬಳಕೆ ಅಷ್ಟಾಗಿ ಆಗುತ್ತಿರಲಿಲ್ಲ.) ವಿದ್ಯಾರ್ಥಿಯಾಗಿ ನಾನು ಇಬ್ಬರಿಗೂ ಪರಿಚಿತ. ಆದರೆ ಇಬ್ಬರೂ ನನಗೆ ಪಾಠವನ್ನು ಬೋಧಿಸುತ್ತಿರಲಿಲ್ಲವಾದ್ದರಿಂದ ನಾನವರ ಸಾಕ್ಷಾತ್ ಶಿಷ್ಯನಾಗಿರಲಿಲ್ಲ. ಎಲ್ಲಾ ಅಧ್ಯಾಪಕರಂತೆ ಈ ಇಬ್ಬರು ಅಧ್ಯಾಪಕರೂ ನನ್ನನ್ನು ಅಕ್ಕರೆಯಿಂದ ಕಾಣುತ್ತಿದ್ದರು.

ಹಾವು ಮುಂಗುಸಿಯಂತಿದ್ದ ಪ್ರಾಧ್ಯಾಪಕರಿಬ್ಬರ ಮನೆಗಳೂ ಅಕ್ಕಪಕ್ಕದಲ್ಲಿದ್ದವು. ಬಹುಶಃ ಮನೆಯ ಗಡಿ ವಿಚಾರವಾಗಿಯೇ ಜಗಳ ತಾರಕಕ್ಕೇರಿತ್ತು. ಒಂದು ದಿನ  ಒಬ್ಬರ ಹೆಂಡತಿ-ಮಕ್ಕಳು ಊರಿನಲ್ಲಿರಲಿಲ್ಲ. ಅವರ ಮನೆಯಲ್ಲಿ ಹಾಲು ಹೆಚ್ಚಾಗುತ್ತಿತ್ತು. ಪ್ರತಿದಿನವೂ ಹಳ್ಳಿಯ ಮನೆಯೊಂದರಿಂದ ಅವರು ಹಾಲನ್ನು ಕೊಳ್ಳುತ್ತಿದ್ದುದರಿಂದ ಕಡಿಮೆ ಹಾಲನ್ನು ಕೊಳ್ಳುವುದೂ ಸಾಧ್ಯವಾಗುತ್ತಿರಲಿಲ್ಲ. (ಹೆಂಡತಿ ಮಕ್ಕಳು ಊರಿಗೆ ಹೋದಾಗ ಕಡಿಮೆ ಹಾಲನ್ನು ಕೊಂಡರೆ ಹಾಲು ಮಾರುವವರು ಹೆಚ್ಚಾದ ಹಾಲನ್ನು ಏನು ಮಾಡಬೇಕು? ಆದ್ದರಿಂದ ಪ್ರತಿದಿನ ಕೊಂಡುಕೊಳ್ಳುವಷ್ಟೇ ಹಾಲನ್ನು ಕೊಂಡುಕೊಳ್ಳುತ್ತಿದ್ದರು.) ಅವರ ಮನೆ ನನ್ನ ರೂಮಿನಿಂದ ಸುಮಾರು 1 ಕಿಲೋಮೀಟರ್ ದೂರದಲ್ಲಿತ್ತು.

ನಾನು ಮಿತ್ರರೊಂದಿಗೆ ಸೇರಿ ಅಡುಗೆ ಮಾಡಿಕೊಳ್ಳುತ್ತಿದ್ದೆ. ಇದನ್ನರಿತಿದ್ದ ಪ್ರಾಧ್ಯಾಪಕರು ಮನೆಗೆ ಹೋಗುವಾಗ ನನ್ನನ್ನು ಕರೆದರು. ಹೆಂಡತಿ ಮಕ್ಕಳು ಊರಲ್ಲಿಲ್ಲ. ಕೊಂಡುಕೊಂಡ ಹಾಲು ನನಗೆ ಹೆಚ್ಚಾಗುತ್ತದೆ. ನಿನಗೆ ಸ್ವಲ್ಪ ಕೊಡುತ್ತೇನೆ. ಗಾಡಿ ಹತ್ತು. ಮನೆಗೆ ಬಾ ಎಂದು ಕರೆದರು. ಭೋಜ್ಯವಸ್ತುಗಳನ್ನು ಉಚಿತವಾಗಿ ಕೊಡುತ್ತೇನೆಂದರೆ ಸ್ವಯಂಪಾಕಿಗಳಾದ ಬ್ರಹ್ಮಚಾರಿಗಳು ತಕ್ಷಣವೇ ಕೈಚಾಚುತ್ತಾರೆ. ಮರುಮಾತನಾಡದೇ ಉಟ್ಟಬಟ್ಟೆಯಲ್ಲೇ ಬೈಕನ್ನೇರಿದೆ.

ಬೈಕಿನಲ್ಲಿ ಹೋಗುವ ಹಾದಿಯಲ್ಲಿ ಪರಸ್ಪರರ ಜಗಳದ ವಿಚಾರವನ್ನು ಅವರೇ ಪ್ರಸ್ತಾವಿಸಿದರು. ನಮ್ಮಿಬ್ಬರ ಮಧ್ಯದಲ್ಲಿ  ಜಗಳವಿದೆ ಎಂಬ ವಿಚಾರ ನಿನಗೂ ತಿಳಿದಿದೆ. ನೀನು ನಮ್ಮ ಮನೆಗೆ ಬರುತ್ತಿದ್ದೀ ಎಂಬ ವಿಷಯದ ಬಗ್ಗೆ ಅಳುಕುವ ಅಗತ್ಯವಿಲ್ಲ.  ನನ್ನ ಮನೆಗೆ ನೀನು ಬಂದೆ ಎಂಬ ಕಾರಣಕ್ಕಾಗಿ ನಿನ್ನ ವಿಷಯದಲ್ಲಿ ಕೇಡು ಬಗೆಯುವ ಮನಸ್ಸು  ಅವರಿಗಾದರೂ ಅದು ಸಾಧ್ಯವಿಲ್ಲ. ಅಲ್ಲದೇ ಅವರು ನಿನ್ನ ವಿಷಯದ ಪ್ರಾಧ್ಯಾಪಕರೂ ಅಲ್ಲ. ಆದ್ದರಿಂದ ನೀನು ಹೆದರುವ ಅವಶ್ಯಕತೆಯಿಲ್ಲ ಎಂಬ ವಾಕ್ಯಗಳನ್ನು ನಿರಂತರವಾಗಿ ಹೇಳುತ್ತಿದ್ದರು. ನನಗಂತೂ ಎಳ್ಳಷ್ಟೂ ಹೆದರಿಕೆಯಿರಲಿಲ್ಲ. ಒಂದು ವೇಳೆ ಮನೆಯ ಅಂಗಳದಲ್ಲಿ ಮತ್ತೊಬ್ಬ ಪ್ರಾಧ್ಯಾಪಕರು ಕಂಡರೆ ಅವರ ಮನೆಗೂ ಭೇಟಿಕೊಟ್ಟು ಚಹಾ-ತಿಂಡಿಗಳನ್ನು ತಿಂದು ಬರಬಹುದು ಎಂಬ ಯೋಚನೆಯೂ ಇತ್ತು.

ಇಷ್ಟನ್ನೆಲ್ಲಾ ನನಗೆ ಬೋಧಿಸುತ್ತಿರುವಾಗ ಅವರ ಮನೆ ಬಂದೇ ಬಿಟ್ಟಿತು. ಮಳೆಗಾಲದ ದಿನವಾದ್ದರಿಂದ ಅಂಗಳದಲ್ಲಿ ಕೆಸರಿತ್ತು. ಪ್ರಾಧ್ಯಾಪಕರು ತಮ್ಮ ಬೈಕನ್ನು ನೂರು ಮೀಟರ್ ದೂರದಲ್ಲೇ ನಿಲ್ಲಿಸಿ ಮನೆಗೆ ಹೋಗುತ್ತಿದ್ದರು. ಹೀಗೆ ಹೋಗುವಾಗ ವೈರಿ ಪ್ರಾಧ್ಯಾಪಕರ ಮನೆಯ ಮುಂಭಾಗದಿಂದ ಹಾದು ಹೋಗಬೇಕು. ಇಷ್ಟು ಹೊತ್ತು ನನ್ನಲ್ಲಿ ಧೈರ್ಯ ತುಂಬಿದ ಪ್ರಾಧ್ಯಾಪಕರು ತಮ್ಮ ವೈರಿಯ ಬೈಕನ್ನು ಕಂಡಕೂಡಲೇ ಮಾತಿನ ವರಸೆಯನ್ನೇ ಬದಲಾಯಿಸಿದರು. ಇಲ್ಲಿ ನೋಡು; ಅವನ ಬೈಕ್ ಉಂಟು. ಮಂಗ ಮನೆಯಲ್ಲೇ  ಇದ್ದಾನೆ. (ಮಂಗ ಎನ್ನುವ ಸಂಬೋಧನೆ ಶತ್ರುಪ್ರಾಧ್ಯಾಪಕರಿಗೆ) ನೀನು ಇಲ್ಲಿಯೇ ನಿಲ್ಲು. ನಾನು ಹಾಲು ತಂದುಕೊಡ್ತೇನೆ ನೀನು ನನ್ನ ಮನೆಗೆ ಬಂದದ್ದು ಅವನಿಗೆ ಗೊತ್ತಾಗುವುದು ಬೇಡ ಎಂದರು. ನನಗಿಂತ ಹೆಚ್ಚು ಅವರೇ ಹೆದರಿದ್ದಾರೆ ಎಂದು ನಗು ಬಂದರೂ ನನ್ನಿಂದಾಗಿ ವಿದ್ಯಾರ್ಥಿಯೊಬ್ಬನಿಗೆ ತೊಂದರೆಯಾಗಬಾರದು ಎಂಬ ಕಾಳಜಿಯನ್ನು ಕಂಡು ಸಂತೋಷವೂ ಆಯಿತು. ತತ್ಕ್ಷಣವೇ ಅವರು ಇದ್ರೆ ನಾನ್ಯಾಕೆ ಹೆದರಬೇಕು? ನಾನು ಬರ್ತೇನೆ ಮನೆಗೇ ಹೋಗ್ವಾ ಅಂದಾಗ ಪ್ರಾಧ್ಯಾಪಕರಿಗೂ ತಮ್ಮ ಮಾತುಗಳಲ್ಲಿನ ವೈರುಧ್ಯ ಅರ್ಥವಾಯಿತು. ಹೌದು; ನೀನ್ಯಾಕೆ ಹೆದರಬೇಕು. ಬಾ ಎನ್ನುತ್ತಾ ಮನೆಗೆ ಕರೆದೊಯ್ದರು.

4 ಕಾಮೆಂಟ್‌ಗಳು:

ಶ್ರೀಮದ್ರಾಮಾಯಣೀ ಗಂಗಾ

ವಾಲ್ಮೀಕಿಗಿರಸಂಭೂತಾ ರಾಮಾಂಭೋನಿಧಿಸಂಗತಾ । ಶ್ರೀಮದ್ರಾಮಾಯಣೀ ಗಂಗಾ ಪುನಾತಿ ಭುವನತ್ರಯಮ್ ॥ ಎಂಬ ಮಾತಿನ ಮೂಲಕ ಹಿರಿಯರು ರಾಮಾಯಣವನ್ನು ಗಂಗೆಯೆಂದೇ ಕರೆದಿದ್ದಾರೆ. ರಾಮಾಯ...