ಸೋಮವಾರ, ಫೆಬ್ರವರಿ 25, 2019

ನಿಮ್ಮ ಮದುವೆಯಾಯಿತಲ್ಲ, ಅಭಿನಂದನೆಗಳು

2017-2018 ನೆಯ ಶೈಕ್ಷಣಿಕ ವರ್ಷದಲ್ಲಿ ಪಿ.ಎಚ್.ಡಿ ಕೋರ್ಸ್ ವರ್ಕ್ ನಿಮಿತ್ತವಾಗಿ ಆರು ತಿಂಗಳುಗಳ ಕಾಲ ಪ್ರಯಾಗದಲ್ಲಿ ವಾಸವಾಗಿದ್ದೆ. ಐದು ಮಂದಿ ಸ್ನೇಹಿತರ ಜೊತೆ ನಿವಾಸವಿತ್ತು. ದಕ್ಷಿಣಭಾರತದಿಂದ ಹಿಂದೀಭಾಷಾಕ್ಷೇತ್ರಕ್ಕೆ ತೆರಳಿದ್ದ ನಾವು ಹಿಂದಿಯಲ್ಲಿ ವ್ಯವಹರಿಸುವುದು ಅನಿವಾರ್ಯವಾಗಿತ್ತು. ನನ್ನೊಂದಿಗಿದ್ದ ಮಿತ್ರರಿಗಿಂತಲೂ ಚೆನ್ನಾಗಿ ಹಿಂದಿಯಲ್ಲಿ ನಾನು ವ್ಯವಹರಿಸುತ್ತಿದ್ದೆ. ಹಾಳೂರಿಗೆ ಉಳಿದವನೇ ಗೌಡ ಎಂಬಂತೆ ಅನೇಕ ಕಡೆಗಳಲ್ಲಿ ಹಿಂದಿಯಲ್ಲಿ ವ್ಯವಹರಿಸುವ ಕೆಲಸವನ್ನು ನನಗೇ ವಹಿಸುತ್ತಿದ್ದರು. ಪ್ರಯಾಗದ ಸುತ್ತಮುತ್ತಲಿನ ಪ್ರೇಕ್ಷಣೀಯಸ್ಥಳಗಳ ಸಂದರ್ಶನವನ್ನೂ ನಮ್ಮ ಕೋರ್ಸ್ ವರ್ಕ್ ನ ಸಮಯದಲ್ಲಿ ಪೂರೈಸಿದ್ದೆವು. ನನ್ನೊಂದಿಗೆ ಮುರಳೀಕೃಷ್ಣ ಎಂಬ ಗೆಳೆಯನಿದ್ದ. ಕರ್ನಾಟಕ ಮೂಲದ ಸುಬ್ರಹ್ಮಣ್ಯ ಭಾರತೀ ಕೋಣಾಲೆ ಎಂಬುವವರು ಆತನಿಗೆ ಪರಿಚಿತರಾಗಿದ್ದರು. ಅನೇಕ ವರ್ಷಗಳ ಕಾಲ ಬಿಹಾರದಲ್ಲಿ ವಾಸವಾಗಿದ್ದ ಅವರು ಉತ್ತರ ಭಾರತದಲ್ಲಿನ ಪ್ರೇಕ್ಷಣೀಯ ಸ್ಥಳಗಳ ತಿರುಗಾಟಕ್ಕೆ ನಮಗೆ ಮಾರ್ಗದರ್ಶಕರಂತಿದ್ದರು. ಚಿತ್ರಕೂಟದಲ್ಲಿ ನಮ್ಮ ವಾಸಾದಿಗಳ ವ್ಯವಸ್ಥೆಗೆ ಸಂಗಮಲಾಲ್ ಶುಕ್ಲ ಎನ್ನುವವರ ದೂರವಾಣೀ ಸಂಖ್ಯೆಯನ್ನು ನೀಡಿದ್ದರು. ಅಲ್ಲದೇ ನನ್ನ ಪರಿಚಿತರಾಗಿರುವ ಮುರಳೀಕೃಷ್ಣ ಎಂಬುವವರು ನಿಮಗೆ ದೂರವಾಣಿಕರೆಯನ್ನು ಮಾಡಲಿದ್ದಾರೆ. ಅವರಿಗೆ ಚಿತ್ರಕೂಟದಲ್ಲಿ ವ್ಯವಸ್ಥೆ ಮಾಡಿ ಎಂದು  ಸಂಗಮಲಾಲ್ ಶುಕ್ಲ ಅವರಿಗೆ ದೂರವಾಣಿ ಮಾಡಿ ಸೂಚಿಸಿದ್ದರು. ಚಿತ್ರಕೂಟಕ್ಕೆ ತೆರಳುವ ಒಂದು ದಿನದ ಮೊದಲು ಸಂಗಮಲಾಲ್ ಶುಕ್ಲ ಅವರಿಗೆ ಫೋನ್ ಮಾಡಬೇಕೆಂದು ಚಿಂತಿಸಿದೆವು. ಮೊದಲೇ ಹೇಳಿದಂತೆ ಅವರೊಂದಿಗೆ ಹಿಂದಿಯಲ್ಲಿ ಮಾತನಾಡುವ ಜವಾಬ್ದಾರಿ ನನ್ನದಾಗಿತ್ತು. ಸುಬ್ರಹ್ಮಣ್ಯ ಭಾರತೀಯವರು ಮುರಳೀಕೃಷ್ಣ ಫೋನ್ ಮಾಡುತ್ತಾನೆ ಎಂದು ಹೇಳಿರುವುದರಿಂದ ನಾನು ಫೋನ್ ಮಾಡುವುದು ಸರಿಯಲ್ಲ ಎಂದು ವಾದಿಸಿದೆ. ಆದರೂ "ನನಗೆ ಹಿಂದಿ ಅರ್ಥಮಾಡಿಕೊಳ್ಳುವುದು ಕಷ್ಟವಾಗುತ್ತದೆ. ಅಲ್ಲದೇ ಸಂಗಮಲಾಲ್ ಶುಕ್ಲ ನನ್ನ ಮುಖವನ್ನೂ ನೋಡಿಲ್ಲ. ಆದ್ದರಿಂದ ನಾನೇ ಮುರಳೀಕೃಷ್ಣ ಎಂದು ಹೇಳಿ ಮಾತನಾಡು" ಎಂದು ನನ್ನ ಮನವೊಲಿಸಿದ. ಆಪತ್ಕಾಲದಲ್ಲಿ ಯಾರಿಗೂ ತೊಂದರೆಯಾಗದಂತಹ ಸುಳ್ಳನ್ನು ನುಡಿಯುವುದು ಅಪರಾಧವೇನಲ್ಲ ಎಂದು ಭಾವಿಸಿದ ನಾನು "ನಾನೇ ಮುರಳೀಕೃಷ್ಣ" ಎಂದು ಸುಳ್ಳನ್ನಾಡಿದೆ. ಚಿತ್ರಕೂಟಕ್ಕೆ ಹೋದಾಗ ಸಂಪೂರ್ಣದಿನವನ್ನು ಅವರೊಂದಿಗೇ ಕಳೆದಿದ್ದೆವು. ಮುಖಪರಿಚಯ ಮಾಡಿಕೊಳ್ಳುವಾಗ ನಾನು ಸೂರ್ಯ ಎಂದು ನಿಜವನ್ನೇ ಹೇಳಿದ್ದೆ. ಆದರೆ ಫೋನ್ ನಲ್ಲಿ ಮಾತನಾಡುವಾಗ ನಾನು ಮುರಳೀಕೃಷ್ಣ ಎಂದು ಹೇಳುತ್ತಿದ್ದೆ. ಅವರು ನನ್ನ ಫೋನ್ ನಂಬರ್ ಅನ್ನು ಮುರಳಿಕೃಷ್ಣ ಎಂದೇ ಸೇವ್ ಮಾಡಿಕೊಂಡಿದ್ದರು. ಪ್ರಯಾಗದಿಂದ ಮರಳಿದ ನಂತರವೂ ನಾಲ್ಕೈದು ಬಾರಿ ಫೋನ್ ಮಾಡಿದ್ದರು.

 2019ರ ಫೆಬ್ರವರಿ 14 ರಂದು ಮುರಳೀಕೃಷ್ಣನ ಮದುವೆಯಾಯಿತು. ಮದುವೆಯಾಗುವ ವಿಷಯವನ್ನು ಬಹುಶಃ ಮುರಳಿಕೃಷ್ಣ ಸಂಗಮಲಾಲ್ ಶುಕ್ಲಾ ಅವರಿಗೆ ತಿಳಿಸಿದ್ದ. ಆತನ ಮದುವೆಯಾಗಿ ಒಂದೆರಡು ದಿನಗಳ ನಂತರ ಸಂಗಮಲಾಲ್ ಶುಕ್ಲ ಅವರಿಂದ ದೂರವಾಣಿ ಕರೆ ಬಂತು. ಪ್ರಯಾಗದಿಂದ ಮರಳಿದ ನಂತರ ಪ್ರತಿ ಬಾರಿ ಫೋನ್ ಮಾಡಿದಾಗಲೂ ಸಂಗಮಲಾಲ್ ಶುಕ್ಲ ನಮಸ್ಕಾರ್ ಜೀ ಕ್ಯಾ ಹಾಲ್ ಹೇ ಆಪ್ ಕಾ ಎಂದು ಸಂಭಾಷಣೆಗೆ ತೊಡಗುತ್ತಿದ್ದರು. ಮುರಳಿಜೀ ಎಂದಾಗಲೀ ಸೂರ್ಯಜೀ ಎಂದಾಗಲೀ ಸಂಬೋಧಿಸುತ್ತಿರಲ್ಲ. ಆದ್ದರಿಂದ ನನ್ನ ಫೋನ್ ನಂಬರನ್ನು ಮುರಳಿಕೃಷ್ಣ ಎಂಬ ಹೆಸರಿನಲ್ಲಿ ಸೇವ್ ಮಾಡಿದ್ದಾರೆ ಎಂಬ ವಿಚಾರ ಮರೆತು ಹೋಗಿತ್ತು. ಈ ಬಾರಿ ಫೋನ್ ಮಾಡಿದವರು ನೇರವಾಗಿ ಬಹುತ್ ಬಧಾಯೀ ಆಪ್ ಕೋಎಂದು ನುಡಿದರು. ಏಕೆಂದು ಕೇಳಿದರೆ ನಿಮ್ಮ ಊರಿನಲ್ಲಿ ಮದುವೆಗೆ ಹುಡುಗಿ ಸಿಗುವುದೇ ಕಷ್ಟ ಎಂದು ಹೇಳುತ್ತಿದ್ದಿರಿ ಈಗ ನಿಮಗೆ ಹುಡುಗಿಯೂ ಸಿಕ್ಕಿದಳು ಮದುವೆಯೂ ಆಯಿತು. ಆದ್ದರಿಂದ ಬಧಾಯೀ ಹೇಳುತ್ತಿದ್ದೇನೆ ಎಂದು ನುಡಿದರು. ನಮ್ಮೂರಿನಲ್ಲಿ ಮದುವೆಗೆ ಹೆಣ್ಣು ಸಿಗುವುದು ಕಷ್ಟ ಎಂಬ ವಿಷಯವನ್ನು ಅವರಿಗೆ ಹೇಳಿದ್ದು, ಉತ್ತರಭಾರತದ ಅನೇಕರು ದಕ್ಷಿಣ ಭಾರತಕ್ಕೆ ತಮ್ಮ ಮಗಳನ್ನು ಮದುವೆಮಾಡಿಕೊಡಲು ಬಯಸುತ್ತಾರೆ ಎಂದು ಅವರು ಹೇಳುತ್ತಿದ್ದುದೆಲ್ಲಾ ನೆನಪಾಯಿತು. ಆದರೂ ನನ್ನ ಮದುವೆ ನನಗೇ ಗೊತ್ತಿಲ್ಲದೇ ಆಗಿಹೋಯಿತೇ ಎಂದು ಕಳವಳವಾಯಿತು. ಮಾತನ್ನು ಮುಂದುವರಿಸುತ್ತಾ ಮುರಳೀಜೀ ಆಪ್ ಕೋ ಪತ್ನೀ ಕೇ ಸಾಥ್ ಏಕ್ ಬಾರ್ ಚಿತ್ರಕೂಟ್ ಆನಾ ಎಂದಾಗ ಎಲ್ಲವೂ ನೆನಪಾಗಿ ಗೊಂದಲ ದೂರವಾಯಿತು. ನಾನು ಮುರಳಿ ಅಲ್ಲ ಆತನ ಗೆಳೆಯ ಸೂರ್ಯ ಎಂದು ಹೇಳಿ ಮುರಳೀಕೃಷ್ಣನ ಫೋನ್ ನಂಬರ್ ಕಳುಹಿಸಿದೆ.


3 ಕಾಮೆಂಟ್‌ಗಳು:

ಶ್ರೀಮದ್ರಾಮಾಯಣೀ ಗಂಗಾ

ವಾಲ್ಮೀಕಿಗಿರಸಂಭೂತಾ ರಾಮಾಂಭೋನಿಧಿಸಂಗತಾ । ಶ್ರೀಮದ್ರಾಮಾಯಣೀ ಗಂಗಾ ಪುನಾತಿ ಭುವನತ್ರಯಮ್ ॥ ಎಂಬ ಮಾತಿನ ಮೂಲಕ ಹಿರಿಯರು ರಾಮಾಯಣವನ್ನು ಗಂಗೆಯೆಂದೇ ಕರೆದಿದ್ದಾರೆ. ರಾಮಾಯ...