ಬುಧವಾರ, ಫೆಬ್ರವರಿ 13, 2019

ವರ್ಕ್ ಶಾಪ್ ವರವಾದಾಗ

AttachmentsThu, Jan 24, 7:42 PM


ವಿದ್ಯಾರ್ಥಿ ಜೀವನದಲ್ಲಿ ಅನೇಕ ವರ್ಕ್ ಶಾಪ್ ಗಳಲ್ಲಿ ಭಾಗವಹಿಸುವ ಯೋಗ(?) ದೊರಕಿತ್ತು. ಅನೇಕ ವರ್ಕ್ ಶಾಪ್ ಗಳನ್ನು ನೋಡಿದ್ದರಿಂದ ವರ್ಕ್ ಶಾಪ್ ಎಂದರೆ ಭವ್ಯವಾದ ಸಭೆ, ವಿದ್ವಾಂಸರ ಪರಸ್ಪರ ಹೊಗಳಿಕೆಗಳು. ೫ ನಿಮಿಷದ ಪ್ರಾರ್ಥನೆಗೆ ೫ ದಿನಗಳ ಕಾಲ ಕಠಿಣ ಅಭ್ಯಾಸ ನಡೆಸಿ ೧೦ ನಿಮಿಷಗಳ ಕಾಲ ಶ್ರುತಿ ಇತ್ಯಾದಿಗಳನ್ನು ಸೆಟ್ ಮಾಡುವುದು, ಬಂದವರಿಗೆ ಊಟ ವಸತಿಗಳ ವ್ಯವಸ್ಥೆ, ನಡುವಿನಲ್ಲಿ ಕಾಫಿ ಚಹ ತಿಂಡಿಗಳ ಸರಬರಾಜು. ಕಾರ್ಯಶಾಲೆಯ ಕೊನೆಗೆ ಕಂಡಕಂಡವರಿಗೆಲ್ಲ ಸ್ವೀಟ್ ಹಂಚುವುದು, ಮಾರನೆಯ ದಿನ ಸಂಗೋಷ್ಠಿಯಲ್ಲಿ ಕೆಲಸ ಮಾಡಿದವರಿಗೆ ಧನ್ಯವಾದಗಳನ್ನು ಹೇಳುವುದಕ್ಕಾಗಿ ಗಂಟೆಯೊಂದನ್ನು ಪೋಲು ಮಾಡುವುದು ಮೊದಲಾದುವುಗಳೇ ನೆನಪಿಗೆ ಬರುತ್ತಿದ್ದವು. ಕಾರ್ಯಶಾಲೆಯಿಂದ  ಆದ ಪ್ರಯೋಜನವೇನು ಎಂದು ಹೇಳಿದರೆ ಉತ್ತರಿಸುವುದು ಸ್ವಲ್ಪ ಕಷ್ಟವಾಗುತ್ತಿತ್ತು.

ಅನೇಕ ದಿನಗಳ ನಂತರ ಕಾರ್ಯಶಾಲೆಯೊಂದರಲ್ಲಿ ಭಾಗವಹಿಸುವ ಅವಕಾಶ ದೊರಕಿತು. ವಿಕಿಸೋರ್ಸ್ ಎಂಬ ವಿಷಯದಲ್ಲಿ ಎರಡು ದಿನಗಳ ಸಣ್ಣ ಕಾರ್ಯಶಾಲೆಯಾಗಿತ್ತು. ಸಂಸ್ಕೃತ ಭಾರತೀ ಹಾಗೂ  CIS-A2K  ಎಂಬ ಸಂಸ್ಥೆಗಳು ಜಂಟಿಯಾಗಿ ಕಾರ್ಯಶಾಲೆಯನ್ನು ಆಯೋಜಿಸಿದ್ದವು. ೨೩-೦೧-೨೦೧೯ ಹಾಗೂ ೨೪-೦೧-೨೦೧೯ ರಂದು ವಿಕಿಸೋರ್ಸ್ ಕಾರ್ಯಶಾಲೆ ನಡೆಯಿತು. ಕಾರ್ಯಶಾಲೆಯಲ್ಲಿ ಇಂಟರ್ನೆಟ್ ಆಧಾರದಲ್ಲೇ ಕೆಲಸಗಳು ನಡೆಯುವುದರಿಂದ ಬೆಂಚು ಡೆಸ್ಕುಗಳ ಬಳಿಯಲ್ಲಿ ವಿದ್ಯುತ್ ಸಂಪರ್ಕ ಅತ್ಯವಶ್ಯವಾಗಿತ್ತು. ಕಾರ್ಯಶಾಲೆಯ ಹಿಂದಿನ ದಿನ ವಿದ್ಯುತ್ ಸಂಪರ್ಕವನ್ನು ಕಲ್ಪಿಸಲು ಇಬ್ಬರು 1 ಗಂಟೆ ಕೆಲಸ ಮಾಡಿದೆವು. (ಈ ಒಂದು ಗಂಟೆಯಲ್ಲೇ ಬ್ಯಾನರ್ ಕಟ್ಟುವ ಕೆಲಸವೂ ಮುಗಿದಿತ್ತು). ಕಾರ್ಯಶಾಲೆಯಲ್ಲಿ ಭಾಗವಹಿಸಲು ಬರುವವರೆಲ್ಲರೂ ಬೆಂಗಳೂರಿನವರೇ ಆದುದರಿಂದ ವಾಸವ್ಯವಸ್ಧೆಯನ್ನು ಕಲ್ಪಿಸುವ ಕೆಲಸವಿರಲಿಲ್ಲ. ಜಮಖಾನ ಹಾಸುವುದು, ಹೂಗುಚ್ಛ ಮಾಡುವುದು, ಹಣ್ಣು ತರುವುದು, ಶಾಲು ಮಡಿಚುವುದು, ನೇಮ್ ಪ್ಲೇಟ್ ಮಾಡುವುದು, ಪ್ರೋಗ್ರಾಮ್ ಲಿಸ್ಟ್ ಪ್ರಿಂಟ್ ತೆಗೆಯುವುದು ಮೊದಲಾದ ಯಾವುದೇ ವ್ಯರ್ಥ ಕಾರ್ಯಗಳಿರಲಿಲ್ಲ. ಕಾರ್ಯಶಾಲೆಯಲ್ಲಿ ತರಬೇತಿ ನೀಡಲು CIS-A2K ಸಂಸ್ಧೆಯಲ್ಲಿ ಇಂಡಿಕ್ ವಿಕಿಸೋರ್ಸ್ ನ ಸಂಯೋಜಕರಾಗಿ ಜವಾಬ್ದಾರಿಯನ್ನು ನಿರ್ವಹಿಸುತ್ರಿರುವ ಕೋಲ್ಕತ್ತಾದ  ಜಯಂತನಾಥ್ ಆಗಮಿಸಿದ್ದರು. ಸಂಪೂರ್ಣ ಕಾರ್ಯಶಾಲೆಯು ಅವರ ಮಾರ್ಗದರ್ಶನದಂತೆಯೇ ನಡೆಯಿತು.  ಮಧ್ಯಾಹ್ನ ಊಟ ಹಾಗೂ ಎರಡು ಬಾರಿ ಪಾನೀಯದ ವ್ಯವಸ್ಧೆಯಿದ್ದರೂ ಸುಗಮವಾಗಿ ನಡೆದುಹೋಯಿತು.   ಪಾನೀಯಕ್ಕಾಗಿ ಪ್ರತ್ಯೇಕವಾದ ವಿರಾಮವಿರಲಿಲ್ಲ. ಕಾರ್ಯಶಾಲೆಯ ಮಧ್ಯದಲ್ಲೇ ಮಾರ್ಗದರ್ಶಕರೂ ಪ್ರತಿಭಾಗಿಗಳೂ ಪಾನೀಯವನ್ನು ಕುಡಿಯುತ್ತಿದ್ದೆವು. ಮಾರ್ಗದರ್ಶಕರಂತೂ ಒಂದು ನಿಮಿಷವನ್ನೂ ಪೋಲು ಮಾಡದೇ ತಮಗೆ ಗೊತ್ತಿರುವ ಅಂಶಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದರು. ತಕ್ಷಣ ಅದರ ಪ್ರಯೋಗವನ್ನು ಮಾಡಿ ಅದರ ಪರಿಣಾಮವನ್ನು ನಾವು ಹೇಳಬೇಕಿತ್ತು. ಕಾರ್ಯಶಾಲೆಯ ಕೊನೆಯಲ್ಲಿ 5 ನಿಮಿಷಗಳಲ್ಲಿ ಮಾರ್ಗದರ್ಶಕರು ಹಾಗೂ ಪ್ರತಿಭಾಗಿಗಳು ಕಾರ್ಯಶಾಲೆಯ ಅನುಭವಗಳನ್ನು ಹಂಚಿಕೊಂಡೆವು. ಮುಖ್ಯವಾಗಿ 2 ದಿನಗಳ ಕಾಲ ಅಕ್ಷರಂನಲ್ಲಿ ನಡೆದ ಕಾರ್ಯಶಾಲೆಯಲ್ಲಿ ಅಕ್ಷರಂನ ದಿನನಿತ್ಯದ ಕೆಲಸಗಳಿಗೆ ಯಾವುದೇ ತೊಂದರೆಯಾಗಲಿಲ್ಲ.  ಅಕ್ಷರಂನಲ್ಲೇ ಕೆಲಸ ಮಾಡುವ ಅನೇಕರಿಗೆ ಕಾರ್ಯಶಾಲೆ ನಡೆಯಿತು ಎಂದು ತಿಳಿದಿರಲಿಕ್ಕೂ ಇಲ್ಲ. ಅಕ್ಷರಂನ ಹಿರಿಯರೊಬ್ಬರು ಅರ್ಧಗಂಟೆಗಳ ಕಾಲ ಕುಳಿತು ಕಾರ್ಯಶಾಲೆಯನ್ನು ಅವಲೋಕಿಸಿದರು. ಅವರ ಹೊಗಳಿಕೆಗೆ ಸಮಯವ್ಯಯವನ್ನೂ ಮಾಡಲಿಲ್ಲ. ಒಟ್ಟಿನಲ್ಲಿ ಹೇಳುವುದಾದರೆ ಕಾರ್ಯಶಾಲೆ ಎನ್ನುತ್ತಾ ದೈನಂದಿನ ಕಾರ್ಯಕಲಾಪಗಳನ್ನು ಬಿಟ್ಟು ಕುಣಿದಾಡಿ ಎರಡು ದಿನವನ್ನು ಹಾಳುಮಾಡಿದೆ ಎಂದು ವ್ಯಥೆಪಡುವ ಪರಿಸ್ಧಿತಿ ಉಂಟಾಗಲಿಲ್ಲ. ಎರಡು ದಿನಗಳ ಬೆಳಗ್ಗೆ 9.30 ರಿಂದ ಸಂಜೆ 5.30 ರ ತನಕ ದೈನಂದಿನ ಕಾರ್ಯಗಳಂತೆಯೇ ಕಾರ್ಯಶಾಲೆಯೂ ನಡೆದುಹೋಯಿತು.

ಎಲ್ಲಾ ವಿಷಯಗಳಲ್ಲೂ, ಎಲ್ಲಾ ಸಂಸ್ಧೆಗಳಲ್ಲೂ ಈ ತರಹದ ಕಾರ್ಯಶಾಲೆಗಳನ್ನು ಆಯೋಜಿಸುವುದು ಕಷ್ಟಸಾಧ್ಯವೇ. ಆದರೂ ಕೂಡಾ ಕಾರ್ಯಶಾಲೆಯಲ್ಲಿ ಕಾರ್ಯ ಸಿದ್ಧವಾಗುವಂತೆ ಕಾರ್ಯಶಾಲೆಗಳನ್ನು ನಡೆಸಿದರೆ ಭಾಗವಹಿಸಿದವರಿಗೆ ಸಂತೋಷ, ಆಯೋಜಕರಿಗೆ ತೃಪ್ತಿ ಸಿಗುವುದರಲ್ಲಿ ಅನುಮಾನವಿಲ್ಲ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಶ್ರೀಮದ್ರಾಮಾಯಣೀ ಗಂಗಾ

ವಾಲ್ಮೀಕಿಗಿರಸಂಭೂತಾ ರಾಮಾಂಭೋನಿಧಿಸಂಗತಾ । ಶ್ರೀಮದ್ರಾಮಾಯಣೀ ಗಂಗಾ ಪುನಾತಿ ಭುವನತ್ರಯಮ್ ॥ ಎಂಬ ಮಾತಿನ ಮೂಲಕ ಹಿರಿಯರು ರಾಮಾಯಣವನ್ನು ಗಂಗೆಯೆಂದೇ ಕರೆದಿದ್ದಾರೆ. ರಾಮಾಯ...