ಶುಕ್ರವಾರ, ಸೆಪ್ಟೆಂಬರ್ 11, 2026

ಪದ್ಯಬಂಧದಲ್ಲಿ ವಿನೂತನ ರಾಮಾಯಣ

 ಅವ್ಯಯ ಎಂಬ ಕಾವ್ಯನಾಮದಿಂದ ಚೇತನ್ ಅವರು ಬರೆದಿರುವಂತಹ ಪ್ರತಿಮಾಲಾರಾಮಾಯಣ ಚೇತೋಹಾರಿಯಾಗಿದೆ. ಈ ಮೊದಲು ಕನ್ನಡ ಹಾಗೂ ಸಂಸ್ಕೃತ ಭಾಷೆಗಳಲ್ಲಿ ಚೇತನ್ ಅವರ ಅನೇಕ ಬಿಡಿ ಕವಿತೆಗಳನ್ನು ಓದಿದ್ದೆ. ಎಲ್ಲವೂ ಸುಂದರವಾಗಿದ್ದವು. ವಾಣಿಜ್ಯ ಶಾಸ್ತ್ರದಲ್ಲಿ ಪಿ.ಹೆಚ್.ಡಿ ಮಹಾಪ್ರಬಂಧಕ್ಕಾಗಿ ಸಂಶೋಧನೆ ನಡೆಸುತ್ತಿರುವ ಚೇತನ್ ಲಲಿತವಾದ ಶೈಲಿಯಲ್ಲಿ ಛಂದೋಬದ್ಧವಾದ ಕಾವ್ಯಗಳನ್ನು ಬರೆಯುವುದು ವಿಶೇಷವೇ ಸರಿ. ಮುಕ್ತಕೇ ಕವಯೋನಂತಾಃ (ಬಿಡಿಗವಿತೆಗಳನ್ನು ಬರೆಯುವ ಕವಿಗಳು ಬೇಕಾದಷ್ಟು ಜನರಿದ್ದಾರೆ) ಎಂಬ ಮಾತಿನಂತೆ ಕೇವಲ ಮುಕ್ತಕಗಳನ್ನೇ ಬರೆಯುತ್ತಿದ್ದರೆ ಚೇತನ್ ಅವರ ಪ್ರತಿಭೆಯನ್ನು ಕಂಡು ಅಷ್ಟೇನೂ ಬೆರಗಾಗುತ್ತಿರಲಿಲ್ಲ. ೧೪೨ ಪದ್ಯಗಳಿಂದ ಕೂಡಿದ ಪ್ರತಿಮಾಲಾ ರಾಮಾಯಣ ಎಂಬ ಖಂಡಕಾವ್ಯವನ್ನು ಓದಿದಾಗ ಕವಿಪ್ರತಿಭೆಯ ಕುರಿತಾಗಿ ಅತಿಶಯವಾದ ಮೆಚ್ಚುಗೆ ಮೂಡುವುದರಲ್ಲಿ ಸಂಶಯವಿಲ್ಲ.

ಪ್ರತಿಮಾಲೆಯೆಂದರೆ ಅಂತ್ಯಾಕ್ಷರಿ. ಈ ಆಟದಲ್ಲಿ ಸ್ಪರ್ಧಿಗಳು ಸಾಲಾಗಿ ಅಥವಾ ಎರಡು ತಂಡಗಳಾಗಿ ಕುಳಿತುಕೊಳ್ಳುತ್ತಾರೆ. ಪದ್ಯದ ಕೊನೆಯ ಅಕ್ಷರದಿಂದ ಮುಂದಿನ ಸ್ಪರ್ಧಿ ಪದ್ಯವನ್ನು ಆರಂಭಿಸಬೇಕು. ಸಿನೆಮಾ ಹಾಡುಗಳ ಅಂತ್ಯಾಕ್ಷರಿ ಆಟ ಪ್ರಸಿದ್ಧವಾಗಿದೆ. ಸಂಸ್ಕೃತದಲ್ಲಿ ಶ್ಲೋಕಗಳನ್ನು ಹೇಳುವುದರ ಮೂಲಕವೂ ಪ್ರತಿಮಾಲಾ ಕ್ರೀಡೆ ನಡೆಯುತ್ತದೆ.

ಸಮಗ್ರ ರಾಮಾಯಣದ ಕತೆಯನ್ನು ಈ ರೀತಿಯ ಶ್ಲೋಕಗಳಿಂದ ಕಟ್ಟಿಕೊಟ್ಟದ್ದು ಪ್ರತಿಮಾಲಾರಾಮಾಯಣದ ವೈಶಿಷ್ಟ್ಯ. ಅಂದರೆ ಮೊದಲನೆಯ ಶ್ಲೋಕ ಧಾರೆ ಎಂದು ರೆ ಅಕ್ಷರದಿಂದ ಅಂತ್ಯವಾದರೆ, ಎರಡನೆಯ ಶ್ಲೋಕವನ್ನು ರ್ ಎಂಬ ವ್ಯಂಜನದಿಂದ ರಾಯನಾಗಿದ್ದ ಎಂದು ಆರಂಭಿಸಲಾಗಿದೆ. ಎರಡನೆಯ ಶ್ಲೋಕ ರವಿಕುಲಜಗೆಎಂದು ಗೆ ಅಕ್ಷರದಿಂದ ಅಂತ್ಯವಾದ್ದರಿಂದ ಮೂರನೆಯ ಶ್ಲೋಕವನ್ನು ಗ್ ಎಂಬ ವ್ಯಂಜನದಿಂದ ಗುಡಿಗೆ ಗೋಪುರವುಂಟು ಎಂದು ಆರಂಭಿಸಿದ್ದಾರೆ. ಹೀಗೆ ಸಮಗ್ರ ಕಾವ್ಯದಲ್ಲಿ ಹಿಂದಿನ ಪದ್ಯದ ಕೊನೆಯ ಅಕ್ಷರದಿಂದ ಮುಂದಿನ ಪದ್ಯವನ್ನು ಆರಂಭಿಸಲಾಗಿದೆ. ಕಾವ್ಯದ ಮುನ್ನುಡಿಯಲ್ಲಿ ಹೇಳಿದಂತೆ ಡಿವಿಜಿಯವರ ಕಗ್ಗದ ಶೈಲಿ ಕವಿಯನ್ನು ಆಕರ್ಷಿಸಿದೆ. ಆದ್ದರಿಂದ ಡಿವಿಜಿಯವರು ಬಳಸಿದ ಪಂಚಮಾತ್ರಾಗತಿಯಲ್ಲಿಯೇ ಈ ಕಾವ್ಯವನ್ನು ಬರೆಯಲಾಗಿದೆ. ಆದಿಪ್ರಾಸದ ನಿಯಮವನ್ನು ಪಾಲಿಸಲಾಗಿದೆ. ಶ್ಲೋಕಗಳಿಗೆ ಗದ್ಯರೂಪದ ತಾತ್ಪರ್ಯವನ್ನೂ ಪ್ರಕಟಿಸಲಾಗಿದೆ.

ಛಂದಸ್ಸು ಹಾಗೂ ಆರಂಭಿಕ ಅಕ್ಷರಗಳ  ನಿಬಂಧನೆಯನ್ನು ಹಾಕಿಕೊಂಡ ನಂತರ ಮನಸ್ಸಿಗೆ ತೋಚಿದಂತೆ ಗೀಚಿ ಕಾವ್ಯವನ್ನು ಪೂರ್ತಿಗೊಳಿಸುವ ಜಾಯಮಾನ ಚೇತನ್ ಅವರದ್ದಲ್ಲ. ಈ ಕಾವ್ಯದ ಪ್ರತಿ ಪದ್ಯವೂ ಸುಂದರವಾಗಿದೆ. ರಾಮಾಯಣದ ಕಥಾವಸ್ತು ನಮಗೆ ಸುಪರಿಚಿತವಾದುದರಿಂದ ಕತೆಯನ್ನು ತಿಳಿದುಕೊಳ್ಳಲು ಈ ಗ್ರಂಥವನ್ನು ಓದಬೇಕಾಗಿಲ್ಲ. ಸಮಗ್ರ ರಾಮಾಯಣದ ಕತೆ ಶಾಂತವಾಗಿ ಹರಿಯುವ ನದಿಯಂತೆ ಈ ಕಾವ್ಯದಲ್ಲಿ ಹರಿಯುತ್ತದೆ. ಎಲ್ಲಿಯೂ ಹಠಾತ್ತಾದ ವೇಗವಿಲ್ಲ. ಅಥವಾ ಅತಿವಿಸ್ತರವಾದ ವರ್ಣನೆಗಳಿಲ್ಲ. ಪ್ರತಿ ಪುಟದಲ್ಲೂ ಅಳಿಲು ಹಾಗೂ ರಾಮಮಂದಿರದ ಚಿತ್ರಗಳನ್ನು ಜೋಡಿಸಿ ರಚಿಸಿದ ಪುಟವಿನ್ಯಾಸ ಅಳಿಲುಸೇವೆಯನ್ನೂ ರಾಮಮಂದಿರನಿರ್ಮಾಣವನ್ನೂ ಸೂಚ್ಯವಾಗಿ ಹೇಳುತ್ತದೆ. 

ಪ್ರಾಸನಿರ್ವಹಣೆಯನ್ನೂ ತ್ರಾಸದಿಂದ ಮಾಡಿದಂತೆ ತೋರುವುದಿಲ್ಲ. ಸಹಜವಾದ ಕನ್ನಡ-ಸಂಸ್ಕೃತ ಪದಗಳು ಪ್ರಾಸಸ್ಥಾನದಲ್ಲಿ ಚಮತ್ಕಾರವನ್ನು ಹೆಚ್ಚಿಸಿವೆ. ಅಲ್ಲಲ್ಲಿ ಬಳಸಿದ ಉಪಮೆಗಳಂತೂ ನಿಜಕ್ಕೂ ರಸಾಸ್ವಾದವನ್ನು ಉತ್ತುಂಗಕ್ಕೆ ಒಯ್ಯುತ್ತವೆ. ಉದಾಹರಣೆಗೆ ವನವಾಸಕ್ಕೆ ಹೊರಟ ರಾಮನೊಂದಿಗೆ ಸೀತೆ-ಲಕ್ಷ್ಮಣರೂ ಹೊರಟು ನಿಂತರು ಎಂಬುವುದರ ವರ್ಣನೆ ಹೀಗಿದೆ. –

ಕಾಕುತ್ಸ್ಥನನು ಸೇರಿದರು ಸೀತೆ ಲಕ್ಷ್ಮಣರು ಸಾಕೇತರವಿಗರುಣಸಂಧ್ಯೆಯರ ಹಾಗೆ

ಸೂರ್ಯನನ್ನು ಸಂಧ್ಯೆ ಹಾಗೂ ಅರುಣರು ಸೇರಿದಂತೆ ರಾಮನನ್ನು ಸೀತೆ ಹಾಗೂ ಲಕ್ಷ್ಮಣರು ಸೇರಿದರು ಎಂಬರ್ಥ.

 ಅಂತೆಯೇ ರಾವಣನ ಹತ್ತು ತಲೆಗಳ ವರ್ಣನೆ-

ಗರಳತರುವಿನ ರೆಂಬೆಗಳು ಹಬ್ಬಿದಂತೆ ದಶ- | -ಶಿರಗಳಿದ್ದವು ತನ್ನ ಭೀಷಣಾಕೃತಿಗೆ.

ವಿಷವೃಕ್ಷದ ರೆಂಬೆಗಳಂತೆ ರಾವಣನ ತಲೆಗಳಿದ್ದವು ಎಂಬುವುದು ತಾತ್ಪರ್ಯ.

ಇಂತಹ ಹತ್ತಾರು ಉಪಮೆಗಳನ್ನು ಕಾವ್ಯದಲ್ಲಿ ಕಾಣಬಹುದು.

ಪ್ರಾಸ, ಪ್ರತಿಮಾಲೆ, ಛಂದಸ್ಸು ಮುಂತಾದ ನಿಯಮಗಳನ್ನನುಸರಿಸಿ ಬರೆದರೆ ಪದ್ಯಗಳು ಕ್ಲಿಷ್ಟವಾಗಿ ಸಾಮಾನ್ಯರಿಗೆ ಅರ್ಥವಾಗುವುದಿಲ್ಲ ಎಂಬ ಭ್ರಾಂತಿ ಅನೇಕರಿಗಿದೆ. ಕೆಲವು ಕವಿಗಳ ರಚನೆಯಗಳನ್ನು ನೋಡಿದಾಗ ಅದು ನಿಜ ಎಂದೆನಿಸುವುದೂ ಇದೆ . ಸುಂದರವಾದ ವಿಷಯವನ್ನು, ಸುಂದರವಾದ ವರ್ಣನೆಯೊಂದಿಗೆ ಪ್ರಾಸ-ಛಂದಸ್ಸುಗಳಿಗನುಸಾರವಾಗಿ ಹೇಳಿದಾಗ ಬಂಗಾರದ ಹೂವಿಗೆ ಸುವಾಸನೆ ಮೂಡಿದಂತಾಗುತ್ತದೆ. ಈ ನಿಟ್ಟಿನಲ್ಲಿ ಕಾವ್ಯದ ಪದ್ಯಗಳನ್ನು ಗಮನಿಸಬಹುದು.

ವಿಭೀಷಣ ರಾಮನನ್ನು ಸೇರಿದ ಪ್ರಸಂಗ -

ಲತೆಯ ಸೆರೆಯನು ಬಿಡಿಸಿಕೊಂಡ ಸುಮವೊಂದದಕೆ

ಹಿತವೆನಿಪ ನೆಲೆಯೊಂದನರಸಿದಂತೆ

ಶ್ರಿತನಾಗಿಯಾ ವಿಭೀಷಣ ನಿಂತ ರಾಮನಿಗೆ

ಜೊತೆಯಾಗಿ ಜನಕಜಾತೆಯ ವಿಮೋಚನೆಕೆ

ರಾಮನು ಹನುಮಂತನನ್ನು ಸಂಧಿಸಿದ ಪ್ರಸಂಗ -

ಜಲಧಿ ಜಲಧಿಯ ಮುಂದೆ ಗಗನ ಗಗನದ ಮುಂದೆ

ಮಲೆಗೆದುರುಮಲೆಯವೋಲೆದುರಾದರವರು

ಸಲೆ ಮುಕುರವೆರಡೆದುರು ಬರಲಪರಿಮಿತಬಿಂಬ

ಗಳು ಮೂಡುವಂತಿತ್ತವರ ಕಂಗಳು

ಈ ಕೃತಿಯನ್ನು ನಾಡಿನ ಪ್ರಸಿದ್ಧ ವಿದ್ವಾಂಸರಾದ ಶತಾವಧಾನಿ ಆರ್ ಗಣೇಶ್ ಹಾಗೂ ಡಾ. ರಾಮಕೃಷ್ಣ ಪೆಜತ್ತಾಯರು ಪ್ರಕಾಶನಕ್ಕೆ ಮೊದಲು ಪರಿಶೀಲಿಸಿ ಸೂಕ್ತವಾದ ತಿದ್ದುಪಡಿಗಳನ್ನು ಸೂಚಿಸಿದ್ದಾರೆ ಎಂದು ಕವಿ ಕೃತಜ್ಞತಾಪೂರ್ವಕವಾಗಿ ನುಡಿದಿದ್ದಾರೆ. ಕೇಶವಚಂದ್ರ, ಹೆದ್ದಾರಿ ರವಿಕುಮಾರ್, ಚಂದನ್ ಮುಂತಾದ ಕಾವ್ಯಾಸಕ್ತರೂ ಈ ಕಾವ್ಯವನ್ನು ಪರಿಶೀಲಿಸಿದ್ದಾರೆ. ಎಲ್ಲ ನೂರನಲವತ್ತೈದು ಪದ್ಯಗಳಲ್ಲೂ ರಸವತ್ತಾದ ಭಾವವಿದೆ, ರಮಣೀಯವಾದ ಪ್ರಾಸವಿದೆ, ಸುಂದರವಾದ ಅಲಂಕಾರವಿದೆ. ಪ್ರತಿಮಾಲೆಯನ್ನು ಪರೀಕ್ಷಿಸಿದರಷ್ಟ್ಟೇ ಪ್ರತಿಮಾಲಾಕ್ರಮದಲ್ಲಿ ಈ ಕಾವ್ಯವಿದೆ ಎಂಬುವುದು ತಿಳಿದು ಬರುತ್ತದೆಯೇ ಹೊರತಾಗಿ ಪ್ರತಿಮಾಲೆಯನ್ನು ಬಲವಾಗಿ ತುರುಕಿಸಿದ್ದು ಕಂಡುಬಂದಿಲ್ಲ. ಸಹೃದಯರು ಈ ಕಾವ್ಯವನ್ನು ಓದಿದಾಗ ವಿಶಿಷ್ಟ ಅನುಭೂತಿ ಪಡೆಯುವುದರಲ್ಲಿ ಸಂದೇಹವಿಲ್ಲ.

ಆಸಕ್ತರು ಗೂಗಲ್ ಪ್ಲೇ ಬುಕ್ ನಲ್ಲಿ  ಗ್ರಂಥವನ್ನು ಓದಬಹುದು. ಲಿಂಕ್ –

https://play.google.com/store/books/details?id=TYj1EQAAQBAJ   

ವಾಚಕರು ಅನಿಸಿಕೆಗಳನ್ನು ಲೇಖಕರಿಗೆ ತಿಳಿಸಲು ಇಮೇಲ್ ವಿಳಾಸ - chetansridu@gmail.com

1 ಕಾಮೆಂಟ್‌:

ಪದ್ಯಬಂಧದಲ್ಲಿ ವಿನೂತನ ರಾಮಾಯಣ

  ‘ ಅವ್ಯಯ ’ ಎಂಬ ಕಾವ್ಯನಾಮದಿಂದ ಚೇತನ್ ಅವರು ಬರೆದಿರುವಂತಹ ಪ್ರತಿಮಾಲಾರಾಮಾಯಣ ಚೇತೋಹಾರಿಯಾಗಿದೆ. ಈ ಮೊದಲು ಕನ್ನಡ ಹಾಗೂ ಸಂಸ್ಕೃತ ಭಾಷೆಗಳಲ್ಲಿ ಚೇತನ್ ಅವರ ಅನೇಕ ಬಿ...