ಬಸ್ಸು ಎಂದಾಕ್ಷಣ ಕಣ್ಣಿಗೆ ಬರುವ ಚಿತ್ರ ಸಹಕಾರ ಸಾರಿಗೆಯದ್ದು. ಇದಕ್ಕೆ ಕಾರಣವೂ ಇದೆ. ನಾನು ಹುಟ್ಟಿ ಹತ್ತನೆಯ ತರಗತಿಯವರೆಗೂ ಶಿಕ್ಷಣವನ್ನು ಪಡೆದದ್ದು ದಕ್ಷಿಣಕನ್ನಡದ ಕುಗ್ರಾಮದಲ್ಲಿ. ಇಲ್ಲಿ ಸರಕಾರಿ ಬಸ್ಸುಗಳನ್ನು ಕಂಡದ್ದೇ ಅಪರೂಪ. ಅನೇಕ ಖಾಸಗಿ ಬಸ್ಸುಗಳು ಊರಿಗೆ ಬರುತ್ತಿದ್ದರೂ ಒಂದದರ ಬಣ್ಣ, ಆಕಾರ, ಶಬ್ದಗಳು ವಿಭಿನ್ನವಾಗಿರುತ್ತಿದ್ದವು. ಹತ್ತನೆಯ ತರಗತಿಯನ್ನು ಮುಗಿಸಿ ಶೃಂಗೇರಿಗೆ ಹೋದಾಗ ಸರಕಾರಿ ಬಸ್ಸುಗಳೊಂದಿಗೆ ಇತರೆ ಖಾಸಗಿ ಬಸ್ಸುಗಳೊಂದಿಗೆ ಕಾಣಿಸಿದ್ದು ಸಹಕಾರಸಾರಿಗೆ ಬಸ್ಸುಗಳು. ಇತರೆ ಬಸ್ಸುಗಳಿದ್ದರೂ ಶೃಂಗೇರಿ ಅಥವಾ ಕೊಪ್ಪದ ಬಸ್ಟಾಂಡ್ ಇದು ಎಂಬ ಭಾವ ಬರುವುದು ಸಹಕಾರ ಸಾರಿಗೆ ಬಸ್ಸುಗಳನ್ನು ಕಂಡಾಗಲೇ. ಎಲ್ಲಾ ಬಸ್ಸುಗಳೂ ಹಸಿರು ಬಣ್ಣದಿಂದ ಕಂಗೊಳಿಸುತ್ತಿದ್ದವು. ಮಲೆನಾಡಿನ ಕಾಡುಗಳ ಹಸಿರಿನ ಮಧ್ಯದಲ್ಲಿ ದೂರದಿಂದ ಬರುತ್ತಿರುವ ಹಸಿರುಬಣ್ಣದ ಸಹಕಾರಸಾರಿಗೆಯನ್ನು ಕಾಣುವುದೇ ಕಣ್ಣಿಗೊಂದು ಹಬ್ಬ.
ಮಲೆನಾಡು ನಿವಾಸಿಗಳಿಗೆ ಸಹಕಾರ ಸಾರಿಗೆಯೊಂದಿಗೆ ಭಾವನಾತ್ಮಕವಾದ ಸಂಬಂಧವಿದೆ. ಹೆಸರು ಸಹಕಾರ ಸಾರಿಗೆ ಎಂದಾಗಿದ್ದರೂ ಜನರ ಬಾಯಿಯಲ್ಲಿ ಸಾರಿಗೆ ಎಂದೇ ಪ್ರಸಿದ್ಧ. ಸಾರಿಗೆಯ ಬಸ್ಸುಗಳಲ್ಲಿ ವಿದ್ಯಾರ್ಥಿಗಳಿಗೆ ಪಾಸ್ ನೀಡುವ ಮೂಲಕ ಅರ್ಧದರದಲ್ಲಿ ಕಾಲೇಜಿಗೆ ಹೋಗಲು ಅನುಕೂಲ ಕಲ್ಪಿಸಿದ್ದರು. ಅನೇಕ ಉದ್ಯೋಗಿಗಳೂ ರಿಯಾಯಿತಿ ದರದಲ್ಲಿ ಬಸ್ಸುಗಳಲ್ಲಿ ಓಡಾಡುತ್ತಿದ್ದರು. ಸಹಕಾರ ಸಾರಿಗೆ ಆರ್ಥಿಗ ನಷ್ಟಕ್ಕೊಳಗಾಗಿ ತನ್ನ ಸೇವೆಯನ್ನು ನಿಲ್ಲಿಸಿದೆ ಎಂಬ ಸುದ್ದಿಯನ್ನು ಕೇಳಿದ ತಕ್ಷಣ ನರನಾಡಿಗಳಲ್ಲಿ ಸಂಚರಿಸುತ್ತಿದ್ದ ರಕ್ತಸಂಚಾರವೇ ನಿಂತಂತೆ ಅನೇಕರಿಗೆ ಅನುಭವವಾಗಿದ್ದರೆ ವಿಶೇಷವೇನಿಲ್ಲ.
ಶೃಂಗೇರಿಯಿಂದ ಮೂರು ಕಿಲೋಮೀಟರ್ ದೂರದಲ್ಲಿರುವ ನಮ್ಮ ವಿದ್ಯಾಲಯಕ್ಕೆ ಪ್ರತಿದಿನ ಮಧ್ಯಾಹ್ನ ಶ್ರೀಮಠದ ಪ್ರಸಾದ ಬರುತ್ತಿತ್ತು. ಭಾನುವಾರ ಹಾಗೂ ರಜಾದಿನಗಳಲ್ಲಿ ಪ್ರಸಾದವನ್ನು ಕಳುಹಿಸುವುದಿಲ್ಲ. ಮಧ್ಯಾಹ್ನದ ವೇಳೆಯಲ್ಲಿ ಊಟಕ್ಕಾಗಿ ಹೋಗುವ ವೇಳೆಯಲ್ಲಿ ಆಶ್ರಯಿಸಿದ್ದು ಇದೇ ಸಹಕಾರ ಸಾರಿಗೆ ಬಸ್ಸುಗಳನ್ನು. ರಜಾದಿನವಾದರೂ ಅನೇಕ ನಿರ್ವಾಹಕರು ಮರುಮಾತಿಲ್ಲದೆ ಅರ್ಧದರದಲ್ಲಿ ಪ್ರಯಾಣಿಸಲು ಅನುಮತಿಸುತ್ತಿದ್ದರು. (ಕೆಲವು ಏಜೆಂಟ್ ಗಳು ಪೀಡಿಸಿದ್ದೂ ಇದೆ. ಆದರೂ ಹತ್ತು ನಿಮಿಷ ಜಗಳವಾಡಿ ಎರಡು ರೂಪಾಯಿಗಳ ರಿಯಾಯಿತಿಯನ್ನು ಪಡೆದೇ ತೀರುತ್ತಿದ್ದೆವು.) "ಈ ಮಕ್ಳದ್ದೊಂದು ಉಪದ್ರ" ಎಂದು ಹಲುಬುತ್ತಿದ್ದರೂ ಪ್ರತಿವರ್ಷವೂ ಪಾಸ್ ನೀಡಿ ರಿಯಾಯಿತಿದರದಲ್ಲಿ ಪ್ರಯಾಣಕ್ಕೆ ಅನುಕೂಲ ಮಾಡುಕೊಡುತ್ತಿದ್ದರು.

ಸುಮಾರು ಒಂದು ವರ್ಷದ ಕಾಲ ವಾರದಲ್ಲೆರಡು ದಿನ ಎನ್. ಆರ್ ಪುರಕ್ಕೆ ಸಂಸ್ಕೃತ ತರಗತಿಗಳನ್ನು ನಡೆಸಲು ಹೋಗುತ್ತಿದ್ದಾಗ ಆಧಾರವಾದದ್ದು ಇದೇ ಸಹಕಾರ ಸಾರಿಗೆ. ಮಟ ಮಟ ಮಧ್ಯಾಹ್ನ ಶೃಂಗೇರಿಯ ಶಾರದಾಪ್ರಸಾದವನ್ನುಂಡು ಸಹಕಾರ ಸಾರಿಗೆಯ ಕಿಟಕಿಯ ಬದಿಯ ಸೀಟಿಗಂಟಿಸಿರುವ ವಜ್ರಾಕೃತಿಯ ದಿಂಬಿಗೆ ತಲೆಯನ್ನಾನಿಸಿ ಮಲಗಿದರೆ ಸುಷುಪ್ತಿಗೇ ಹೋಗುತ್ತಿದ್ದೆ. ಮಲೆನಾಡಿನ ರಸ್ತೆಯ ತಿರುವು ಮುರುವುಗಳಿಂದಲೂ ನಿದ್ದೆಯನ್ನು ಮುರಿಯಲು ಸಾಧ್ಯವಾಗುತ್ತಿರಲಿಲ್ಲ.
ಕೊಪ್ಪದಿಂದ ಅಗಳಗಂಡಿ ಮಾರ್ಗವಾಗಿ ಶೃಂಗೇರಿಗೆ ಬರುವ ದಿನಾಂತ್ಯದ ಕೊನೆಯ ಸಹಕಾರ ಸಾರಿಗೆಯಂತೂ ವಿಶಿಷ್ಟಾನುಭವಗಳ ಆಗರ. ಪ್ರತಿದಿನವೂ ವಿಭಿನ್ನ ಕಾರಣಗಳಿಗಾಗಿ ಪೇಟೆಗೆ ಬಂದು ಹಿಂದಿರುಗುವವರ ಹಿಂಡೇ ಬಸ್ಸಿನಲ್ಲಿರುತ್ತಿತ್ತು. ಎಲ್ಲರೂ ಪ್ರತಿದಿನವೂ ಪ್ರಯಾಣಿಸುವ ಪ್ರಯಾಣಿಕರಾದ್ದರಿಂದ ಮನೆಯ ಆತ್ಮೀಯ ವಾತಾವರಣ ಆ ಬಸ್ಸಿನಲ್ಲಿರುತ್ತಿತ್ತು. ಸಹಕಾರ ಸಾರಿಗೆ ತನ್ನ ಸಂಚಾರವನ್ನು ನಿಲ್ಲಿಸಿದಾಗ ಈ ಬಸ್ಸಿನಲ್ಲಿ ಪ್ರಯಾಣಿಸುವ ಅನೇಕರಿಗೆ ಸೂರನ್ನು ಕಳೆದುಕೊಂಡು ಸಂತ್ರಸ್ತರಾದ ಅನುಭವವಾದರೆ ವಿಶೇಷವೇನಲ್ಲ.
ಸಹಕಾರ ಸಾರಿಗೆಯಲ್ಲಿ ರಶ್ ಹೆಚ್ಚಿದ್ದಾಗ ಹಣ ನೀಡದೇ ಪ್ರಯಾಣಿಸುವುದರಲ್ಲಿ ವಿಲಕ್ಷಣ ಆನಂದವಿತ್ತು. ಸಹಕಾರ ಸಾರಿಗೆ ಗ್ರಾಮಾಂತರ ಪ್ರದೇಶಗಳಲ್ಲಿ ತೀರಾ ಹದಗೆಟ್ಟಿರುವ ರಸ್ತೆಗಳಲ್ಲಿ ಹೋಗಬೇಕಾದುದರಿಂದ ಕೆಲವು ಬಸ್ಸುಗಳ ಸ್ಧಿತಿ ಬಹಳವಾಗಿ ಹದಗೆಟ್ಟಿತ್ತು. "ಈ ಬಸ್ಸಿನಲ್ಲಿ ಹಾರ್ನ್ ಒಂದನ್ನು ಬಿಟ್ಟು ಉಳಿದೆಲ್ಲಾ ಭಾಗಗಳೂ ಶಬ್ದ ಮಾಡುತ್ತವೆ" ಎನ್ನುತ್ತಾ ಅಪಹಾಸ್ಯ ಮಾಡುವುದರಲ್ಲೂ ಸಂತೋಷವಿತ್ತು. ಆದರೆ ಇಂತಹ ಕ್ಷುಲ್ಲಕ ಕ್ಷಣಿಕ ಆನಂದಗಳಿಗಿಂತ ಬಸ್ಸಿನಲ್ಲಿ ಪ್ರಯಾಣಮಾಡುವ ಆನಂದವೇ ದೊಡ್ಡದು ಎಂಬುವುದು ಬಸ್ ಸೇವೆ ಸ್ಥಗಿತವಾದಾಗ ಆಗುವ ದುಃಖದಿಂದ ಅರಿವಾಗುತ್ತದೆ. ಮತ್ತೊಮ್ಮೆ ಮಲೆನಾಡಿನ ಜನರ ಪ್ರಾರ್ಥನೆಯಿಂದಾಗಿ ಈ ಬಸ್ಸಿನ ಸೇವೆ ಆರಂಭವಾಗಲಿ ಎಂಬ ನಿವೇದನೆಯನ್ನು ಭಗವಂತನಲ್ಲಿ ಮಾಡುವುದನ್ನು ಬಿಟ್ಟು ಮತ್ತೇನನ್ನೂ ಮಾಡುವುದು ಸಾಧ್ಯವಿಲ್ಲ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ