“ಹೇಳುವುದು
ಅರ್ಥವಾಗದಿದ್ದರೂ ಶ್ರೇಷ್ಠ ವ್ಯಕ್ತಿಗಳ ಮಾತುಗಳನ್ನೂ ಶ್ರೇಷ್ಠ ವಿಚಾರಗಳನ್ನೂ ಕೇಳುತ್ತಿರಬೇಕು.
ಅದರ ಪ್ರಯೋಜನ ಇಂದಲ್ಲದಿದ್ದರೂ ಯಾವಾಗಾದರೂ ಖಂಡಿತವಾಗಿ ಆಗಿಯೇ ಆಗುತ್ತದೆ”. ಅನೇಕ ಬಾರಿ ಹೌದೆಂದೆನಿಸಿದ ಪ್ರೊ. ವೆಂಪಟೀ
ಕುಟುಂಬಶಾಸ್ತ್ರಿಗಳು ಯಾವಾಗಲೂ ಹೇಳುತ್ತಿದ್ದ ಮಾತು.
ಸಂಸ್ಕೃತ
ಕ್ಷೇತ್ರದಲ್ಲಿ ಆಗಷ್ಟೇ ಅಂಬೆಗಾಲಿಡಲು ಪ್ರಾರಂಭಿಸಿದ್ದೆ. ವಿದ್ಯಾಪೀಠದಲ್ಲಿ ವಿದ್ಯಾರ್ಥಿಗಳ
ಜ್ಞಾನವರ್ಧನೆಗಾಗಿ ವಿವಿಧ ಕಾರ್ಯಕ್ರಮಗಳು ನಡೆಯುತ್ತಿದ್ದವು. ಕಲಿತ ವಿಷಯಗಳನ್ನು ಸಭೆಯಲ್ಲಿ
ಪ್ರಸ್ತುತಿಪಡಿಸುವ ಧೈರ್ಯ ವಿದ್ಯಾರ್ಥಿಗಳಿಗಿರಬೇಕು. ಅಂತೆಯೇ ವಿಷಯಗಳನ್ನು ಪ್ರಸ್ತುತಪಡಿಸುವ
ಶೈಲಿಯೂ ಆಕರ್ಷಕವಾಗಿರಬೇಕು ಎಂಬ ದಿಸೆಯಲ್ಲಿ ಅನೇಕ ಸಭೆಗಳು ನಡೆಯುತ್ತಿದ್ದವು. ಪ್ರತೀ ವಾರವೂ
ವಾಗ್ವರ್ಧಿನೀ ಎಂಬ ಸಭೆಯಲ್ಲಿ ವಿದ್ಯಾರ್ಥಿಗಳು ಐದು ನಿಮಿಷಗಳ ಕಾಲ ತಾವು ಅಭ್ಯಸಿಸಿದ
ಯಾವುದಾದರೊಂದು ವಿಷಯವನ್ನು ಪ್ರಸ್ತುತಪಡಿಸಬೇಕಾಗಿತ್ತು. ತದನಂತರ ಪ್ರಸ್ತುತಿಪಡಿಸಿದ
ವಿಷಯಗಳನ್ನಾಧರಿಸಿ ಅಧ್ಯಾಪಕರು ಪ್ರಶ್ನೆಗಳನ್ನು ಕೇಳುತ್ತಿದ್ದರು. ವಿದ್ಯಾರ್ಥಿಗಳು ಸಮರ್ಪಕವಾಗಿ
ನಿರ್ಭೀತಿಯಿಂದ ಉತ್ತರಿಸುವಲ್ಲಿ ಪ್ರೇರಣೆಯನ್ನೂ ನೀಡುತ್ತಿದ್ದರು. ಇದನ್ನು ಹೊರತುಪಡಿಸಿ
ತಿಂಗಳಿಗೆ ಎರಡು ಸಭೆಗಳು ನಡೆಯುತ್ತಿದ್ದವು. ಅದರಲ್ಲೊಂದು ಅಧ್ಯಾಪಕವಾಕ್ಯಾರ್ಥಪರಿಷತ್ತಿನ ಸಭೆ.
ಈ ಸಭೆಯಲ್ಲಿ ಅಧ್ಯಾಪಕರು ಇಪ್ಪತ್ತು ನಿಮಿಷಗಳ ಕಾಲ ಯಾವುದಾದರೊಂದು ವಿಷಯವನ್ನು
ನಿರೂಪಿಸುತ್ತಿದ್ದರು. ತದನಂತರ ಪ್ರಶ್ನೋತ್ತರವೂ ನಡೆಯುತ್ತಿತ್ತು. ಮಗದೊಂದು ಸಭೆಯೆಂದರೆ
ಶಾರದಾವಿಶಿಷ್ಟವ್ಯಾಖ್ಯಾನಮಾಲಾ ಸಭೆ. ಈ ಸಭೆಯಲ್ಲಿ ದೇಶದಲ್ಲೇ ಖ್ಯಾತನಾಮರಾದ ವಿದ್ವಾಂಸರೊಬ್ಬರು
ಬಂದು ಒಂದು ಗಂಟೆಯ ಅವಧಿಯಲ್ಲಿ ಯಾವುದಾರರೂ ಒಂದು ವಿಷಯವನ್ನು ಮಂಡಿಸುತ್ತಿದ್ದರು.
ಹೀಗೆ
ಶಾರದಾವಿಶಿಷ್ಟವ್ಯಾಖ್ಯಾನಮಾಲೆಯಲ್ಲಿ ವಿಷಯವನ್ನು ಮಂಡಿಸಲು ಬರುವವರೆಲ್ಲಾ ಶ್ರೇಷ್ಠ
ವಿದ್ವಾಂಸರೇ. ಸಭೆಯಲ್ಲಿ ಈಗಷ್ಟೇ ವಿದ್ಯಾಪೀಠವನ್ನು ಸೇರಿರುವ ವಿದ್ಯಾರ್ಥಿಗಳನ್ನೂ
ಕೂರಿಸಲಾಗುತ್ತಿತ್ತು. ಅವರು ಹೇಳುವ ವಿಷಯದ ಸಾರ ತಿಳಿಯುವುದಿರಲಿ ಕೆಲವೊಮ್ಮೆ ಪದಗಳೇ
ಅರ್ಥವಾಗುತ್ತಿರಲಿಲ್ಲ. ಆದರೂ ವಿದ್ಯಾರ್ಥಿಗಳನ್ನು ಯಾಕಾಗಿ ಸಭೆಯಲ್ಲಿ ಕುಳ್ಳಿರಿಸುತ್ತಾರೆ, ಅದರ
ಬದಲಿಗೆ ಯಾವುದಾದರೂ ತರಗತಿಯನ್ನು ನಡೆಸಿ ಪ್ರಾಥಮಿಕ ಪಾಠ್ಯಗಳನ್ನೇ ಬೋಧಿಸಿದರೆ ಪ್ರಯೋಜನವಾದೀತು
ಎಂಬುವುದು ನನ್ನನ್ನೂ ಒಳಗೊಂಡಂತೆ ಅನೇಕರ ಅಭಿಪ್ರಾಯವಾಗಿತ್ತು.
ವಿದ್ಯಾಪೀಠದಲ್ಲಿ
ನಾನು ಶಾಸ್ತ್ರಿ ಪ್ರಥಮವರ್ಷದಲ್ಲಿ ಓದುತ್ತಿದ್ದಾಗ ಪ್ರೊ. ವೆಂಪಟೀ ಕುಟುಂಬಶಾಸ್ತ್ರೀ
ಪ್ರಾಂಶುಪಾಲರಾಗಿದ್ದರು. ಅವರು ಅನೇಕ ವಿಶ್ವವಿದ್ಯಾಲಯಗಳಲ್ಲಿ ಕುಲಪತಿಗಳೂ ಆಗಿದ್ದರು. ಹಾಗೆಂದು ಇತರ
ಕುಲಪತಿಗಳಂತೆ ಕೇವಲ ಹಣಬಲ, ಶಿಫಾರಸ್ಸುಗಳಿಂದಲೇ ಕುಲಪತಿಗಳಾಗಿ ಅಧಿಕಾರ ನಡೆಸಿದವರಲ್ಲ. ಸಂಸ್ಕೃತದಲ್ಲಿ ಅಪಾರಜ್ಞಾನವನ್ನೂ, ವಿದ್ಯಾರ್ಥಿಗಳಲ್ಲಿ
ಪ್ರೀತಿಯನ್ನೂ ಹೊಂದಿದ್ದ ಅವರು ನಿಜವಾದ ಅರ್ಥದಲ್ಲಿ ಕುಲಪತಿಗಳಾಗಿದ್ದರು. ಅವರು
ವಿಶಿಷ್ಟವ್ಯಾಖ್ಯಾನದ ಸಮಯದಲ್ಲಿ ಬಾಡಿದಂತಹ ನಮ್ಮ ಮುಖಗಳನ್ನು ನೋಡುತ್ತಾ ಈ ಮಾತುಗಳನ್ನು
ನುಡಿಯುತ್ತಿದ್ದರು.
“ಈಗ ವ್ಯಾಖ್ಯಾನ
ಮಾಡಿದವರು ದೇಶದಲ್ಲೇ ಶ್ರೇಷ್ಠರಾದ ಪಂಡಿತರು. ಅವರ ಅಧ್ಯಯನ ಅಷ್ಟು ಅಗಾಧವಾಗಿದೆ. ಆದ್ದರಿಂದ
ಗಾಢವಾದ ವಿಷಯವನ್ನೇ ಅವರು ಪ್ರತಿಪಾದಿಸಬೇಕು. ಅವರಂತಹ ಶ್ರೇಷ್ಠ ವಿದ್ವಾಂಸರಿಂದ ಪ್ರಾಥಮಿಕ
ವಿಷಯಗಳ ಬಗ್ಗೆ ವ್ಯಾಖ್ಯಾನ ಮಾಡಿಸಿದರೆ ಅವರ ಅಪಾರ ಜ್ಞಾನದ ಸಾಕ್ಷಾತ್ಕಾರ
ನಮಗಾಗುವುದಿಲ್ಲ. ಈಗ ಅವರ ಮಾತುಗಳನ್ನು ಶ್ರದ್ಧೆಯಿಂದ ಕೇಳುವುದು ವಿದ್ಯಾರ್ಥಿಗಳಾದ ನಿಮ್ಮ
ಕರ್ತವ್ಯ. ಅರ್ಥವಾಗದಿದ್ದರೂ ತೊಂದರೆಯಿಲ್ಲ. ಈಗ ಅರ್ಥವಾಗದಿದ್ದರೂ ಕಾಲಕ್ರಮೇಣ ನಿಮಗೆ
ಖಂಡಿತವಾಗಿಯೂ ಇಂತಹ ಶ್ರೇಷ್ಠರ ಮಾತುಗಳನ್ನು ಕೇಳಿದ್ದರ ಲಾಭವಾಗುತ್ತದೆ ಎಂಬುದಾಗಿ
ಬೋಧಿಸುತ್ತಿದ್ದರು. ನನ್ನ ಓದಿನ ಮುಂದಿನ ಹಂತಗಳಲ್ಲಿ ಅನೇಕ ಬಾರಿ ಇದರ ಅನುಭವವಾಗಿದೆ. ಗಹನವಾದ
ವಿಚಾರಗಳನ್ನು ಓದುವ ಸಂದರ್ಭದಲ್ಲಿ ಅನೇಕ ವರ್ಷಗಳ ಹಿಂದೆ ಕೇಳಿಸಿಕೊಂಡ ಶ್ರೇಷ್ಠ ಪಂಡಿತರ ವಚನಗಳು
ನೆನಪಿಗೆ ಬರುತ್ತವೆ. ಅವರು ಹೇಳುತ್ತಿದ್ದ ವಿಷಯಗಳನ್ನು ಪೂರ್ಣವಾಗಿ ಅರ್ಥೈಸಿಕೊಳ್ಳಲು ನಾನು
ಅಸಮರ್ಥನಾಗಿದ್ದೇನೋ ನಿಜ. ಆದರೆ ವಿಷಯವನ್ನು ನಿರೂಪಿಸುವ ಶೈಲಿಯನ್ನು ಇಂತಹ ವಿದ್ವಾಂಸರಿಂದ
ಬಹುವಾಗಿ ಕಲಿಯಲು ಪ್ರಯತ್ನಪಟ್ಟಿದ್ದೇನೆ.
ಯಾವುದೇ
ವಿಷಯದಲ್ಲಾದರೂ ಆಳವಾದ ಪರಿಶ್ರಮ, ಅನುಭವ, ಆಸಕ್ತಿಗಳುಳ್ಳವನು ವಿದ್ವಾಂಸನೇ ಸರಿ. ಅದು ಓದು ಬರಹದ
ಕ್ಷೇತ್ರವೇ ಆಗಬೇಕೆಂದಿಲ್ಲ, ಸಂಸ್ಕೃತದ ಕ್ಷೇತ್ರವೇ ಆಗಬೇಕೆಂದಿಲ್ಲ. ಆಯಾ ಕ್ಷೇತ್ರದಲ್ಲಿ ಸಾಧನೆ
ಮಾಡಿದವರು ಅಹಂಕಾರ ಭಾವವನ್ನು ಬಿಟ್ಟು, ಅವರು ಸಾಧನೆ ಮಾಡಿದ ಕ್ಷೇತ್ರದ ಬಗ್ಗೆ ಏನಾದರೂ ಹೇಳಿದರೆ
ನನಗೆ ಅರ್ಥವಾಗದಿದ್ದರೂ, ರುಚಿಸದಿದ್ದರೂ ಕೇಳುತ್ತಿರುತ್ತೇನೆ. ಪ್ರೊ. ವೆಂಪಟಿ
ಕುಟುಂಬಶಾಸ್ತ್ರಿಗಳ ಮಾತುಗಳೇ ನನಗಿಲ್ಲಿ ಪ್ರೇರಕ. ಸುಮಾರು ವರ್ಷಗಳ ಹಿಂದೆ ಸ್ವಂತಕ್ಕೆ
ಬೇಕಾಗುವಷ್ಟಾದರೂ ಬೇಯಿಸಿ ತಿನ್ನುವಷ್ಟು ಅಡುಗೆಯ ಜ್ಞಾನವೂ ನನಗಿರಲಿಲ್ಲ. ಅಡುಗೆ ಮಾಡುವ
ಅನಿವಾರ್ಯತೆಯೂ ಇರಲಿಲ್ಲವಾದ್ದರಿಂದ ಅಡುಗೆಯಲ್ಲಿ ಆಸಕ್ತಿಯೂ ಇರಲಿಲ್ಲ. ಹೀಗಿರುವಾಗ
ವಿದ್ಯಾಪೀಠದಲ್ಲೇ ಯಾವುದೋ ಒಂದು ಕಾರ್ಯಕ್ರಮದಲ್ಲಿ ಅಡುಗೆ ಭಟ್ಟರ ಸಹಾಯಕ್ಕಾಗಿ ರಚಿಸಿದ್ದ
ವಿದ್ಯಾರ್ಥಿಗಳ ತಂಡದಲ್ಲಿ ನನ್ನನ್ನೂ ಸೇರಿಸಿದ್ದರು. ಸುಮಾರು ಒಂದು ವಾರದ ತನಕ ಅಡುಗೆ ಭಟ್ಟರಿಗೆ
ಸಹಾಯ ಮಾಡಬೇಕಾಗಿತ್ತು. ಆ ತಂಡದಲ್ಲಿದ್ದ ಗೆಳೆಯರಾದ ಗಣೇಶಕೃಷ್ಣ, ರವೀಂದ್ರ ಮೊದಲಾದವರು ಆ
ವೇಳೆಗಾಗಲೇ ಪಾಕಪ್ರವೀಣರಾಗಿದ್ದರು. ಅವರ ಆಶ್ರಯದಲ್ಲಿ ಕೆಲಸಗಳನ್ನು ನಿರ್ವಹಿಸುವುದೇನೋ
ಕಷ್ಟವಾಗಲಿಲ್ಲ. ವಿಚಿತ್ರವೆಂದರೆ ಅಡುಗೆಯ ಕೆಲಸದಲ್ಲಿ ಅಷ್ಟೇನೂ ಚಾಕಚಕ್ಯತೆ ಇಲ್ಲದಿದ್ದ ನಾನು
ಅಡುಗೆ ಭಟ್ಟರೊಬ್ಬರಿಗೆ ಬಹಳ ಆತ್ಮೀಯನಾಗಿದ್ದೆ. (ನನ್ನ ಜೀವನದಲ್ಲಿ ಅಚ್ಚರಿಯೆನಿಸುವ ಇಂತಹ ಅನೇಕ
ಘಟನೆಗಳಿವೆ. ಉದಾಹರಣೆಗೆ ಆಟೋಟಗಳಲ್ಲಿ ನಾನು ಯಾವಾಗಲೂ ಹಿಂದೆಯೇ. ಯಾವ ಕ್ರೀಡೆಯಲ್ಲೂ
ಬಹುಮಾನವಾಗಿ ಒಂದು ಸಣ್ಣ ಲೋಟವನ್ನೂ (ಕಪ್ ನ ಮಾತು ದೂರವೇ) ಪಡೆದವನಲ್ಲ. ಆದರೂ ಪ್ರಾಥಮಿಕ
ಶಾಲೆಯಲ್ಲಿ ಕ್ರೀಡಾಧ್ಯಾಪಕರಾಗಿದ್ದ ಪಂಚಾಕ್ಷರಪ್ಪ, ಪ್ರೌಢಶಾಲೆಯಲ್ಲಿ ಸುಜಾತಾ,
ವಿದ್ಯಾಪೀಠದಲ್ಲಿ ರಾಮಚಂದ್ರ ಮೊದಲಾದವರೆಲ್ಲಾ ನನಗೆ ಆತ್ಮೀಯರಾಗಿದ್ದರು.) ಅಡುಗೆ ಭಟ್ಟರು ಒಂದು
ದಿನ ನನ್ನನ್ನು ಅಡುಗೆ ಮನೆಯೊಳಗೆ ಕರೆದು ಬಹಳ ರುಚಿಯಾದ ಜ್ಯೂಸ್ ಕೊಟ್ಟರು. ಅಲ್ಲದೇ ಆ ಜ್ಯೂಸ್
ಯಾವುದರಿಂದ ಮಾಡಿದ್ದು ಎಂದು ಹೇಳುವಂತೆ ಕೇಳಿದರು. ಅಡುಗೆಯ ಬಗ್ಗೆ ಸ್ವಲ್ಪವಾದರೂ ಜ್ಞಾನವಿರುವವರು
ರುಚಿಯಾದ ಪದಾರ್ಥವನ್ನು ತಿಂದಾಗ ಅದರ ಮೂಲವಸ್ತು ಯಾವುದು, ಮಾಡುವ ಬಗೆ ಹೇಗೆ ಎಂಬುದರ ಬಗೆಗೆ
ಚಿಂತಿಸುತ್ತಾರೆ. ನನ್ನಂತಹವರಿಗೆ “ತೊವೆ ಉಣ್ಣುವವನಿಗೆ ಬೇಳೆ ಬೆಲೆಯ
ಉಸಾಬರಿ ಯಾಕೆ?” ಎಂಬುವಂತೆ ತಿನ್ನುವುದೊಂದೇ ಕೆಲಸ. ಅಡುಗೆ ಭಟ್ಟರು ಯಾವುದರದ್ದೆಂದು ಹೇಳುವಂತೆ ಬಹಳ
ಪೀಡಿಸುತ್ತಿದ್ದರಿಂದ ಏನಾದರೊಂದನ್ನು ಹೇಳುವುದು ಅನಿವಾರ್ಯವಾಗಿತ್ತು. ಬೆಲ್ಲದ ತುಂಡೊಂದು
ಜ್ಯೂಸಿನ ಕೊನೆಯ ಗುಟುಕಿನಲ್ಲಿ ಬಾಯಿಗೆ ಸಿಕ್ಕಿದ್ದರಿಂದ ಬೆಲ್ಲದ ಜ್ಯೂಸು ಎಂದು ಹೇಳಿದ್ದೆ.
ಅವರು ಬೆಲ್ಲ ಹೌದು ಮುಖ್ಯವಾದ ಪದಾರ್ಥ ಯಾವುದು ಎಂದು ಹೇಳುವಂತೆ ಪುನಃ ಪುನಃ ಕೇಳುತ್ತಿದ್ದರು.
ನಾನು ಹೇಳುವುದರಲ್ಲಿ ವಿಫಲನಾದೆ. ಕೊನೆಯಲ್ಲಿ ಅವರೇ ಇದು ಬಣ್ಣದ ಸೌತೆಕಾಯಿಯ ತಿರುಳಿನಿಂದ ಮಾಡಿದ
ಜ್ಯೂಸು ಎಂದಿದ್ದರು. ಅಲ್ಲದೇ ಅದನ್ನು ಮಾಡುವ ವಿಧಾನವನ್ನೂ ವಿವರಿಸಿದ್ದರು. ಅದು
ಬ್ರಹ್ಮವಿದ್ಯೆಯೇನೂ ಅಲ್ಲದಿದ್ದರೂ ಮೊದಲ ಬಾರಿಗೆ ಅಡುಗೆ ಮಾಡುವ ವಿಧಾನವನ್ನು ಕೇಳುತ್ತಿದ್ದ
ನನಗೆ ಅದೇ ದೊಡ್ಡ ವಿಷಯವಾಗಿತ್ತು. ಅಲ್ಲದೇ ಹೇಗೆ ಮಾಡುವುದು ಹೇಳು ನೋಡೋಣ ಅಂತ ಅಡುಗೆ ಭಟ್ಟರು
ನನ್ನ ಬಾಯಿಂದಲೇ ಹೇಳಿಸಿದ್ದರು. ಹೀಗೆ ಸುಮಾರು ಅರ್ಧ ಗಂಟೆಯಷ್ಟು ಹೊತ್ತು ಸೌತೆಕಾಯಿಯ
ಜ್ಯೂಸನ್ನೇ ಕೊರೆಯುತ್ತಿದ್ದರು. ನಾನೂ ಗೋಣುಹಾಕಿ ಕೇಳುತ್ತಿದ್ದೆ.
ಇಂದು ಬಣ್ಣದ ಸೌತೆಕಾಯಿಯ
ತಿರುಳನ್ನು ತೆಗೆಯುತ್ತಿರುವಾಗ ಅದೇಕೋ ಜ್ಯೂಸಿನ ನೆನಪಾಯಿತು.ತಿರುಳಿನ ಜ್ಯೂಸ್ ಮಾಡಿ ಕುಡಿಯುವ
ಮನಸ್ಸೂ ಆಯಿತು. ಬೆಲ್ಲದ ಜ್ಯೂಸು ಎಂದು ಹೇಳಿದ್ದು ನೆನಪಾಗಿ ಬೆಲ್ಲ ಹಾಕಬೇಕು ಎಂಬುವುದೂ
ಸ್ಪಷ್ಟವಾಗಿತ್ತು. ಐದು ವರ್ಷಗಳಿಂದ ಸ್ವಯಂಪಾಕ ಮಾಡಿಕೊಳ್ಳುತ್ತಿರುವುದರಿಂದ ಅಡುಗೆಯ ಬಗೆಗೆ
ತಕ್ಕಮಟ್ಟಿನ ಸಾಮಾನ್ಯಜ್ಞಾನವೂ ಇತ್ತು. ಸಣ್ಣದಾದ ಸೌತೇಕಾಯಿಯ ತಿರುಳಿನಿಂದ
ಸುಮಾರು ನಾಲ್ಕು ಲೋಟಗಳಷ್ಟು ಜ್ಯೂಸನ್ನೂ ಮಾಡಿದೆ. ನನಗೇನೋ ರುಚಿಯೆನ್ನಿಸಿತು. ಆದರೆ “ಹೆತ್ತವರಿಗೆ ಹೆಗ್ಗಣವೂ ಮುದ್ದು” ಎಂಬಂತಾಗಬಾರದು ಎಂದು ಪಕ್ಕದ ಮನೆಯವರೊಬ್ಬರಿಗೂ
ಜ್ಯೂಸ್ ನೀಡಿದೆ. ಕುಡಿದ ಅವರು “ಇದು ಕರಬೂಜದ ಜ್ಯೂಸ್ ಅಲ್ವಾ?” ಎಂದು ಕೇಳಿದರು. ಹಿಂದೊಮ್ಮೆ ಸ್ವಲ್ಪವೂ
ಅರ್ಥವಾಗದಿದ್ದರೂ ಶ್ರವಣಸಂಸ್ಕಾರವಾಗಲಿ ಎಂದು ಕಿವಿಕೊಟ್ಟು ಕೇಳಿದುದರ ಫಲವೋ ಎಂಬಂತೆ
ವ್ಯರ್ಥವಾಗಿ ತಿಪ್ಪೆಯನ್ನು ಸೇರಬೇಕಾಗಿದ್ದ ಸೌತೆಕಾಯಿಯ ತಿರುಳು ಜ್ಯೂಸಿನ ಲೋಕದಲ್ಲಿ ತನ್ನದೇ ಆದ
ಪ್ರತಿಷ್ಠೆಯನ್ನು ಸ್ಧಾಪಿಸಿರುವ ಕರಬೂಜದ ಮಟ್ಟಕ್ಕೇರಿತ್ತು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ