ಭಾರತೀಯ
ಸಂಸ್ಕೃತಿ ಶ್ರೇಷ್ಠ ಸಂಸ್ಕೃತಿಯಾಗಿದೆ. ಭಾರತೀಯರು ಶ್ರೇಷ್ಠ ಸಾಧಕರು ಎಂಬ ಕ್ಲೀಷೆಯನ್ನು ಪ್ರತಿದಿನವೂ ಕೇಳುತ್ತಿರುತ್ತೇವೆ.
ಆದರೆ ಹೀಗೆ ಹೇಳುವವರು ಅವರ ಹೃದಯದಿಂದ ಮಾತುಗಳನ್ನು ಭಾರತೀಯತೆಯ ಶ್ರೇಷ್ಠತೆಯನ್ನು ಒಪ್ಪುತ್ತಾರೆಯೇ ಎಂದು ಕೇಳಿದರೆ ಇಲ್ಲ ಎಂದು
ಉತ್ತರಿಸಬೇಕಾಗುತ್ತದೆ. ಏಕೆ ಎಂಬ ಪ್ರಶ್ನೆಗೆ ಉತ್ತರವಾಗಿ ಕೆಲವೊಂದಿಷ್ಟು ಉದಾಹರಣೆಗಳನ್ನು
ನೋಡೋಣ.
ಉದಾಹರಣೆ
1- ಆರ್.ಎಸ್.ಎಸ್ ನ ಒಂದು ಬೈಠಕ್. ಭಾಷಣಮಾಡುತ್ತಿದ್ದವರು ವಯಸ್ಸಿನಿಂದಲೂ, ಅಧ್ಯಯನದಿಂದಲೂ
ಅನುಭವದಿಂದಲೂ ಶ್ರೇಷ್ಠರಾದ ಒಬ್ಬ ಪ್ರಸಿದ್ಧ ಪ್ರಚಾರಕರು. ಸಂಘ ಹಾಗೂ ಸ್ವಯಂಸೇವಕ ಹೇಗೆ
ಅವಿನಾಭಾವವಾಗಿ ಇರಬೇಕು ಎಂಬ ವಿಷಯವನ್ನು ಪ್ರತಿಪಾದಿಸುತ್ತಿದ್ದರು. ಉದಾಹರಣೆಗಾಗಿ ಅವರು ಕಾವ್ಯದ
ಕಡೆ ಹೊರಳಿದರು. ಕಾವ್ಯವನ್ನು ಓದುತ್ತಿರುವಾಗ ಸಹೃದಯ (ವಾಚಕ) ಹಾಗೂ ಕಾವ್ಯದ ಪಾತ್ರದ ನಡುವೆ
ಅವಿನಾಭಾವ ಸಂಬಂಧ ಉಂಟಾಗುತ್ತದೆ. ಇದರಿಂದಾಗಿ ಪಾತ್ರದ ಭಾವಗಳನ್ನು ವಾಚಕ ಅನುಭವಿಸುತ್ತಾನೆ.
ಎಂದು ಪಾಶ್ಚಾತ್ಯ ಚಿಂತಕರೊಬ್ಬರು (ಅವರು ಹೇಳಿದ ಹೆಸರು ನನಗೆ ಮರೆತು ಹೋಗಿದೆ. ಬಹುಶಃ ಕೀಟ್ಸ್
ಇರಬೇಕು.) ಹೇಳಿದ್ದಾರೆ. ಅವರು ಹೇಳಿದಂತೆ ಸಂಘ ಹಾಗೂ ಸ್ವಯಂಸೇವಕರ ನಡುವೆ ಅವಿನಾಭಾವ ಸಂಬಂಧ
ಇರಬೇಕು ಎಂದು ಹೇಳಿದರು.
ಸಂಸ್ಕೃತ
ಓದಿದ ನನಗೆ ಇದೇ ವಿಷಯವನ್ನು ಭಟ್ಟನಾಯಕನೂ ಅಭಿನವಗುಪ್ತನೂ ಹೇಳಿದ್ದಾರಲ್ಲ ಎಂದು ಅನಿಸಿತು. ಅವರ
ಉದಾಹರಣೆಯನ್ನು ಬಿಟ್ಟು ಇಂಗ್ಲಿಷ್ ಚಿಂತಕರ ಉದಾಹರಣೆ ಏಕೆ ಕೊಟ್ಟರು. ಇಷ್ಟೆಲ್ಲ ಓದಿಕೊಂಡ
ಇವರಿಗೆ ಅಭಿನವಗುಪ್ತನ ಬಗೆಗೆ ಗೊತ್ತಿಲ್ಲವೇ ಎಂಬ ಅನುಮಾನಗಳು ಕಾಡಲಾರಂಭಿಸಿದವು. ಭಾಷಣ ಮುಗಿದ
ತಕ್ಷಣ ಅವರ ಬಳಿಗೆ ಹೋಗಿ ನೀವು ಹೇಳಿದ್ದು ಭಟ್ಟನಾಯಕ, ಹಾಗೂ ಅಭಿನವಗುಪ್ತನ ಸಾಧಾರಣೀಕರಣವಲ್ಲವೇ
ಎಂದು ಕೇಳಿದೆ. ಅವರು ಹೌದು. ಸಾಧಾರಣೀಕರಣದ ಬಗ್ಗೆಯೇ ನಾನು ಹೇಳಿದ್ದು, ಅಭಿನವಗುಪ್ತನ ಬಗೆಗೆ
ಮೈಸೂರಿನ ವಿದ್ವಾಂಸರೊಬ್ಬರು ತುಂಬಾ ಚೆನ್ನಾಗಿ ಬರೆದಿದ್ದಾರೆ. ಸುಮಾರು 15-20 ಪುಟಗಳ ಲೇಖನ. ಅದನ್ನು ಓದು ಎಂದು ತಿಳಿಸಿದರು. ಹಾಗಾದರೆ ಇಂಗ್ಲಿಷ್ ಚಿಂತಕರ ಹೆಸರನ್ನು ಯಾಕೆ ಹೇಳಿದಿರಿ ಎಂಬ
ಪ್ರಶ್ನೆಗೆ ಇಲ್ಲಿ ಇರುವ ಕೇಳುಗರಿಗೆಲ್ಲ ಸರಳವಾಗಿ ಅರ್ಥವಾಗಲಿ ಎಂಬ ಕಾರಣಕ್ಕೆ ಹಾಗೆ ಹೇಳಿದೆ
ಎಂದು ಹೇಳಿದರು. ಅವರು ಬೇರೆಡೆಗೆ ಹೋಗುವ ಅವಸರದಲ್ಲಿದ್ದುದರಿಂದ ಅವರಲ್ಲಿ ಮತ್ತಷ್ಟು ಮಾತನಾಡುವ
ಅವಕಾಶವಾಗಲಿಲ್ಲ.
ನನಗೆ ಆ ಕ್ಷಣದಲ್ಲಿ ಅಚ್ಚರಿಯಾಯಿತು. ಅಭಿನವಗುಪ್ತನ ಬಗೆಗೆ ಅವರಿಗೆ ನನಗಿಂತಲೂ ಹೆಚ್ಚು ಗೊತ್ತಿದೆ. ಆದರೂ ಆತನನ್ನು ಬಿಟ್ಟು ಇಂಗ್ಲಿಷ್ ಚಿಂತಕರ ಹೆಸರನ್ನು ಹೇಳಿದರು. ಏಕೆಂದು ಕೇಳಿದ್ದಕ್ಕೆ ಎಲ್ಲರಿಗೂ ಅರ್ಥವಾಗಲಿ ಎಂಬ ಹಾರಿಕೆಯ ಉತ್ತರ ನೀಡಿದರು. ಎಲ್ಲರಿಗೂ ಅರ್ಥವಾಗಲಿ ಎಂಬುವುದು ಹಾರಿಕೆಯ ಉತ್ತರವೇ. ಏಕೆಂದರೆ ಕೇಳುಗರಾಗಿ ಇದ್ದವರು ಆರ್.ಎಸ್.ಎಸ್ ನ ವಿವಿಧ ಕ್ಷೇತ್ರಗಳಲ್ಲಿ ಕಾರ್ಯಕರ್ತರಾಗಿರುವವರು. ಭಜರಂಗದಳ, ಭಾ.ಜ.ಪ, ವಿಶ್ವಹಿಂದೂಪರಿಷತ್, ಗೋರಕ್ಷಣಾ ಪ್ರಕಲ್ಪ, ವನವಾಸಿಕಲ್ಯಾಣಪರಿಷತ್ ಮುಂತಾದ ಸಂಘಟನೆಗಳಲ್ಲಿ ದುಡಿಯುವವರಿಗೆ ಉದಾಹರಣೆಯಾಗಿ ಶೇಕ್ಸ್-ಪಿಯರನ ವಾಕ್ಯವನ್ನು ಹೇಳಿದರೂ ಕಾಲಿದಾಸನ ವಾಕ್ಯವನ್ನು ಹೇಳಿದರೂ ಸಮಾನ ಪರಿಣಾಮ ಉಂಟು ಮಾಡುತ್ತದೆ. ಏಕೆಂದರೆ ಸಾಮಾನ್ಯವಾಗಿ ಎರಡನ್ನೂ ಅವರು ಓದಿರುವುದಿಲ್ಲ (ಓದಿರುವುದಿಲ್ಲ ಎಂಬುವುದು ಆಕ್ಷೇಪವಲ್ಲ. ವಾಸ್ತವ. ಅವರ ಕ್ಷೇತ್ರದಲ್ಲಿ ಅವರು ಮಾಡುವ ಕೆಲಸ ಗೌರವಾರ್ಹವೇ). ಆದರೆ ಆ ಕ್ಷಣಕ್ಕೆ ಅವರಿಗೆ ಇಂಗ್ಲಿಷ್ ಉದಾಹರಣೆ ಹೇಳಿದರೆ ಜನರ ಮನಸ್ಸನ್ನು ಸುಲಭವಾಗಿ ತಲುಪಬಹುದು ಎಂದು ಅನಿಸಿದ್ದು ಆಶ್ಚರ್ಯ. ಯಾರೋ ಕಮ್ಯುನಿಷ್ಟ್ ಭಾಷಣಕಾರನಿಗೆ ಹೀಗನಿಸಿದ್ದರೆ ವಿಶೇಷವಲ್ಲ. ಆದರೆ ಹೀಗನ್ನಿಸಿದ್ದು. ಭಾರತ, ಭಾರತೀಯರು, ಭಾರತೀಯತೆ ಎಂದು ನಲವತ್ತಕ್ಕೂ ಹೆಚ್ಚು ವರ್ಷ ಶ್ರಮಿಸಿದ ಪ್ರಚಾರಕರಿಗೆ.
ಉದಾಹರಣೆ 2- ಶುಭಸಮಾರಂಭಗಳ
ಸೀಸನ್. ಒಂದು ಶನಿವಾರ ನಮ್ಮ ನೆಂಟರೊಬ್ಬರ ರಿಸೆಪ್ಶನ್ ಇತ್ತು. ಅದರ ಮರುದಿನ ಮತ್ತೊಬ್ಬರ
ಮನೆಯಲ್ಲಿ ಸತ್ಯನಾರಾಯಣಪೂಜೆ. ಎರಡೂ ಕಾರ್ಯಕ್ರಮಗಳಿಗೂ ನಾನು ಮನೆಯ ಸದಸ್ಯರೊಂದಿಗೆ ಭಾಗಿಯಾಗಿದ್ದೆ.
ನನ್ನ ಶರೀರ ದಪ್ಪ ಇರುವುದರಿಂದ ನನಗೆ ಪ್ಯಾಂಟ್ ಧರಿಸುವುದಕ್ಕಿಂತ ಪಂಚೆ ಉಡುವುದೇ ಅನುಕೂಲ.
ಅಲ್ಲದೇ ವಿದ್ಯಾರ್ಥಿದೆಸೆಯಿಂದಲೂ ಪಂಚೆ ಉಟ್ಟು ಅಭ್ಯಾಸ ಆಗಿರುವುದರಿಂದ ಅದೇನೂ ಕಷ್ಟ
ಎನಿಸುವುದಿಲ್ಲ. ಆದ್ದರಿಂದ ದೂರಪ್ರಯಾಣದಂತಹ ಸಂದರ್ಭಗಳನ್ನು ಹೊರತುಪಡಿಸಿ ಸಾಮಾನ್ಯವಾಗಿ ಪಂಚೆ
ಉಟ್ಟುಕೊಳ್ಳುತ್ತೇನೆ. ಭಾರತೀಯ ಸಂಸ್ಕೃತಿ ಪಂಚೆ ಆದ್ದರಿಂದ ಅದನ್ನು ಉಡಬೇಕು ಎಂಬ ಮನಃಸ್ಥಿತಿ
ನನ್ನದಲ್ಲ. ನನಗೆ ಇಷ್ಟ ಹಾಗೂ ಅನುಕೂಲ ಆದ್ದರಿಂದ ಪಂಚೆ ಉಡುತ್ತೇನೆ ಎಂದು ಹೇಳುವವನು ನಾನು.
ಹೀಗೆ ಮದುವೆಯ ರಿಸೆಪ್ಶನ್ ಕಾರ್ಯಕ್ರಮಕ್ಕೆ ಪಂಚೆ ಉಟ್ಟುಕೊಂಡು ಹೋಗಿದ್ದೆ. ನಮ್ಮ ಕುಟುಂಬದ ಹಿರಿಯರೊಬ್ಬರು ತುಂಬಾ ಆತ್ಮೀಯರು ರಿಸೆಪ್ಶನ್ ಗೆ ಬಂದಿದ್ದರು. ಅವರು ನೀನೇನು ಹೀಗೆ ಪಂಚೆ ಉಟ್ಟುಕೊಂಡು ಬಂದಿದ್ದೀಯ. ಪ್ಯಾಂಟ್ ಹಾಕಿಕೊಂಡು ಬರುವುದಲ್ಲವಾ ಎಂದು ಕೇಳಿದರು. ನಾನು ಏನೂ ಹೇಳಲಿಲ್ಲ. ಮರುದಿನ ಸತ್ಯನಾರಾಯಣ ಪೂಜೆಗೆ ನನ್ನ ವಯಸ್ಸಿನ ಒಂದಿಬ್ಬರು ಯುವಕರು ಚಡ್ಡಿ ಹಾಕಿಕೊಂಡು ಬಂದಿದ್ದರು. ಇವರಿಗೆ ಏನೂ ಹೇಳುವುದಿಲ್ಲವೇ ? ಎಂದು ನಾನು ಅವರನ್ನು ಕೇಳಿದೆ. ಅವರು ಉತ್ತರಿಸಲ್ಲಿಲ್ಲ. ಚಡ್ಡಿ ಹಾಕಿದವರನ್ನು ಪ್ರಶ್ನಿಸಲೂ ಇಲ್ಲ. ಚಡ್ಡಿ ಹಾಕಿಕೊಂಡು ಸತ್ಯನಾರಾಯಣಪೂಜೆಗೆ ಬಂದವರು ಕೂಡಾ ಹಿರಿಯರ ಆತ್ಮೀಯರೇ.
ರಿಸೆಪ್ಶನ್ ಗೆ ಪಂಚೆ ಉಟ್ಟುಕೊಂಡು ಹೋಗುವುದು ಅನುಚಿತ ಎಂಬುವುದನ್ನು ಒಪ್ಪಿಕೊಂಡು ಚಿಂತಿಸೋಣ. ಸತ್ಯನಾರಾಯಣ ಪೂಜೆಗೆ ಚಡ್ಡಿ ಹಾಕಿಕೊಂಡು ಬರುವುದೂ ಖಂಡಿತವಾಗಿಯೂ ಅನುಚಿತವೇ. ಆದರೆ ಅದನ್ನು ಹಿಂದೂ ಸಂಸ್ಕೃತಿಯ ಬಗೆಗೆ ಗೌರವವಿದೆ ಎಂದು ಹೇಳುವವರು ಖಂಡಿಸುವುದಿಲ್ಲ. ಅವರೇ ಅಂಗೀಕರಿಸುತ್ತಾರೆ. ಆದರೆ ರಿಸೆಪ್ಶನ್ ಗೆ ಪಂಚೆ ಉಟ್ಟುಕೊಂಡು ಹೋದರೆ ಅಸಮಾಧಾನ ವ್ಯಕ್ತಪಡಿಸುತ್ತಾರೆ.
ಉದಾಹರಣೆ 3 - ನಾನು ಯಕ್ಷಗಾನಪ್ರಿಯ. ಸ್ವಲ್ಪ ಸಂಸ್ಕೃತ ಓದಿರುವುದರಿಂದಲೋ ಏನೋ ಯಕ್ಷಗಾನವೆಂದರೆ ನನಗೆ ಇಷ್ಟ. ನಮ್ಮ ಮನೆಯಿಂದ ಸುಮಾರು ಒಂದುವರೆ ಗಂಟೆ ಪ್ರಯಾಣ ಮಾಡಿದರೆ ಕಟೀಲು ತಲುಪುತ್ತೇವೆ. ಕಟೀಲಿನಲ್ಲಿ ಯಕ್ಷಗಾನಗಳು ಆಗುತ್ತಿರುತ್ತವೆ. ನವಂಬರ್ ತಿಂಗಳಲ್ಲಿ ಹನುಮಗಿರಿ ಮೇಳದ ಹೊಸ ಪೌರಾಣಿಕ ಪ್ರಸಂಗದ ಪ್ರದರ್ಶನವಿತ್ತು. ಫಸ್ಟ್ ಡೇ ಫಸ್ಟ್ ಶೋ ಸಿನೆಮಾ ನೋಡಲು ಯಾವ ರೀತಿಯಿಂದ ಆಸಕ್ತ ಜನರು ಓಡುತ್ತಾರೋ ಅದೇ ರೀತಿಯಾಗಿ ನಾನೂ ಯಕ್ಷಗಾನ ನೋಡಲು ಹೋದೆ. ಇದನ್ನು ಕೇಳಿದ ಮಂದಿ (ಭಾರತೀಯ ಸಂಸ್ಕೃತಿ ಶ್ರೇಷ್ಠ ಎಂಬುವುದರ ಕುರಿತು ಯಾವಾಗಲೂ ಭಾಷಣ ಮಾಡುವವರು) ಇವನೊಬ್ಬ ಯಕ್ಷಗಾನದ ಹುಚ್ಚ, ಮಧ್ಯರಾತ್ರೆ ನಿದ್ದೆ ಬಿಟ್ಟು ಐವತ್ತು ಕಿಲೋಮೀಟರ್ ಹೋಗ್ತಾನೆ ಎಂದೆಲ್ಲ ಹೇಳುತ್ತಾರೆ.
ಶುದ್ಧ ಪರಂಪರೆಯ ದೃಷ್ಟಿಯಿಂದ ಹೇಳುವುದಾದರೆ ಯಕ್ಷಗಾನಕ್ಕೆ ಹೋಗುವುದು ತಪ್ಪೇ. ಕಾವ್ಯಾಲಾಪಾಂಶ್ಚ ವರ್ಜಯೇತ್ ಮುಂತಾದ ಮಾತುಗಳು ಇಂತಹ ಮನೋರಂಜನೆಗೆ ನಿಷೇಧ ಹೇರುತ್ತವೆ. ಆದರೆ ಅದು ಭಾರತೀಯವಾದರೆ ಮಾತ್ರ ನಿಷೇಧ. ಸಿನೆಮಾ ನೋಡುವುದಕ್ಕೆ ಗಂಟೆಗಟ್ಟಲೆ ದೂರ ಹೋಗಿ ಸಾವಿರಗಟ್ಟಲೆ ಖರ್ಚು ಮಾಡಿದರೆ ಅದು ಶ್ರೇಷ್ಠತೆಯ ಪ್ರತೀಕ. ಏಕೆಂದರೆ ಸಿನೆಮಾ ನೋಡುವವರನ್ನು ಅದೇ ಜನ ಹೊಗಳುವುದನ್ನು ಕಂಡಿದ್ದೇನೆ. ಅವನಿಗೆ ಇಂಗ್ಲಿಷ್ ಸಿನೆಮಾ ಅಂದರೆ ಅಷ್ಟು ಆಸಕ್ತಿ ಎಂಬುವುದು ಅವರ ವಾಕ್ಯ
ಈ ಉದಾಹರಣೆಗಳಿಂದ ತಿಳಿದು ಬರುವ ಸತ್ಯವೇನೆಂದರೆ ಭಾರತೀಯತೆ ಶ್ರೇಷ್ಠ ಎಂಬುವುದು ಕೆಲವರಿಗೆ ಒಂದು ಚಟ. ಅವರು ತಮ್ಮ ಮನಸ್ಸಿನಿಂದ ಅದನ್ನು ಹೇಳುವುದಿಲ್ಲ. ಭಾರತೀಯತೆಯನ್ನು ಪ್ರತಿಪಾದಿಸುವವರಲ್ಲಿ ಅನೇಕರ ಹೃದಯ ವಿದೇಶೀ ವಸ್ತುಗಳಿಗೆ ಮಾರುಹೋಗಿರುತ್ತದೆ. ವಿದೇಶಿ ವಿಚಾರಗಳಿಗೆ ಮಾರುಹೋಗುವುದು ತಪ್ಪು ಎಂಬುವುದು ನನ್ನ ವಾದವಲ್ಲ. ಸೋಗಲಾಡಿತನದಿಂದ ತೋರ್ಪಡಿಕೆಗಷ್ಟೇ ಭಾರತೀಯತೆ ಶ್ರೇಷ್ಠ ಎಂಬ ಪ್ರತಿಪಾದನೆಯ ಬಗೆಗಷ್ಟೇ ಆಕ್ಷೇಪ.
