ಗುರುವಾರ, ಅಕ್ಟೋಬರ್ 31, 2019

ಅ(ಕ)ಷ್ಟಾವಧಾನಪರಿಚಯ

"ನಮ್ಮ ಶಾಲೆಯಲ್ಲಿ ಹೈಸ್ಕೂಲಿನ ಮಕ್ಕಳಿಗೆ ಅಷ್ಟಾವಧಾನದ ಪರಿಚಯವನ್ನು ಒಂದು ಗಂಟೆಯಲ್ಲಿ ಮಾಡಿಕೊಡಬೇಕು". ಎಂದು ನನ್ನ ಗೆಳೆಯನಿಂದ ಕರೆ ಬಂದಿತ್ತು. "ನಿಮ್ಮ ಅಷ್ಟಾವಧಾನವನ್ನು ಆಯೋಜಿಸುತ್ತೇವೆ. ಅಷ್ಟಾವಧಾನವನ್ನು ಮಾಡಬೇಕು." ಎಂಬ ಕರೆ ಬಂದಾಗಲೂ ಅಷ್ಟು ಹೆದರಿಕೆಯಾಗಿರಲಿಲ್ಲ. ಛಂದಸ್ಸು, ರಸ, ಪದ್ಯ, ಧಾರಣ, ಪೂರಣ ಮೊದಲಾದ ಗಂಭೀರ ವಿಷಯಗಳಿಂದ ಕೂಡಿದ, ಭಾರತೀಯ ಭಾಷೆಗಳಲ್ಲಿ ಪ್ರಚಲಿತವಾಗಿರುವ ಅಷ್ಟಾವಧಾನ ಎಂಬ ಕಲೆಯನ್ನು ಇಂಗ್ಲೀಷ್ ಶಾಲೆಯಲ್ಲಿ ಓದುತ್ತಿರುವ ಮಕ್ಕಳಿಗೆ ಪರಿಚಯ ಮಾಡಿಕೊಡುವುದೆಂದರೆ ನನಗೊಂದು ಸವಾಲಿನ ಕೆಲಸವೇ ಆಗಿತ್ತು. ಅಷ್ಟಾವಧಾನಕ್ಕೆ ಧಾರಣೆ ಧಾರೆ ಹಾಗೂ ಧೈರ್ಯ ಈ ಮೂರೂ ಬೇಕೆಂಬುದು ಅವಧಾನದ ಬಗ್ಗೆ ತಿಳಿದವರ ಮಾತು. ಆದರೆ ಅವಧಾನದ ಪರಿಚಯವನ್ನು ಮಾಡಿಕೊಡಲು ಭಂಡಧೈರ್ಯವೊಂದೇ ಸಾಕು ಎಂದುಕೊಂಡು ಒಪ್ಪಿಯೂ ಆಯಿತು.

ಕಾರ್ಯಕ್ರಮ ಇನ್ನೂ ಒಂದು ತಿಂಗಳು ದೂರದಲ್ಲಿತ್ತು. ಕೇಳುವವರು ಚಿಕ್ಕ ಮಕ್ಕಳಾದರೂ ನನ್ನ ಕೆಲಸವನ್ನು ಚೊಕ್ಕವಾಗಿ ಮಾಡಬೇಕು ಎಂಬ ದೃಢ ನಿರ್ಣಯವಿತ್ತು. ದೂರವಾಣಿಯನ್ನು ಮಾಡಿದ್ದ ಗೆಳೆಯ ಪಿಪಿಟಿ ಅಥವಾ ವಿಡಿಯೋಗಳನ್ನು ಬೇಕಾದರೂ ತೋರಿಸುವ ಅನುಕೂಲವಿದೆ ಎಂದು ಹೇಳಿದ್ದು ಆಶಾದಾಯಕವಾಗಿತ್ತು. ಪಿಪಿಟಿಯ ಮೂಲಕ ಅನೇಕ ವಿಷಯಗಳನ್ನು ಸುಂದರವಾಗಿ ತೋರಿಸುಬಹುದು ಎಂದುಕೊಂಡು ಪಿಪಿಟಿ ಮಾಡುವುದೆಂದು ನಿರ್ಧರಿಸಿದೆ. ಕನ್ನಡದಲ್ಲಿ ಅವಧಾನ ಕಲೆ ಎಂಬ ಪುಸ್ತಕವನ್ನು ಹಿಡಿದುಕೊಂಡು ವಿಷಯವನ್ನು ಸರಳವಾಗಿ ಹೇಗೆ ಪ್ರಸ್ತುತಿಪಡಿಸಬಹುದು ಎಂದು ಚಿಂತಿಸಲಾರಂಭಿಸಿದೆ.

ಅವಧಾನ ಎಂಬ ಶಬ್ದವನ್ನೇ ಕೇಳದವರ ಎದುರಿನಲ್ಲಿ ಅವಧಾನದ ಬಗ್ಗೆ ಹೇಳುವಾಗ ಎಲ್ಲಿಂದ ತೊಡಗಬೇಕೆಂಬುದೇ ದೊಡ್ಡ ಸಮಸ್ಯೆಯಾಯಿತು. ಆ ಕಾಲದಲ್ಲಿ ಶ್ರೀಧರ ಗದ್ದೆಯವರು ಹೇಳಿದ್ದ ಮಾತೊಂದು ನೆನಪಾಯಿತು. ಅವಧಾನವೆಂದರೆ ಬುದ್ಧಿಶಕ್ತಿಯ ಪ್ರದರ್ಶವವಲ್ಲ. ಅದೊಂದು ಕಲೆ ಎಂಬುದು ಅನೇಕರಿಗೆ ಅರಿವಿಲ್ಲ. ಅಲ್ಲದೇ ಅವಧಾನದ ಬಗ್ಗೆ ನನಗೆ ಕಿಂಚಿತ್ತೂ ಅರಿವೇ ಇಲ್ಲದಿದ್ದಾಗ ವಿದ್ಯಾಲಯದಲ್ಲಿ ವೇದಾಂತ ಪ್ರಾಧ್ಯಾಪಕರಾಗಿದ್ದ ಮಹಾಬಲೇಶ್ವರ ಭಟ್ಟರು "ಅವಧಾನವೆಂದರೆ ಬೌದ್ಧಿಕ ಕ್ರೀಡೆ ಎಂದು ಹೇಳಿದ್ದು ಮನಸ್ಸಿನಲ್ಲಿ ಅಚ್ಚೊತ್ತಿದಂತಾಗಿತ್ತು. ಈ ಎರಡೂ ವಿಷಯಗಳನ್ನು ಆಧರಿಸಿ ಕಲೆಗಳನ್ನು ಉದ್ಧರಿಸುವ ಮೂಲಕವೇ ಅಷ್ಟಾವಧಾನದ ಪರಿಚಯವನ್ನು ಮಾಡಿಸೋಣವೆಂದುಕೊಂಡೆ.

ಅಷ್ಟಾವಧಾನವನ್ನು ಕಲೆ ಎಂದು ಪರಿಚಯಿಸಿದ ನಂತರ ಅವಧಾನವೆಂದರೇನು? ಎಂಬುವುದನ್ನೂ ವಿವರಿಸಬೇಕು. ಇದಕ್ಕಾಗಿ ಮಹೇಶ ಕಾಕತ್ಕರ್ ರವರ ಕ್ರಮ ಅನುಕೂಲವೆನಿಸಿತು. ಘಟಗಳನ್ನು ಸಾಲಾಗಿ ಜೋಡಿಸಿದ ಪೃಚ್ಛಕ ಅವಧಾನಿಯ ಸಮಕ್ಷಮದಲ್ಲೇ ಪ್ರತಿಯೊಂದು ಘಟವನ್ನೂ ನುಡಿಸುತ್ತಾನೆ. ತದನಂತರ ಅವಧಾನೀ ಘಟಗಳನ್ನು ನೋಡುವುದಿಲ್ಲ. ಯಾವುದೇ ಘಟವನ್ನು ನುಡಿಸಿದರೂ ಯಾವ ಘಟದ ಶಬ್ದ ಎಂಬುದಾಗಿ ಹೇಳುತ್ತಾನೆ. ಇದು ಅವಧಾನ. ಇದೇ ರೀತಿಯಾಗಿ ಎಂಟು, ವಿಷಯಗಳಲ್ಲಿ ಅವಧಾನವನ್ನು ಸಾಧಿಸುವುದೇ ಅಷ್ಟಾವಧಾನ ಎಂಬುವುದನ್ನು ವಿವರಿಸಿಯೂ ಆಯಿತು.

ತದನಂತರ ಪದ್ಯವೆಂದರೇನು ಎಂಬುವುದನ್ನು ವಿವರಿಸುವ ಸವಾಲು. ಶ್ಲೋಕವೊಂದರಲ್ಲಿ ನಾಲ್ಕು ಪಾದಗಳಿರುತ್ತವೆ ಎಂಬುವುದನ್ನು ಬೋಧಿಸಿದೆ. ಅವಧಾನಿ ಪ್ರತಿ ಸಾಲಿನಲ್ಲೂ ಒಂದೊಂದು ಚರಣವನ್ನು ರಚಿಸುತ್ತಾನೆ ಎಂಬುದನ್ನು ವಿವರಿಸುವಲ್ಲಿ ಪಿಪಿಟಿಯ ಉಪಯೋಗ ಬಹಳವಾಗಿ ಆಯಿತು. ಇದಕ್ಕಾಗಿ ಸರಳವಾದ ಕನ್ನಡದಲ್ಲಿ ಪದ್ಯಗಳನ್ನೂ ಬರೆದಿದ್ದೆ. ಪದ್ಯಗಳು ದೋಷಯುಕ್ತವಾಗಿದ್ದರೂ ಅವಧಾನದ ಪರಿಚಯ ಚೆನ್ನಾಗಿ ಆಗಬೇಕೆಂಬುದು ನನ್ನ ಉದ್ದೇಶವಾಗಿತ್ತು.

ಇಷ್ಟನ್ನು ಮಾಡಿದ ನನಗೆ ಅವಧಾನದ ಅಂಗಗಳನ್ನು ಪರಿಚಯಿಸುವುದರಲ್ಲಿ ಹೆಚ್ಚಿನ ಕಷ್ಟವಾಗಲಿಲ್ಲ. ಮಕ್ಕಳಿಗೆ ಎಷ್ಟು ಅರ್ಥವಾಯಿತೋ ದೇವರೇ ಬಲ್ಲ, ಆದರೆ ಮಕ್ಕಳ ಬಾಯಿಯಿಂದ ಅವಧಾನ, ಅಷ್ಟಾವಧಾನ, ಅವಧಾನಿ, ಪೃಚ್ಛಕ, ದತ್ತಪದೀ, ನಿಷೇಧಾಕ್ಷರೀ, ಸಂಖ್ಯಾಬಂಧ ಮೊದಲಾದ ಪದಗಳು ಹೊರಬಂದವು. ಶಿಕ್ಷಕರೂ ನನ್ನ ಪ್ರಸ್ತುತಿಯ ನಂತರ ಬಂದು ಅವಧಾನದ ಬಗೆಗೆ ಅನೇಕ ಪ್ರಶ್ನೆಗಳನ್ನು ಕೇಳಿದರು. 

ಅವಧಾನವನ್ನು ಮಾಡಬೇಕೆಂಬ ಮಹದಾಸೆ ನನ್ನಲ್ಲಿರಲಿಲ್ಲ. ಆದರೆ ಅವಧಾನವನ್ನು ನೋಡಿದ ದಿನದಿಂದಲೇ ಅವಧಾನದ ಬಗೆಗೆ ಪ್ರೀತಿ, ಆಸಕ್ತಿ ಮೂಡಿತ್ತು.  ಅವಧಾನಿಯಾಗಿ ಅನೇಕ ಅವಧಾನಗಳನ್ನು ನಡೆಸಿದರೂ ನನಗೆ ತೃಪ್ತಿಯಾಗಿಲ್ಲ. ಬದಲಾಗಿ ಶ್ರೇಷ್ಠವಾದ ಅವಧಾನ ಕಲೆಯ ಮಹತ್ತ್ವವನ್ನು ತಗ್ಗಿಸುತ್ತಿದ್ದೇನೆಯೋ ಎಂಬ ಖೇದವಿದೆ.  ಅವಧಾನವನ್ನು ಆಯೋಜಿಸಿದಾಗ ಅನೇಕರಿಗೆ ಅವಧಾನ ಕಲೆಯ ಪರಿಚಯವಾಗುತ್ತದೆ, ಇತರ ಶ್ರೇಷ್ಠ ಅವಧಾನಿಗಳ ಅವಧಾನಗಳನ್ನು ನೋಡಬೇಕೆಂಬ ಆಸೆ ಪ್ರೇಕ್ಷಕರಲ್ಲಿ ಹುಟ್ಟುತ್ತದೆ ಎಂಬ ಕಾರಣಕ್ಕಾಗಿ ಅವಧಾನಿಯಾಗಿ ವೇದಿಕೆಯನ್ನೇರುತ್ತಿದ್ದೆ. ಅವಧಾನದ ಪರಿಚಯವನ್ನು ಶಾಲೆಯ ಮಕ್ಕಳಿಗೆ ಮಾಡಬೇಕು ಎಂದಾಗ ಇದನ್ನಾದರೂ ಮಾಡಿ ಅವಧಾನದ ಮಹತ್ತ್ವವನ್ನು ಹೆಚ್ಚಿಸಬಹುದು ಎಂದುಕೊಂಡು ಒಪ್ಪಿಗೆಯನ್ನು ಸೂಚಿಸಿದ್ದೆ. ಅಷ್ಟಾವಧಾನದ ಪರಿಚಯ ನನಗೆ ಕಷ್ಟವಾದರೂ ವಿದ್ಯಾರ್ಥಿಗಳಿಗೆ ಇಷ್ಟವಾಗಿರಬಹುದು ಎಂದು ಭಾವಿಸಿ ತುಷ್ಟನಾಗಿದ್ದೇನೆ.

1 ಕಾಮೆಂಟ್‌:

ಶ್ರೀಮದ್ರಾಮಾಯಣೀ ಗಂಗಾ

ವಾಲ್ಮೀಕಿಗಿರಸಂಭೂತಾ ರಾಮಾಂಭೋನಿಧಿಸಂಗತಾ । ಶ್ರೀಮದ್ರಾಮಾಯಣೀ ಗಂಗಾ ಪುನಾತಿ ಭುವನತ್ರಯಮ್ ॥ ಎಂಬ ಮಾತಿನ ಮೂಲಕ ಹಿರಿಯರು ರಾಮಾಯಣವನ್ನು ಗಂಗೆಯೆಂದೇ ಕರೆದಿದ್ದಾರೆ. ರಾಮಾಯ...