ಇಂದಿನ
ಅನೇಕ ಯುವಜನರ ಸಮಸ್ಯೆಯೇ ಇದು. ಯಾವುದೋ ಒಂದು ವಿಷಯದಲ್ಲಿ ಅನೇಕ ವರ್ಷಗಳ ಕಾಲ ಮಣ್ಣು ಹೊತ್ತು
ಪದವಿಯನ್ನು ಪಡೆದಿರುತ್ತಾರೆ. ಆದರೆ ಓದಿದ ವಿಷಯ
ಉತ್ತಮ ಕೆಲಸಕ್ಕೆ ಪೂರಕವಾಗಿರುವುದಿಲ್ಲ. ಹೊಟ್ಟೆಪಾಡಿಗಾಗಿ ಯಾವುದಾದರೊಂದು ದಾರಿಯನ್ನು ಹಿಡಿದು
ನಡೆಯುವುದು ಅನಿವಾರ್ಯವಾಗುತ್ತದೆ. ಆದ್ದರಿಂದಲೇ ಅನೇಕರಿಗೆ ಮಾಡುತ್ತಿರುವ ಕೆಲಸದಲ್ಲಿ
ತೃಪ್ತಿಯಿಲ್ಲ. ಅಧ್ಯಯನ ನಡೆಸಿದ್ದು ಜ್ಞಾನಕ್ಕೋಸ್ಕರವಾಗಿಯೇ ಹೊರತು ಉದ್ಯೋಗ ಪಡೆಯುವುದಕ್ಕಲ್ಲ. ಓದಿಗೆ
ಆಯ್ಕೆಮಾಡಿಕೊಂಡ ವಿಷಯದಲ್ಲಿ ಒಂದಷ್ಟು ಜ್ಞಾನಸಂಪಾದನೆ ನಡೆಸಿದೆ. ದೇವರ ದಯೆಯಿಂದ ಯಾವುದೋ ಒಂದು
ಉದ್ಯೋಗ ದೊರಕಿದೆ. ಸಮಾಜದಲ್ಲಿ ಗೌರವಯುತವಾಗಿ ಬದುಕಲು ತೊಂದರೆಯಂತೂ ಇಲ್ಲ ಮುಂತಾದ ಉನ್ನತ ಚಿಂತನೆಗಳಿಂದ
ಸಮಾಧಾನಪಟ್ಟುಕೊಳ್ಳುವುದು ಅನಿವಾರ್ಯವಾಗಿದೆ.
ಇಂದು ಬೆಳಗ್ಗೆ ನಡೆದ ಘಟನೆಯೊಂದು ಈ ಎಲ್ಲಾ ವಿಷಯಗಳ ಮಂಥನವನ್ನು ನಡೆಸುವಂತೆ ಮಾಡಿತು. ಮುಂಜಾನೆ ಜೈಮಿನಿಭಾರತದ ಪುಟಗಳನ್ನು ತಿರುವುತ್ತಿದ್ದೆ. ಅದರಲ್ಲಿ ಶ್ರೀಕೃಷ್ಣನ ಊಟದ ಬಗೆಗಿನ ಪದ್ಯ ಓದುತ್ತಿದ್ದಾಗ ಬಾಯಲ್ಲಿ ನೀರೂರುತ್ತಿತ್ತು. ಏಕೆಂದರೆ ಅನೇಕ ಭಕ್ಷ್ಯಭೋಜ್ಯಗಳ ಉಲ್ಲೇಖ ಆ ಪದ್ಯದಲ್ಲಿತ್ತು.
ಎಸೆವ ಪೊಂಬರಿವಾಣ ಮಿಸುನಿವಟ್ಟಲ್ಗಳೊಳ್
ಮಿಸುಪ ಶಾಲ್ಯೋದನಂ ಸೂಪ ಘೃತ ಭಕ್ಷ್ಯ ಪಾ
ಯಸ ಪರಡಿ ಮಧು ಶರ್ಕರಾಮಿಷ ಪಳಿದ್ಯ ಸೀಕರಣೆ
ಶಾಕ ತನಿವಣ್ಗಳ
ರಸ ರಸಾಯನ ಸಾರ್ಗಳುಪ್ಪುಗಾಯ್ ಬಾಳಕಂ
ಕೃಸರಿ ಕಚ್ಚಡಿ ಪಾಲ್ಮೊಸರ್ಗಳಿವು
ಬಗೆಗೊಳಿಸಿ
ಪೊಸತೆನಿಸಿರಲ್ ಸವಿದನಚ್ಚ್ಯುತಂ
ದೇವಕಿಯಶೋದೆಯರ್ ತಂದಿಕ್ಕಲು
ಈ ಪದ್ಯವನ್ನು ಓದಿದಾಗ ಕುವೆಂಪುರವರ ರಾಮಾಯಣದರ್ಶನಂ ಮಹಾಕಾವ್ಯದಲ್ಲೂ ಇಂತಹ ಬಗೆಬಗೆಯ ಭಕ್ಷ್ಯಭೋಜ್ಯಗಳ ಹೆಸರಿರುವುದು ನೆನಪಾಯಿತು. ರಾಮಾಯಣದರ್ಶನವನ್ನು ತೆಗೆದು ಓದಿದರೆ ಅಲ್ಲಿಯೂ ಬಾಯಿನೀರೂರಿಸುವ ಭಕ್ಷ್ಯಗಳ ಪಟ್ಟಿ ಕಾಣುತ್ತಿತ್ತು.
ಈ ಪದ್ಯವನ್ನು ಓದಿದಾಗ ಕುವೆಂಪುರವರ ರಾಮಾಯಣದರ್ಶನಂ ಮಹಾಕಾವ್ಯದಲ್ಲೂ ಇಂತಹ ಬಗೆಬಗೆಯ ಭಕ್ಷ್ಯಭೋಜ್ಯಗಳ ಹೆಸರಿರುವುದು ನೆನಪಾಯಿತು. ರಾಮಾಯಣದರ್ಶನವನ್ನು ತೆಗೆದು ಓದಿದರೆ ಅಲ್ಲಿಯೂ ಬಾಯಿನೀರೂರಿಸುವ ಭಕ್ಷ್ಯಗಳ ಪಟ್ಟಿ ಕಾಣುತ್ತಿತ್ತು.
ನಳನಳಿಪ ಸುಳಿದಳಿರ ಕುಡಿವಾಳೆಯಂ ಪಾಸಿ ;
ಗೀಕುಚಾಪೆಯ ಮಣೆಗಳನು ಕುಳಿತುಕೊಳಲಿಕ್ಕಿ ;
ಪಸುರ್ದೊನ್ನೆಗಳಲಿ ತಿಳಿನೀರ್ಗಳಂ, ಸಸಿಯಡಕೆ
ಹೊಂಬಾಳೆಗಳಲಿ ಕೆನೆವಾಲ್ಗಳಂ ಜೇನ್ತುಪ್ಪಮಂ
ತಂದಿಟ್ಟು ; ನೂಲೆಗೆಣಸಂ,
ಬಾಳೆವಣ್ಗಳಂ,
ಕಂದಮೂಲಂಗಳಂ, ಹಣ್ಣುಹಂಪಲ್ಗಳಂ,
ಸೌತೆ ಪಚ್ಚಡಿಗಳಂ, ಮಣಿಹೆಂಬೆಯಂ,
ಮತ್ತೆ
ಹಚ್ಚನಕ್ಕಿಯ ಬೆಚ್ಚನನ್ನಮಂ ಮೊಸರುಮಂ
ಬೆಲ್ಲಮಂ ಬೆಣ್ಣೆಯಂ ಬಡಿಸಿ, ಸವಿನುಡಿ ನುಡಿಸಿ,
ಮುಗುಳುನಗುತೆಂದಳಿಂತು
ಕುಮಾರವ್ಯಾಸ ಭಾರತದಲ್ಲಿಯೂ ವಿರಾಟನ ಅಡುಗೆ
ಮನೆಯ ವರ್ಣನೆಯೂ ಇದೇ ರೀತಿಯದ್ದಾಗಿದೆ ಎಂದು ನೆನಪಾಯಿತು.
ಕೆಲದಲೊಟ್ಟಿದ ಪತ್ರ ಶಾಕಾ
ವಳಿಯ ಫಲರಾಸಿಗಳ ಕಳವೆಯ
ಹೊಳೆವುತಿಹ ರಾಜಾನ್ನದಕ್ಕಿಯ ಸಾಲ ಹರಿಯಣದ
ಕೆಲಬಲದ ಸಂಭಾರ ಚೂರ್ಣದ
ಲಲಿತ ಬೋನದ ವಿವಿಧ ಭಕ್ಷ್ಯಾ
ವಳಿಯ ಬಾಣಸದೊಳಗೆ ಬಂದಳು ಮತ್ತಗಜಗಮನೆ
ಹೀಗೆ ಕುಮಾರವ್ಯಾಸನು ವರ್ಣಿಸಿದ ವಿರಾಟನ
ಅಡುಗೆಮನೆಯನ್ನು ಕಂಡಾಗ ನನ್ನ ಅಡುಗೆ ಮನೆಯ ನೆನಪಾಯಿತು. ವಿವಿಧ ತಿಂಡಿಗಳ ಹೆಸರುಗಳನ್ನು
ಕೇಳಿದ್ದರಿಂದ ಹೊಟ್ಟೆ ಚುರುಗುಟ್ಟುತ್ತಿತ್ತು. ಸಮಯಕ್ಕೆ ಮೊದಲೇ ತಿಂಡಿ ತಿನ್ನಲು ಅಣಿಯಾದೆ.
ನನ್ನ ಅಡುಗೆ ಮನೆಯ ಡಬ್ಬಿಗಳೆಲ್ಲ ಖಾಲಿಯಾಗಿದ್ದವು. ಅತ್ಯುತ್ಸಾಹದಿಂದ ತುಸು ಮೊದಲೇ ಅಡುಗೆಗೆ
ಅಣಿಯಾದ್ದರಿಂದ ವಸ್ತುಗಳನ್ನು ಕೊಂಡು ತರಲು ಅಂಗಡಿಗಳು ತೆರೆದಿರಲಿಲ್ಲ. ಫ್ರಿಡ್ಜ್ ತೆರೆದಾಗ
ಹುಳಿ ಮಜ್ಜಿಗೆ ನನಗೆ ಯಾವಾಗ ಮೋಕ್ಷ ಎಂದು ಹೌಹಾರುತ್ತಿತ್ತು. ಪಕ್ಕದಲ್ಲೇ ಕೇರಳದ ಸ್ನೇಹಿತ
ತಂದಿಟ್ಟಿದ್ದ ಕುಚ್ಚಲು ಅಕ್ಕಿಯೂ ಇತ್ತು. ಕೆಲ ದಿನಗಳ ಹಿಂದಷ್ಟೇ ಈ ವರ್ಷದ ಮಾವಿನ ಕಾಯಿಯಿಂದ
ತಯಾರಿಸಿದ ಉಪ್ಪಿನಕಾಯಿಯೂ ದೃಷ್ಟಿಗೋಚರವಾಯಿತು. ಕಾವ್ಯಗಳಲ್ಲಿ ಓದಿದ್ದ ಪದಾರ್ಥಗಳೆಲ್ಲ ಮರೆತುಹೋಗಿ
ಕುಚ್ಚಿಲಕ್ಕಿ ಗಂಜಿ, ಹುಳಿ ಮಜ್ಜಿಗೆ, ಉಪ್ಪಿನಕಾಯಿಗಳೇ ಮಿಷ್ಟಾನ್ನ ಎಂದೆನಿಸತು. ಪುನಃ
ಒಂದುಬಾರಿ ಪ್ರಾಚೀನ ಕಾವ್ಯಗಳಲ್ಲಿ ಭಕ್ಷ್ಯ ಭೋಜ್ಯಗಳನ್ನು ಮೆಲ್ಲುತ್ತಿರುವಾಗ ಕುಕ್ಕರ್ ಕೂಗುತ್ತಿತ್ತು.
ವಿವಿಧ ವಿಶಿಷ್ಟ ಪದಾರ್ಥಗಳನ್ನೆಲ್ಲ ಬದಿಗೆ ಸರಿಸಿ ಗಂಜಿ ಮಜ್ಜಿಗೆ ಉಪ್ಪಿನಕಾಯಿಗಳ ರಸವನ್ನೊಂದನ್ನೇ
ನಾಲಗೆ ಸವಿಯುತ್ತಿತ್ತು.
ಜೀವಿತದ ಬಗೆಯು ಅಕ್ಷರಗಳಲ್ಲಿ ಮೂಡಿವೆ.
ಪ್ರತ್ಯುತ್ತರಅಳಿಸಿ