ಶುಕ್ರವಾರ, ನವೆಂಬರ್ 7, 2025

ಶ್ರೀಮದ್ರಾಮಾಯಣೀ ಗಂಗಾ

ವಾಲ್ಮೀಕಿಗಿರಸಂಭೂತಾ ರಾಮಾಂಭೋನಿಧಿಸಂಗತಾ । ಶ್ರೀಮದ್ರಾಮಾಯಣೀ ಗಂಗಾ ಪುನಾತಿ ಭುವನತ್ರಯಮ್ ॥

ಎಂಬ ಮಾತಿನ ಮೂಲಕ ಹಿರಿಯರು ರಾಮಾಯಣವನ್ನು ಗಂಗೆಯೆಂದೇ ಕರೆದಿದ್ದಾರೆ. ರಾಮಾಯಣ ಕತೆ ಕೇಳಿದವರ ಪಾಪಗಳು ತೊಳೆದು ಹೋಗುವುದರಿಂದ ರಾಮಾಯಣವನ್ನು ಗಂಗೆಗೆ ಹೋಲಿಸುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಗಂಗೆ ಪಾಪಗಳನ್ನು ತೊಳೆಯಬೇಕಾದರೆ ನಾವು ಗಂಗೆಯಲ್ಲಿ ಇಳಿಯಬೇಕು. ಆದರೆ ರಾಮಾಯಣದ ವಿಚಾರದಲ್ಲಿ ಹಾಗಲ್ಲ. ರಾಮಾಯಣ ಪಾಪವನ್ನು ತೊಳೆಯಬೇಕಾದರೆ ರಾಮಾಯಣವೇ ನಮ್ಮೊಳಗೆ ಇಳಿಯಬೇಕು. 

ಸಾಮಾನ್ಯವಾಗಿ ರಾಮಾಯಣದ ಕತೆ ಭಾರತೀಯರೆಲ್ಲರಿಗೂ ತಿಳಿದಿದೆ. ಅತಿ ಹೆಚ್ಚು ಪಾಶ್ಚಾತ್ಯ ಜೀವನ ಶೈಲಿಗೆ ಒಗ್ಗಿಕೊಂಡ ಕೆಲವರಿಗೆ ರಾಮಾಯಣ ತಿಳಿದಿರಲಿಕ್ಕಿಲ್ಲ. ಅಂತಹವರೂ ಇಂದು ತಮ್ಮ ಮಕ್ಕಳಿಗೆ ರಾಮಾಯಣವನ್ನು ಕಲಿಸುವ ಪ್ರಯತ್ನ ಮಾಡುತ್ತಿರುವುದೂ ಕಂಡುಬರುತ್ತಿದೆ. ಅಯೋಧ್ಯೆಯ ರಾಮಮಂದಿರದ ಪುನರ್ನಿರ್ಮಾಣದ ನಂತರವಂತೂ ರಾಮನ ಕುರಿತಾದ ಭಕ್ತಿ ಜನರಲ್ಲಿ ಹೆಚ್ಚುತ್ತಿದೆ.

ಅನೇಕ ಕವಿಗಳು ವಿವಿಧ ಭಾಷೆಗಳಲ್ಲಿ ರಾಮಾಯಣವನ್ನು ಬರೆದಿದ್ದಾರೆ. ಅದರ ಕಥಾಭಾಗದಲ್ಲಿ ಸಣ್ಣ ಸಣ್ಣ ವ್ಯತ್ಯಾಸಗಳೂ ಇವೆ. ಇವೆಲ್ಲದಕ್ಕೂ ಮೂಲ ವಾಲ್ಮೀಕಿ ಮಹರ್ಷಿಗಳು ಬರೆದ ರಾಮಾಯಣ. ಸುಮಾರು ಇಪ್ಪತ್ತನಾಲ್ಕುಸಾವಿರ ಶ್ಲೋಕಗಳಿರುವ ರಾಮಾಯಣವನ್ನು ಸಾಮಾನ್ಯವೇಗದಲ್ಲಿ ನಿರಂತರವಾಗಿ ಓದಿದರೆ ಸುಮಾರು ಅರವತ್ತು ಘಂಟೆಗಳಷ್ಟು ಸಮಯದಲ್ಲಿ ಓದಬಹುದು. ರಾಮಾಯಣ ಕಥೆ ಗೊತ್ತಿರುವವರು ಹಾಗೂ ಸಾಮಾನ್ಯ ಶ್ಲೋಕಗಳ ಉಚ್ಚಾರಣೆಯ ಅಭ್ಯಾಸವಿರುವವರು ಸರಾಗವಾಗಿ ರಾಮಾಯಣದ ಪಾರಾಯಣ ಮಾಡಬಹುದು.

ರಾಮಾಯಣ ಜಗತ್ತಿನ ಆದಿಕಾವ್ಯ. ಆದರೆ ಅನೇಕ ಸಂಸ್ಕೃತ ವಿಶ್ವವಿದ್ಯಾಲಯಗಳ  ಪಾಠ್ಯಕ್ರಮದಲ್ಲಿ ರಾಮಾಯಣದ ಶ್ಲೋಕಗಳನ್ನು ಅಳವಡಿಸಲಾಗಿಲ್ಲ. ಸ್ಪಲ್ಪ ಪ್ರೌಢವಾದ ಬೇರೆ ಕಾವ್ಯಗಳನ್ನು ಓದಿದ ವಿದ್ಯಾರ್ಥಿಗಳು ರಾಮಾಯಣವನ್ನು ಸುಲಭವಾಗಿ ಓದಬಹುದು ಎಂಬ ಕಾರಣದಿಂದ ರಾಮಾಯಣವನ್ನು ಪಾಠ್ಯಕ್ರಮದಲ್ಲಿ ಇಟ್ಟಿರಲಿಕ್ಕಿಲ್ಲ ಎಂಬುವುದು ಅನೇಕರ ಊಹೆ. ಆದರೆ ಪರೀಕ್ಷೆಯಲ್ಲಿ ಉತ್ತೀರ್ಣವಾಗುವುದನ್ನೇ ಗುರಿಯಾಗಿಸಿಕೊಂಡಿರುವ ವಿದ್ಯಾರ್ಥಿಗಳು ರಾಮಾಯಣವನ್ನು ಕಣ್ಣೆತ್ತಿಯೂ ನೋಡುತ್ತಿರಲಿಲ್ಲ. ಇಂತಹ ಮಹಾಕಾವ್ಯದ ಅಧ್ಯಯನವಾಗಬೇಕು ಎಂಬ ಆಸ್ಥೆಯಿಂದ 2016ರಲ್ಲಿ ಸಮಾನಮನಸ್ಕರಾದ ಕೆಲವು ವಿದ್ಯಾರ್ಥಿಗಳು ಸೇರಿ ಪ್ರತಿದಿನ ವಾಲ್ಮೀಕಿರಾಮಾಯಣ ಮಾಡುವುದಾಗಿ ನಿರ್ಧರಿಸಿದೆವು. ಸುಮಾರು 60 ದಿನಗಳ ಕಾಲ ಪ್ರತಿದಿನವೂ ಒಂದು ಗಂಟೆಯಂತೆ ರಾಮಾಯಣ ಪಾರಾಯಣ ನಡೆಯಿತು.

ತದನಂತರ 2019 ರಲ್ಲಿ ರಾಮಮಂದಿರದ ತೀರ್ಪು ಹೊರಬಿದ್ದ ಸಂತಸದಲ್ಲಿ ಬೆಂಗಳೂರಿನ ನಮ್ಮ ಕಛೇರಿಯಲ್ಲಿ ಅಖಂಡ ರಾಮಾಯಣ ಪಾರಾಯಣದ ಆಯೋಜನೆಯಾಯಿತು. ರಾಮಾಯಣ ಓದಲು ಸಾಮರ್ಥ್ಯವಿರುವ ಸುಮಾರು 30 ತಂಡಗಳನ್ನು ಗುರುತಿಸಿ ಅವರಿಗೆ ಎರಡು ಘಂಟೆಗಳ ಕಾಲಾವಧಿಯಲ್ಲಿ ಓದಬೇಕಾಗಿರುವ ಭಾಗವನ್ನು ನಿರ್ದೇಶಿಸಲಾಯಿತು. ಕಾರ್ಯಕ್ರಮದಲ್ಲಿ ಓದುತ್ತಿರುವ ತಂಡದ ವೇಗವನ್ನು ನಿಯಂತ್ರಿಸಿ ಕ್ಲೃಪ್ತ ಸಮಯದಲ್ಲಿ ಮುಗಿಯಬೇಕಾದಷ್ಟು ಅಧ್ಯಾಯಗಳನ್ನು ಮುಗಿಸಬೇಕಾದ ಜವಾಬ್ದಾರಿ ನನಗಿತ್ತು. ರಾತ್ರಿಯ ಕಾಲದ ಸಮಯ ನಿಯಂತ್ರಣವನ್ನು ನಾನು ನಿರ್ವಹಿಸುತ್ತಿದ್ದೆ.

ಆಮೇಲೆ 2023 ರಲ್ಲಿ ಬೆಂಗಳೂರಿನ 7 ಕಡೆಗಳಲ್ಲಿ 7 ಕಾಂಡಗಳ ಪಾರಾಯಣವನ್ನು ಪ್ರತಿ ಭಾನುವಾರವೂ ಆಯೋಜಿಸಲಾಯಿತು. ಸ್ಥಳೀಯ ಜನರು ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಲ್ಲಿನ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಯೋಗವೂ ನನ್ನದಾಗಿತ್ತು. ಶೃಂಗೇರಿ ಹಾಗೂ ಮಂಗಳೂರುಗಳಲ್ಲಿ ಅಖಂಡರಾಮಾಯಣ ಪಾರಾಯಣವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಸುದ್ದಿಯೂ ನನ್ನ ಕಿವಿಗೆ ಬಿದ್ದಿತ್ತು.

ಹೀಗೆ ಅನೇಕ ಕಡೆಗಳಲ್ಲಿ ವಾಲ್ಮೀಕಿರಾಮಾಯಣ ಪಾರಾಯಣಗಳಲ್ಲಿ ಸಕ್ರಿಯವಾಗಿದ್ದ ನನಗೆ ನಮ್ಮ ಮನೆಯಲ್ಲೂ ಪಾರಾಯಣ ಮಾಡಬೇಕು ಎಂದೆನಿಸಿತು. ಈ ಹಿಂದೆ 2024 ಹಾಗೂ 2025 ರಲ್ಲಿ ಹನುಮಜ್ಜಯಂತಿಯ ಹಿಂದಿನ ದಿನ ಸುಂದರಕಾಂಡದ ಪಾರಾಯಣವನ್ನೂ ನಾನು ಮಾಡಿದ್ದೆ. ಹೀಗೆ ನನ್ನ ಮನಸ್ಸಿನಲ್ಲಿ ಸುಪ್ತವಾಗಿದ್ದ ಕಲ್ಪನೆ 2025 ರ ಗಣೇಶ ಚತುರ್ಥಿಯ ಕಾಲದಲ್ಲಿ ಮೊಳಕೆಯೊಡೆಯಿತು.

ರಾಮಾಯಣ ಪಾರಾಯಣದ ವಿಧಿ, ಪ್ರತಿದಿನವೂ ಓದಬೇಕಾದ ಅಧ್ಯಾಯಗಳ ವಿಭಾಗ, ರಾಮಾಯಣ ಪಾರಾಯಣಕ್ಕೆ ಸೂಕ್ತ ಕಾಲ ಮುಂತಾದ ವಿವರಣೆಗಳೆಲ್ಲಾ ರಾಮಾಯಣ ಗ್ರಂಥದಲ್ಲಿದ್ದವು. ಪ್ರತಿದಿನವೂ 6-7 ಗಂಟೆಗಳ ಪಾರಾಯಣ ಮಾಡಬೇಕಾಗಿ ಬರುತ್ತದೆ ಎಂಬ ಅರಿವಿತ್ತು. ರಾಮಾಯಣ ಪಾರಾಯಣದ ಶ್ರೋತೃವಾಗಿ ಹನುಮಂತನನ್ನು ಪ್ರತಿಷ್ಠಾಪಿಸುವುದು, ರಾಮಪೂಜೆಗೆ ಕೋಸಂಬರಿ ಹಾಗೂ ಪಾನಗಳ ನೈವೇದ್ಯ ಮಾಡುವುದು ಮೊದಲಾದ ಕ್ರಮಗಳಂತೂ ಜಗತ್ಪ್ರಸಿದ್ಧ. ಆದ್ದರಿಂದ ಪ್ರತಿದಿನ ಬೆಳಗ್ಗೆ ಪಾರಾಯಣ ಆರಂಭಿಸಿ ಸಂಜೆಯ ಕಾಲಕ್ಕೆ ಕೆಲವು ಅಧ್ಯಾಯಗಳನ್ನು ಉಳಿಸಿಕೊಂಡು ಸಂಜೆ 6 ಗಂಟೆಗೆ ಮುಗಿಯುವಂತೆ ಪಾರಾಯಣ ಮಾಡಿ ರಾಮನಿಗೆ ಮಂಗಳಾರತಿ ಮಾಡುವುದು. ಕೋಸಂಬರಿ-ಪಾನಕಗಳ ನೈವೇದ್ಯ ಮಾಡಿ ಸುತ್ತಮುತ್ತಲಿನ ಹತ್ತಿಪ್ಪತ್ತು ಜನರನ್ನು ಕರೆದು ಹಂಚುವುದು ಎಂಬ ಯೋಚನೆಯಿತ್ತು.

ಮನೆಯ ಹಿರಿಯರೊಂದಿಗೆ ಈ ಯೋಚನೆಯನ್ನು ತಿಳಿಸಿದಾಗ ಪಾರಾಯಣಕ್ಕೆ ಸಂತಸದಿಂದಲೇ ಸಮ್ಮತಿಸಿದರು. ಆದರೆ ಪಾನಕ-ಕೋಸಂಬರಿ ಮಾತ್ರ ಹಂಚುವ ಯೋಜನೆಗೆ ಸಮ್ಮತಿಯಿರಲಿಲ್ಲ. ಇಂತಹ ಅಪರೂಪದ ಕಾರ್ಯಕ್ರಮವನ್ನು ಸ್ವಲ್ಪಮಟ್ಟಿದೆ ವಿಜೃಂಭಣೆಯಿಂದಲೇ ಮಾಡಬೇಕು ಎಂಬುವುದು ಮನೆಯ ಸದಸ್ಯರ ಅಭಿಪ್ರಾಯವಾಗಿತ್ತು. ವಿಶಿಷ್ಟ ಕಾರ್ಯಕ್ರಮವಾದ್ದರಿಂದ ನೆರೆಕರೆಯವರನ್ನೂ ಬಂಧು ಮಿತ್ರರನ್ನೂ ಕರೆದರೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ. ಆದ್ದರಿಂದ ಪ್ರತಿದಿನ ಮಧ್ಯಾಹ್ನವೇ ಮಹಾಮಂಗಳಾರತಿ ಮಾಡಿ ಬಂದವರಿಗೆಲ್ಲರಿಗೂ ಊಟದ ವ್ಯವಸ್ಥೆ ಮಾಡುವುದು ಸೂಕ್ತ ಎಂಬ ನಿರ್ಣಯವಾಯಿತು.  ಒಂಭತ್ತು ದಿನಗಳ ಕಾರ್ಯಕ್ರಮವಾದುದರಿಂದ ಪ್ರತಿದಿನವೂ ಮರುದಿನದ ತಯಾರಿಗಳೂ ನಡೆಯಬೇಕು. ಆದುದರಿಂದ ರಾತ್ರಿ ಯಾವುದೇ ವಿಶೇಷ ಕಾರ್ಯಕ್ರಮಗಳನ್ನು ಇಟ್ಟುಕೊಳ್ಳದೇ ಭಜನೆ ಹಾಗೂ ರಾಮನಿಗೆ ಪಂಚೋಪಚಾರ ಪೂಜೆಯನ್ನಷ್ಟೇ ಮಾಡುವುದು ಎಂದ ತೀರ್ಮಾನಿಸಲಾಯಿತು. ದೀಪಾವಳಿಯ ನಂತರ ಕಾರ್ತಿಕ ಪಂಚಮಿಯಿಂದ ತ್ರಯೋದಶಿಯವರೆಗೆ (26.10.2025 ರಿಂದ 03.11.2025) ಕಾರ್ಯಕ್ರಮ ನಡೆಸುವುದಾಗಿ ದಿನಾಂಕವನ್ನೂ ನಿರ್ಧರಿಸಲಾಯಿತು.

ರಾಮಾಯಣದ ಕುರಿತಾದ ಉಪನ್ಯಾಸಗಳನ್ನು ಯೋಜಿಸಿದರೆ ಕಾರ್ಯಕ್ರಮ ಇನ್ನೂ ಉತ್ತಮವಾಗಬಹುದು ಎಂಬ ಅಭಿಪ್ರಾಯವೂ ಬಂದಿತು. ಜನರೆಲ್ಲ ಸಭಾ ಕಾರ್ಯಕ್ರಮಗಳನ್ನು ನೋಡಿ ನೋಡಿ ರೋಸಿ ಹೋಗಿರುವುದರಿಂದ ಉಪನ್ಯಾಸಕರ ಪರಿಚಯ, ಒಂದು ರಾಮಭಜನೆ, ಕೊನೆಯಲ್ಲಿ ಉಪನ್ಯಾಸಕರಿಗೆ ಸನ್ಮಾನ ಇವಿಷ್ಟು ಕಾರ್ಯಕ್ರಮಗಳು 50 ನಿಮಿಷಗಳಲ್ಲಿ ಮುಗಿಯುವಂತೆ ಉಪನ್ಯಾಸಗಳನ್ನು ಪ್ರತಿದಿನವೂ ಯೋಜಿಸಲಾಯಿತು. ಉಪನ್ಯಾಸಕರನ್ನು ಜೋಡಿಸುವುದಕ್ಕೆ ಎರಡು ತಿಂಗಳುಗಳ ಸಮಯವಿದ್ದುದರಿಂದ ವಿದ್ವಾಂಸರ ಸಂಪರ್ಕವನ್ನಾರಂಭಿಸಿದೆ. ಹೆಚ್ಚು ಕಷ್ಟವಿಲ್ಲದೇ ವಿದ್ವಾಂಸರು ಬರಲು ಒಪ್ಪಿದರು. ರಾಮಾಯಣದ ಕತೆ ಎಲ್ಲರಿಗೂ ಗೊತ್ತಿರುವುದರಿಂದ ಕೆಲವೊಂದಿಷ್ಟು ನಿರ್ದಿಷ್ಟ ವಿಷಯಗಳನ್ನು ಸೂಚಿಸಲಾಯಿತು. ಆ ವಿಷಯಗಳನ್ನು ಆಶ್ರಯಿಸಿ ವಿದ್ವಾಂಸರ ವ್ಯಾಖ್ಯಾನವಾಯಿತು. ವಿಷಯಗಳು ಈ ಕೆಳಕಂಡಂತಿವೆ.


ದಿನಾಂಕ

ವಿಷಯ

ವ್ಯಾಖ್ಯಾನಕಾರರು

26.10.2025
ಭಾನುವಾರ

ಕಾರ್ಯಸಾಧಕ ಹನುಮಂತ

ಶ್ರೀ. ರವಿಶಂಕರ ಭಟ್ಟ
ತಂತ್ರಜ್ಞಾನ ಸಹಾಯಕರು, ಶೃಂಗೇರಿ

27.10.2025
ಸೋಮವಾರ

ರಾಮಾಯಣದ ಹೃದಯ ಅಯೋಧ್ಯಾಕಾಂಡ

ಶ್ರೀ ಉಮಾಮಹೇಶ್ವರ
ರಾಮಾಯಣ ವಿದ್ವಾಂಸರು, ಬೆಂಗಳೂರು

28.10.2025
ಮಂಗಳವಾರ

ಲಕ್ಷ್ಮಣ ಹಾಗೂ ಭರತ

ಶ್ರೀ ಮಹೇಶ ಕಾಕತ್ಕರ್
ಉಪನ್ಯಾಸಕರು, ಶೃಂಗೇರಿ

29.10.2025
ಬುಧವಾರ

ರಾವಣನಿಗೆ ಉಪದೇಶಗಳು

ಶ್ರೀ. ದಿನಕರ ಗೋಖಲೆ
ಯಕ್ಷಗಾನ ಕಲಾವಿದರು, ದರ್ಭೆತಡ್ಕ

30.10.2025
ಗುರುವಾರ

ರಾಮಾಯಣದಲ್ಲಿ ಜೀವನಪ್ರೀತಿ

ಶ್ರೀ. ರಾಘವೇಂದ್ರ ಭಟ್ಟ
ಉಪನ್ಯಾಸಕರು, ಶೃಂಗೇರಿ

31.10.2025
ಶುಕ್ರವಾರ

ರಾಮನ ಆದರ್ಶ ಗುಣಗಳು

ಶ್ರೀಮತೀ ಪ್ರತಿಭಾ
ಗೃಹಿಣಿ, ಬೆಂಗಳೂರು

01.11.2025
ಶನಿವಾರ

ಕಷ್ಟಸಹಿಷ್ಣು ರಾಮ

ಶ್ರೀ. ಪದ್ಮನಾಭ ಮರಾಠೆ
ಉಪನ್ಯಾಸಕರು, ಕಟೀಲು

02.11.2025
ಭಾನುವಾರ

ಲೋಕಮಾತೆ ಸೀತೆ

ಶ್ರೀ ವೆಂಕಟೇಶ ಕುಮಾರ
ಶಿಕ್ಷಕರು, ಸುಳ್ಯ

03.11.2025
ಸೋಮವಾರ

ರಾಮಾಯಣದ ಮಹತ್ತ್ವ

ಶ್ರೀ. ಟಿ. ಎನ್. ಪ್ರಭಾಕರ
ಸಂಸ್ಕೃತ ವಿದ್ವಾಂಸರು, ಮೈಸೂರು


25.10.2025 ರಂದು ಪುಣ್ಯಾಹವಾಚನ ಹಾಗೂ ಗಣಹವನದೊಂದಿಗೆ ಕಾರ್ಯಕ್ರಮದ ಆರಂಭವಾಯಿತು. ಆದಿನ ರಾಮಾಯಣದ ಮಾಹಾತ್ಮ್ಯದ ಪಾರಾಯಣ ಮಾಡಲಾಯಿತು. ಮೊದಲೇ ಸಿದ್ಧವಾಗಿದ್ದ ಮಂಟಪದಲ್ಲಿ ಪುಸ್ತಕಗಳನ್ನು ಸ್ಥಾಪಿಸಲಾಯಿತು. ನಮ್ಮ ಮನೆಯಲ್ಲಿದ್ದ 3 ಸೆಟ್ ಪುಸ್ತಕಗಳು, ನಮ್ಮ ಊರಿನ ಪುರೋಹಿತರು ಕೊಟ್ಟಿದ್ದ 1 ಸೆಟ್ ಪುಸ್ತಕ, ನಾನು ಗ್ರಂಥಾಲಯದಿಂದ ತಂದಿದ್ದ 2 ಸೆಟ್ ಪುಸ್ತಕಗಳು, ದಾನ ಕೊಡಲು ಖರೀದಿಸಿದ್ದ 1 ಸೆಟ್ ಪುಸ್ತಕ ಹೀಗೆ ಒಟ್ಟು 7 ಸೆಟ್ ಪುಸ್ತಕಗಳನ್ನು ಸ್ಥಾಪಿಸಲಾಯಿತು. ದೇವನಾಗರಿ ಲಿಪಿಯ ಒಂದೇ ಪುಸ್ತಕದಲ್ಲಿ ಇಡಿಯ ರಾಮಾಯಣ ಮುದ್ರಿತವಾಗಿತ್ತು. ಕನ್ನಡದ ಲಿಪಿಯ ಒಂದು ಸೆಟ್ ನಲ್ಲಿ ತಲಾ ಮೂರು ಪುಸ್ತಕಗಳಿದ್ದವು. ಮತ್ತೊಂದರಲ್ಲಿ 12 ಪುಸ್ತಕಗಳ ಎರಡು ಸೆಟ್ ಪುಸ್ತಗಳಿದ್ದವು. ಹೀಗೆ ಒಟ್ಟು 36 ಪುಸ್ತಕಗಳು ಮಂಟಪದಲ್ಲಿದ್ದವು. ಪುಸ್ತಕಗಳ ಹಿಂದ ರಾಮ-ಸೀತೆ-ಲಕ್ಷ್ಮಣ-ಹನುಮಂತರ ಚಿತ್ರ ಸ್ಥಾಪಿಸಲಾಯಿತು. ನಮ್ಮ ತೋಟದಲ್ಲಿ ನೆಲೆಯಾಗಿರುವ ಹನುಮಂತನ ಆವಾಹನೆಯನ್ನು ತೆಂಗಿನಕಾಯಿಯಲ್ಲಿ ಮಾಡಿ ಶ್ರೋತೃವಿನ ಪೀಠದಲ್ಲಿ ಕುಳ್ಳಿರಿಸಲಾಯಿತು. ಪುಣ್ಯಾಹವಾಚನದ ನಂತರ ರಾಮಾಯಣಮಾಹಾತ್ಮ್ಯ ಓದಲಾಯಿತು.

ಮರುದಿನದಿಂದ ಪ್ರತಿದಿನವೂ ಬೆಳಗ್ಗೆ ರಾಮಾಯಣ ಗ್ರಂಥಗಳಿಗೆ ಪಂಚೋಪಚಾರ ಪೂಜೆ ಹಾಗೂ ರಾಮತಾರಕ ಜಪದ ನಂತರ 5.30 ಕ್ಕೆ ಪಾರಾಯಣದ ಆರಂಭವಾಗುತ್ತಿತ್ತು. ಮಧ್ಯದಲ್ಲಿ ಪಾನೀಯ ಹಾಗೂ ತಿಂಡಿಗೆ ಎರಡು ಸಣ್ಣ ವಿರಾಮಗಳನ್ನು ಕೊಟ್ಟು 11.30 ಕ್ಕೆ ಮುಗಿಯುವಂತೆ ಪಾರಾಯಣ ಮಾಡಲಾಗುತ್ತಿತ್ತು. ಒಂದೆರಡು ದಿನ 11.30 ಕ್ಕೆ ಆ ದಿನದ ಭಾಗ ಮುಗಿಯದಾಗ ರಾತ್ರಿ ಪೂಜೆಯ ಮೊದಲು ಉಳಿದ ಭಾಗವನ್ನು ಓದಲಾಯಿತು. 11.30 ಕ್ಕೆ ಆರಂಭಿಸಿ ನೈವೇದ್ಯ ಹಾಗೂ ಮಂಗಳಾರತಿ  ಮಾಡಲಾಗುತ್ತಿತ್ತು. ಮಂಗಳಾರತಿಯ ಆರಂಭದಲ್ಲಿ ತುಪ್ಪದ ದೀಪಗಳನ್ನು ಹೆಂಗಸರು ಎತ್ತುತ್ತಿದ್ದರು. ಮಂಗಳಾರತಿಯ ನಂತರ ವೈದಿಕರ ಪೂಜೆ ನಡೆದು ತದನಂತರ ವ್ಯಾಖ್ಯಾನ ನಡೆಯುತ್ತಿತ್ತು. ವ್ಯಾಖ್ಯಾನದ ನಂತರ ಪ್ರಸಾದ ವಿತರಣೆ ನಡೆಯುತ್ತಿತ್ತು. ಪಂಚಗಜ್ಜಾಯದ ಪ್ಯಾಕೆಟ್-ಗಳನ್ನು ಹೂವಿನ ಪ್ರಸಾದದೊಂದಿಗೆ ಎಲ್ಲರಿಗೂ ವಿತರಿಸಲಾಯಿತು. ಈ ಎಲ್ಲಾ ಕಾರ್ಯಕ್ರಮಗಳೂ ನಡೆದು ಪ್ರತಿದಿನವೂ ಮಧ್ಯಾಹ್ನ 1.00 – 1.15 ರ ಒಳಗೆ ಮೊದಲನೇ ಪಂಕ್ತಿಯ ಊಟ ಆರಂಭವಾಗುತ್ತಿತ್ತು. ಪ್ರತಿದಿನ ಸಂಜೆ ಭಜನೆ ಹಾಗೂ ಪಂಚೋಪಚಾರ ಪೂಜೆ ನಡೆಲಾಗುತ್ತಿತ್ತು. 02.10.2025 ಏಕಾದಶಿಯಂದು ನಮ್ಮೂರಿನ ಭಜನಾ ಮಂಡಳಿಯವರು ಉಪಸ್ಥಿತರಿದ್ದು ಸುಮಾರು ಎರಡು ಗಂಟೆಗಳ ಕಾಲ ಭಜನೆ ಸೇವೆ ನಡೆಸಿದರು.

ಒಂದು ಕಾರ್ಯಕ್ರಮವನ್ನು ತಾವೇ ಮುತುವರ್ಜಿ ವಹಿಸಿಕೊಂಡು ನಡೆಸುವಾಗ ಆತಂಕಗಳಾಗುವುದು ಸಹಜ. ನಮ್ಮ ಮನೆಯವರೆಲ್ಲರಿಗೂ ಮೊದಲ ದಿನದಿಂದಲೇ ಇಂತಹ ಆತಂಕಗಳಿತ್ತು. ಆದರೆ ಕ್ರಮೇಣ ಊರಿನ ಜನರ ಹಾಗೂ ಬಂಧು ಬಾಂಧವರ ಸಹಕಾರದಿಂದ ಆತಂಕ ಕಡಿಮೆಯಾಗತೊಡಗಿತು. ಪಾರಾಯಣ ಆರಂಭದ ಹಿಂದಿನ ದಿನವೇ ಊರಿನ ಉತ್ಸಾಹಿ ತರುಣರ ತಂಡದವರು ಬಂದು ಅಲಂಕಾರಗಳನ್ನು ಮಾಡಿದರು. ಊರಿನ ಜನರು ಬಾಳೆಗೊನೆ, ಬಾಳೆಎಲೆ, ತೆಂಗಿನಕಾಯಿ ಹಾಗೂ ಕೆಲವೊಂದಿಷ್ಟು ದಿನಸಿ ಸಾಮಾನುಗಳನ್ನೂ ತಂದು ಕೊಟ್ಟರು. ಕೆಲವರು ಸ್ವೀಟಿನ ಪ್ರಾಯೋಜಕತ್ವವನ್ನು ವಹಿಸಿಕೊಂಡರು. ಕೆಲವು ಹೆಂಗಸರು ಬೇಗ ಬಂದು ಹೂವು ಕಟ್ಟುವುದು, ಆರತಿಯ ಅಲಂಕಾರ ಮುಂತಾದ ಕೆಲಸಗಳಲ್ಲಿ ಸಹಕರಿಸಿದರು. ತರಕಾರಿ ಹೆಚ್ಚುವುದು ಬಡಿಸುವುದು ಮೊದಲಾದ ಜವಾಬ್ದಾರಿಗಳನ್ನು ಊರಿನ ಜನರೇ ವಹಿಸಿಕೊಂಡು ಪರಸ್ಪರ ಸಮಾಲೋಚನೆ ನಡೆಸಿ ಪಾಳಿಯಂತೆ ನಿರ್ವಹಿಸಿದರು. ವ್ಯಾಖ್ಯಾನದ ಮೊದಲು ಭಜನೆ ಹಾಡುವುದರ ಮೂಲಕ ವ್ಯಾಖ್ಯಾನದ ಪ್ರಭಾವ ಹೆಚ್ಚಿಸಬೇಕು ಎಂದು ಕೇಳಿಕೊಂಡ ತತ್ಕ್ಷಣ ಸಂತೋಷದಿಂದ ಒಪ್ಪಿ ಭಜನೆ ಹಾಡಿದರು. ಹಳ್ಳಿಗಳೆಂದರೆ ವೃದ್ಧಾಶ್ರಮದಂತಾಗಿರುವ ಸ್ಥಿತಿಯಲ್ಲೂ ಇಂತಹ ಕಾರ್ಯಕ್ರಮದಲ್ಲಿ ಜನರೆಲ್ಲರೂ ಉತ್ಸಾಹದಿಂದ ಭಾಗವಹಿಸಿದ್ದು ಎಲ್ಲರಿಗೂ ಆಶ್ಚರ್ಯವಾಗಿತ್ತು. ಕೆಲವು ಬಂಧುಗಳು ಒಂದೆರಡು ದಿನ ನಮ್ಮ ಮನೆಯಲ್ಲೇ ವಾಸವಿದ್ದು ಎಲ್ಲಾ ಕೆಲಸಗಳಲ್ಲೂ ಸಹಕರಿಸಿದರು.

ಮಂಗಳೂರಿನ ಅಜ್ಜ ಕಾರ್ಯಕ್ರಮ ನಡೆಯುವಾಗ ಅಷ್ಟೂ ದಿನಗಳೂ ಜತೆಯಾಗಿದ್ದರು. ಅಜ್ಜಿ ಚುರುಕಾಗಿ ಓಡಾಡುತ್ತಾ ಎಲ್ಲಾ ಕೆಲಸಗಳನ್ನೂ ಮಾಡುತ್ತಿದ್ದರು. ನನ್ನ ಚಿಕ್ಕಮ್ಮ ಹಾಗೂ ಹೆಂಡತಿ ಪ್ರತಿದಿನವೂ ಅಡುಗೆಯ ಕುರಿತಾಗಿ ಗಮನ ಹರಿಸುವುದರ ಜೊತೆ ಪೂಜೆಯ ತಯಾರಿ, ಅಲಂಕಾರ, ರಂಗೋಲಿ, ಅತಿಥಿಸತ್ಕಾರ ಮುಂತಾದ ಕೆಲಸಗಳನ್ನು ಜವಾಬ್ದಾರಿಯಿಂದ ನಿರ್ವಹಿಸುತ್ತಿದ್ದರು. ಅಪ್ಪ ಪೂಜೆಯ ತಯಾರಿ ನೋಡಿಕೊಂಡರೆ ಚಿಕ್ಕಪ್ಪ ಅಡುಗೆ ಊಟ ಮುಂತಾದ ವಿಷಯಗಳಲ್ಲಿ ಗಮನವಹಿಸುತ್ತಿದ್ದರು. ನನ್ನ ತಮ್ಮ ದೂರದೂರಿನಿಂದ ಬರುವವರನ್ನು ಕರೆತರುವ ವ್ಯವಸ್ಥೆ, ಛಾಯಾಚಿತ್ರ ತೆಗೆಯುವುದು ಮುಂತಾದುವುಗಳನ್ನು ಮಾಡುತ್ತಿದ್ದ. ಅಡುಗೆಯ ಜವಾಬ್ದಾರಿ ವಹಿಸಿಕೊಂಡಿದ್ದ ದಿನೇಶ ಅಭ್ಯಂಕರ್ ಹಾಗೂ ಸೀತಾರಾಮ ತಾಮ್ಹಣ್ಕರ್ ರುಚಿಯಾದ ಅಡುಗೆಯನ್ನು ಮಾಡುತ್ತಿದ್ದರು. ಪ್ರತಿದಿನವೂ ಎಷ್ಟು ಜನ ಆಗಮಿಸಬಹುದು ಎಂದು ನಿಖರವಾಗಿ ಊಹಿಸುವುದು ಕಷ್ಚಸಾಧ್ಯವಾಗಿತ್ತು. ಅದಾಗ್ಯೂ ಸಾಮಾನ್ಯವಾಗಿ ಯಾವ ದಿನವೂ ಅಡುಗೆ ಎಸೆದು ಹಾಳುಮಾಡುವಷ್ಟು ಉಳಿಯಲಿಲ್ಲ. ಕಡಿಮೆಯೂ ಆಗಲಿಲ್ಲ.

ಬಂಧುವೊಬ್ಬರು 9 ದಿನಗಳ ಪಾರಾಯಣದಲ್ಲಿ ಎಂಟು ದಿನವೂ ಉಪಸ್ಥಿತರಿದ್ದರು. ಮನೆ ತುಂಬಾ ದೂರವಿದ್ದರೂ ನಾಲ್ಕೈದು ದಿನಗಳ ಕಾಲ ಊರಿನ ಅನೇಕರು ತಮ್ಮ ಮನೆಯ ಸಮಸ್ಯೆಗಳನ್ನೂ, ಆರೋಗ್ಯ ಬಾಧೆಯನ್ನೂ, ವಯಸ್ಸನ್ನೂ ಲೆಕ್ಕಿಸದೆ ಉಪಸ್ಥಿತರಿದ್ದರು. ಕೆಲವರಂತೂ ಮುಂಜಾನೆ ಕೆಲಸದಲ್ಲಿ ಸಹಾಯ ಮಾಡಲು, ವ್ಯಾಖ್ಯಾನ ಕೇಳಲು ಮಧ್ಯಾಹ್ನ ಹೀಗೆ ಎರಡೆರಡು ಬಾರಿಯೂ ಬರುತ್ತಿದ್ದರು. ದೂರದ ಬೆಂಗಳೂರು ಮುಂತಾದ ಊರುಗಳಿಂದಲೂ ಉಪಸ್ಥಿತರಿದ್ದ ಜನ ಪಾರಾಯಣದಲ್ಲಿ ಭಾಗವಹಿಸಿದರು.

ಪ್ರತಿದಿನವೂ ಪಾರಾಯಣಕ್ಕೆ ಮೊದಲು ಆ ದಿನದ ಭಾಗವಿರುವ ಪುಸ್ತಕಗಳನ್ನು ನಾನು ಮಂಟಪದಿಂದ ತೆಗೆದಿರಿಸಲಾಗುತ್ತಿತ್ತು. ಶ್ರೋತೃಗಳಾಗಿ ಬಂದವರೂ ಪುಸ್ತಕವನ್ನು ನೋಡುತ್ತಾ ಪಾರಾಯಣ ಕೇಳಲು ಅನುಕೂಲವಾಗುತ್ತಿತ್ತು. ರಾಮಾಯಣ ಓದಿ ಅಭ್ಯಾಸವಿದ್ದವರು ಮುಖ್ಯ ವಕ್ತೃವಿನೊಂದಿಗೆ ದನಿಗೂಡಿಸುತ್ತಿದ್ದರು. ಪ್ರತಿದಿನವೂ ಕೊನೆಯ ಅಧ್ಯಾಯವನ್ನು ನಿಧಾನವಾಗಿ ಉಚ್ಚಸ್ವರದಲ್ಲಿ ಓದಲಾಗುತ್ತಿತ್ತು. ಇದರಿಂದ ಸುಮಾರು 7-8 ಜನ ಒಟ್ಟಾಗಿ ಕೊನೆಯ ಅಧ್ಯಾಯವನ್ನು ಓದುವುದು ಕಂಡುಬರುತ್ತಿತ್ತು.

ಪ್ರಥಮ ದಿನ 60, ಮುಂದಿನ ಮೂರು ದಿನಗಳ ಕಾಲ 35-40, ಐದು ಹಾಗೂ ಆರನೆಯ ದಿನ ಸುಮಾರು 60 ಕೊನೆಯ ಮೂರು ದಿನಗಳಲ್ಲಿ ಸುಮಾರು 100 ಕ್ಕಿಂತಲೂ ಹೆಚ್ಚು ಜನ ಕಾರ್ಯಕ್ರಮದಲ್ಲಿ ಭಾಗಿಯಾದರು. 03.11.20225  ರಂದು ಕೊನೆಯ ದಿನ ಹನುಮಂತನನ್ನು ತೋಟದಲ್ಲಿ ಪುನಃ ಸ್ಥಾಪಿಸಿ ರಾಮಾಯಣ ಮಾಹಾತ್ಮ್ಯವನ್ನು ಓದುವುದರೊಂದಿಗೆ ರಾಮಾಯಣ ನವಾಹ ಸುಸಂಪನ್ನವಾಯಿತು.

(ಇಲ್ಲಿ ಸಹಕರಿಸಿದವರ ಹೆಸರನ್ನು ಉಲ್ಲೇಖಿಸಿದರೆ ಯಾರದ್ದಾದರೂ ಹೆಸರು ಬಿಟ್ಟು ಹೋಗುವುದು ಖಂಡಿತ. ಅಷ್ಟು ಜನ ಸಹಕಾರ ಮಾಡಿದ್ದಾರೆ. ಆದ್ದರಿಂದ ಯಾರ ಹೆಸರನ್ನೂ ಉಲ್ಲೇಖಿಸಲಿಲ್ಲ.)














ಶ್ರೀಮದ್ರಾಮಾಯಣೀ ಗಂಗಾ

ವಾಲ್ಮೀಕಿಗಿರಸಂಭೂತಾ ರಾಮಾಂಭೋನಿಧಿಸಂಗತಾ । ಶ್ರೀಮದ್ರಾಮಾಯಣೀ ಗಂಗಾ ಪುನಾತಿ ಭುವನತ್ರಯಮ್ ॥ ಎಂಬ ಮಾತಿನ ಮೂಲಕ ಹಿರಿಯರು ರಾಮಾಯಣವನ್ನು ಗಂಗೆಯೆಂದೇ ಕರೆದಿದ್ದಾರೆ. ರಾಮಾಯ...