ಗುರುವಾರ, ಡಿಸೆಂಬರ್ 5, 2024

ನನ್ನ ಕಾದಂಬರಿ

2024ರ  ಅಕ್ಟೋಬರ್ 24, 25, 26 ರಂದು ಉಡುಪಿಯಲ್ಲಿ  ಪ್ರಾಚ್ಯವಿದ್ಯಾಸಮ್ಮೇಳನ (all india oriental conference) ನಡೆಯಿತು. ಸುಮಾರು 4-5 ಸಂಸ್ಥೆಗಳು ಸೇರಿ ಆಯೋಜಿಸಿದ ಕಾರ್ಯಕ್ರಮ. ಆ ಕಾರ್ಯಕ್ರಮದಲ್ಲಿ 'ಪ್ರಕಾಶನಯೋಗ್ಯವಾದ ಆಯ್ದ ಸಂಸ್ಕೃತ ಪುಸ್ತಕಗಳನ್ನು ಪ್ರಕಾಶಿಸುತ್ತೇವೆ. ಲೇಖಕರು ಪುಸ್ತಕ ಕಳುಹಿಸಬಹುದು' ಎಂದು ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದಿಂದ ಆಗಸ್ಟ್ ತಿಂಗಳ ಕೊನೆಯಲ್ಲಿ  ಅಧಿಸೂಚನೆ ಹೊರಡಿಸಲಾಯಿತು. ನಾನು ಬರೆದ ಕಾದಂಬರಿ ಸಿದ್ಧವಾಗಿತ್ತು. ಕಳುಹಿಸಿದೆ. ಅಕ್ಟೋಬರ್ ಮೊದಲನೇ ವಾರದಲ್ಲಿ ಕಾದಂಬರಿಯ ಪ್ರತಿ ಕಳುಹಿಸಿ ಕಾದಂಬರಿಯನ್ನು ಈ ರೀತಿಯಲ್ಲಿ ಪ್ರಕಾಶಿಸಲಾಗುವುದು. ಟೈಪೋ ತಪ್ಪುಗಳಿದ್ದಲ್ಲಿ ತಿದ್ದಿ ಕಳುಹಿಸಬೇಕು ಎಂಬ ಸೂಚನೆಯ ಇಮೇಲ್ ಬಂತು. ಅವರು ಫಾಂಟ್ ಬದಲಾಯಿಸಿದ್ದರಿಂದ ಕೆಲವು ತಪ್ಪುಗಳಾಗಿದ್ದವು. ತಿದ್ದಿ ಕಳುಹಿಸಿದೆ. ಸುಮಾರು 15 ಪುಸ್ತಕಗಳನ್ನು ಒಟ್ಟಾಗಿ ಬಿಡುಗಡೆ ಮಾಡುವ ಯೋಜನೆ ಇದ್ದುದರಿಂದ ಮುಖಪುಟದ ಡಿಝೈನ್ ಮಾಡುವ ಸ್ವಾತಂತ್ರ್ಯ ನಮಗಿರಲಿಲ್ಲ.

ಕೊನೆಯ ಕ್ಷಣದವರೆಗೂ ನಮ್ಮ ಕಾದಂಬರಿಯ ಬಿಡುಗಡೆ ಯಾವಾಗ ಆಗುತ್ತದೆ ಎಂಬ ಸ್ಪಷ್ಟತೆಯಿರಲಿಲ್ಲ. ಕಾರ್ಯಕ್ರಮದ ಉದ್ಘಾಟನೆಯಲ್ಲಿ ಪುಸ್ತಕಗಳ ಬಿಡುಗಡೆಯಾಗುತ್ತದೆ ಎಂಬ ಸುದ್ದಿ ಹಿಂದಿನ ದಿನ ಸಂಜೆ 4.30 ಕ್ಕೆ ಗೊತ್ತಾಯಿತು. ಕಾನ್ಫರೆನ್ಸ್ ನ ಎರಡನೇ ದಿನ ಒಂದು ವಿಚಾರಸಂಕಿರಣದಲ್ಲಿ ನನ್ನ ಪ್ರಸ್ತುತಿ ಇತ್ತು. ಆದ್ದರಿಂದ ಎರಡನೇ ದಿನ ಹೋಗುತ್ತೇನೆ ಎಂದುಕೊಂಡಿದ್ದೆ.  ಮೊದಲ ದಿನವೇ ಪುಸ್ತಕ ಬಿಡುಗಡೆಯಾದರೂ ಅಲ್ಲಿ ಅವ್ಯವಸ್ಥೆಗಳಾಗುತ್ತವೆ ಎಂಬುವುದನ್ನು ಊಹಿಸಿದ್ದೆ. ಊಹಿಸಿದಂತೆಯೇ ಉದ್ಘಾಟನಾ ಸಮಾರಂಭದಲ್ಲಿ ಪುಸ್ತಕ ಬಿಡುಗಡೆ ಆಗಲೇ ಇಲ್ಲ.

ವಿಶ್ವವಿದ್ಯಾಲಯಗಳ ಕ್ರಿಯಾಕಲಾಪಗಳ ಕುರಿತಾಗಿ ಸ್ವಲ್ಪ ಜ್ಞಾನವಿರುವ ಗೆಳೆಯನೊಬ್ಬ ಖಂಡಿತವಾಗಿಯೂ ತುಂಬಾ ತಡ ಆಗುತ್ತದೆ. ಎಂದು ಖಡಾಖಂಡಿತವಾಗಿ ಹೇಳಿದ್ದ. ವಿಶ್ವವಿದ್ಯಾಲಯದ ಕುರಿತಾಗಿ ಆತನಿಗೆ ಅಷ್ಟೊಂದು ವಿಶ್ವಾಸವಿತ್ತು.



ಮರುದಿನ ಹೋದಾಗ 11.45 ಕ್ಕೆ ಉಡುಪಿಯ ಸಂಸ್ಕೃತ ಕಾಲೇಜಿನಲ್ಲಿ ಪುಸ್ತಕದ ಬಿಡುಗಡೆ ಇದೆ ಎಂದು ಹೇಳಿದರು. ಆದರೆ ವಿಚಾರಸಂಕಿರಣದ ನನ್ನ ಪ್ರಸ್ತುತಿ 11.45 ಕ್ಕೇ ಇತ್ತು. ಅದು ರಾಜಾಂಗಣದಲ್ಲಿ. ನನ್ನ ಪುಸ್ತಕದ ಜೊತೆಗೆ ಇನ್ನೊಬ್ಬರ ಪುಸ್ತಕ ಬಿಡುಗಡೆಯೂ ಇತ್ತು. ಇಬ್ಬರೂ ಹೋಗಿ 11.45 ತನಕ ಕಾದರೂ ಯಾರೂ ಬರಲಿಲ್ಲ. ಪುಸ್ತಕದ ನಾಲ್ಕು ಪ್ರತಿಗಳನ್ನು ಹಿಡಿದುಕೊಂಡು ಬಂದಿದ್ದ ಹುಡುಗನಿಗೂ ಯಾವೊಂದು ಮಾಹಿತಿಯೂ ಇರಲಿಲ್ಲ. 

ನನಗೆ ವಿಚಾರ ಸಂಕಿರಣದ ಆಯೋಜಕರಿಂದ ಫೋನ್ ಬಂತು. ಈಗ ತಕ್ಷಣ ಬರಬೇಕು ಎಂದು ಹೇಳಿದರು. ಅಲ್ಲಿಗೆ ಹೋಗುವುದು ಅನಿವಾರ್ಯವಾಗಿತ್ತು. ಏಕೆಂದರೆ  ವಿಚಾರಸಂಕಿರಣದಲ್ಲಿ ನನ್ನ ವಿಷಯಮಂಡನೆ ಇದೆ ಎಂಬ ಕಾರಣಕ್ಕೆ ಪ್ರಯಾಣದ ವೆಚ್ಚವನ್ನು ಕೊಡಲಾಗುವುದು ಎಂದು ತಿಳಿಸಲಾಗಿತ್ತು. ಆದ್ದರಿಂದ ಇನ್ನೊಬ್ಬ ಲೇಖಕರನ್ನು ಕರೆದು ನಾವಿಬ್ಬರೇ ಒಂದೊಂದು ಪುಸ್ತಕ ಕೈಯಲ್ಲಿ ಹಿಡಿದುಕೊಂಡು ಬಿಡುಗಡೆಯಾದಂತೆ ಪೋಸ್ ಕೊಟ್ಟು ಫೋಟೋ ತೆಗೆದುಕೊಂಡೆವು. ನಾನು ರಾಜಾಂಗಣಕ್ಕೆ ಓಡಿದೆ.


12.15 ರ ಸುಮಾರಿಗೆ ಪುಸ್ತಕಗಳ ಬಿಡುಗಡೆಯಾಯಿತು ಎಂಬ ವಿಚಾರ ಹಾಗೂ ಫೋಟೋ ಸಿಕ್ಕಿತು. ಕೇವಲ 10 ಪುಸ್ತಕಗಳನ್ನು ಮುದ್ರಿಸಿದ್ದರಿಂದ ನಮಗೆ 1 ಪ್ರತಿ ಕೊಟ್ಟರು. ನಾನು ಹೇಗೋ ಮತ್ತೊಂದು ಪ್ರತಿಯನ್ನು ತೆಗೆದುಕೊಂಡು ಬಂದೆ.


ಮುಂದಿನ 1 ತಿಂಗಳೊಳಗೆ 1000 ಪ್ರತಿಗಳನ್ನು ಮುದ್ರಿಸುತ್ತೇವೆ. ಲೇಖಕರಿಗೆ ಎಷ್ಟು ಪ್ರತಿ ಕೊಡಬೇಕು, ಗೌರವಧನ ಎಷ್ಟು ಕೊಡುತ್ತೇವೆ ಎಂಬುವುದನ್ನು ಮೀಟಿಂಗಿನಲ್ಲಿ ಚರ್ಚೆಯಾದ ನಂತರ ತಿಳಿಸುತ್ತೇವೆ ಎಂದು ಆಶ್ವಾಸನೆ ಕೊಟ್ಟು ಕಳುಹಿಸಿದರು.

ಆದ್ದರಿಂದ ನನ್ನ ಪುಸ್ತಕ ಬಿಡುಗಡೆಯಾದರೂ ಬಿಡುಗಡೆಯಾಗದ ಹಾಗೆಯೇ. ಖಂಡಿತವಾಗಿಯೂ ಮುದ್ರಣ ಆಗುತ್ತದೆ ಎಂದು ವಿಶ್ವವಿದ್ಯಾಲಯದ ಹಿರಿಯ ಅಧಿಕಾರಿಗಳು ಹೇಳುತ್ತಿದ್ದಾರೆ. ಹೀಗೆ ಹೇಳಿ ಒಂದೂವರೆ ತಿಂಗಳಾದರೂ ಪುಸ್ತಕಗಳ ಬಗೆಗೆ ಯಾವುದೇ ಮಾಹಿತಿಯಿಲ್ಲ.

ತಿಂಡಿ ತಿನಿಸುಗಳನ್ನು ಫ್ರಿಡ್ಜ್ ನಲ್ಲಿ ಇಟ್ಟು ಹಾಳು ಮಾಡಿ ತದನಂತರ ಎಸೆಯುವುದಕ್ಕಿಂತ ಚೆನ್ನಾಗಿದ್ದಾಗಲೇ ಎಸೆದರೆ ಒಳ್ಳೆಯದಲ್ಲವೇ. ಅದನ್ನು ಫ್ರಿಡ್ಜಿನಲ್ಲಿಟ್ಟು ಕೊಳೆತ ನಂತರ ಏಕೆ ಎಸೆಯಬೇಕು? ಎಂದು ನಾನು ಪ್ರತಿದಿನವೂ ಮನೆಯಲ್ಲಿ ಹೇಳುತ್ತಿರುತ್ತೇನೆ. ಹಾಳು ಮಾಡಿ ಎಸೆಯುವುದಕ್ಕಿಂತಲೂ ಎಸೆದು ಹಾಳುಮಾಡುವುದೇ ಲೇಸು ಎಂಬುವುದು ನನ್ನ ಸಿದ್ಧಾಂತ. ಹೀಗೆ ಹೇಳುವುದಕ್ಕಾಗಿ ಹೆಂಡತಿ-ಅಪ್ಪ-ಅಜ್ಜಿಯರಿಂದ ಅಸಹನೆಯ ನೋಟಕ್ಕೂ ಬಿರುನುಡಿಗಳಿಗೂ ಒಳಗಾಗಿದ್ದೇನೆ.

ಅವರೆಲ್ಲರ ಶಾಪದ ಫಲವಿರಬಹುದು. ಪುಸ್ತಕಗಳು ಮುದ್ರಣವಾದ ಬಳಿಕ ಕೊಳ್ಳುವವರಿಲ್ಲದೇ ಕೊಳೆತು ಬಿಸಾಡುವುದಕ್ಕಿಂತ ಮುದ್ರಣವಾಗದೇ ಇರುವುದೇ ಲೇಸು ಎನ್ನುವ ಕಾರಣಕ್ಕೆ ನನ್ನ ಕಾದಂಬರಿಗಿನ್ನೂ ಮುದ್ರಣದ ಭಾಗ್ಯ ಲಭಿಸಿಲ್ಲ.

(ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯ ಬಂತು ಎಂಬ ಮಾತಿನಂತೆ 24.02.2025 ರಂದು ಪುಸ್ತಕದ ಪ್ರತಿಗಳು ನನ್ನ ಕೈ ಸೇರಿವೆ.)

ಶ್ರೀಮದ್ರಾಮಾಯಣೀ ಗಂಗಾ

ವಾಲ್ಮೀಕಿಗಿರಸಂಭೂತಾ ರಾಮಾಂಭೋನಿಧಿಸಂಗತಾ । ಶ್ರೀಮದ್ರಾಮಾಯಣೀ ಗಂಗಾ ಪುನಾತಿ ಭುವನತ್ರಯಮ್ ॥ ಎಂಬ ಮಾತಿನ ಮೂಲಕ ಹಿರಿಯರು ರಾಮಾಯಣವನ್ನು ಗಂಗೆಯೆಂದೇ ಕರೆದಿದ್ದಾರೆ. ರಾಮಾಯ...