ಭಾನುವಾರ, ಮೇ 9, 2021

ಮಕ್ಕಳು ಕಷ್ಟಕೊಡುವುದೇ ತಾಯಿಗೆ ಸಂತೋಷ

ಇದೇನು ಹೀಗೆ ಹೇಳುತ್ತಿದ್ದಾನೆ ಎಂದು ಆಶ್ಚರ್ಯಪಡಬೇಡಿ. ನಾನು ಹೇಳಲು ಹೊರಟದ್ದು ಇದನ್ನೇ. ಮಗ ಕಷ್ಟ ಕೊಟ್ಟರೂ ತಾಯಿಗೆ ಸಂತೋಷ ಎಂದಾದರೆ ಸಹಿಸಿಕೊಳ್ಳಬಹುದು.  ಆದರೆ ಮಗ ಕಷ್ಟ ಕೊಟ್ಟರೇ ತಾಯಿಗೆ ಸಂತೋಷ ಎಂಬ ವಾಕ್ಯವನ್ನು ಅರಗಿಸಿಕೊಳ್ಳುವುದು ಅನೇಕರಿಗೆ ಕಷ್ಟವಾಗಬಹುದು. ಹಾಗಾದರೆ ತಾಯಿಗೆ ಕಷ್ಟಕೊಡುವುದು ಮಕ್ಕಳಾದವರ ಕರ್ತವ್ಯವೇ ಎಂದು ಅನಿಸಬಹುದು. ಕೆಲವೊಂದು ಸಂದರ್ಭದಲ್ಲಿ ತಾಯಿಗೆ ಕಷ್ಟಕೊಡುವುದೇ ಮಕ್ಕಳ ಕರ್ತವ್ಯ ಎಂಬುವುದು ನಿಜವೇ ಆಗಿದೆ. ಮಕ್ಕಳು ಕೊಡುವ ಕಷ್ಟವೇ ತಾಯಿಗೆ ಆನಂದವಾಗಿರುತ್ತದೆ. ಹಾಗೆಂದು ಬೇರೆಯವರು ಆ ಕಷ್ಟವನ್ನು ಕೊಟ್ಟರೆ ಅದು ಹಿಂಸೆಯಾಗುತ್ತದೆ. ಆದರೆ ಇಂತಹ ಸುಖಕರ ಕಷ್ಟವನ್ನು ನಾನು ನನ್ನ ತಾಯಿಗೆ ಕೊಟ್ಟಿಲ್ಲ ಎಂಬುವುದೇ ನನಗಿರುವ ಕೊರಗು.

ಬಾಲ್ಯದಿಂದಲೂ ನಾನು ತಿಂಡಿಪೋತ. ಆದ್ದರಿಂದಲೇ ಇಂತಹ ದಷ್ಟಪುಷ್ಟವಾದ ದೇಹವನ್ನು ಹೊಂದಿದ್ದೇನೆ. ಆದರೆ ನನಗೆ ತಿನ್ನಲು ಇದೇ ತಿಂಡಿ ಬೇಕು ಎಂದು ಯಾವಾಗಲೂ ಅಂದುಕೊಂಡವನೇ ಅಲ್ಲ. ಸಿಕ್ಕಿದ್ದನ್ನು ಸಂಕೋಚವಿಲ್ಲದೇ ಸಂತೋಷದಿಂದ ತಟ್ಟೆತುಂಬಾ ಬಡಿಸಿಕೊಂಡು ಹೊಟ್ಟೆತುಂಬಾ ತಿನ್ನುವುದು ನನ್ನ ಅಭ್ಯಾಸ. ಇದರಿಂದ ಅನೇಕ ಅನುಕೂಲತೆಗಳು ಆಗಿದ್ದುಂಟು.

ಕಾಲೇಜು ಜೀವನದಲ್ಲಿ ಸ್ಪರ್ಧೆಗಳಲ್ಲಿ ಭಾಗವಹಿಸಲು ದೇಶದ ವಿವಿಧ ಭಾಗಗಳಿಗೆ ಹೋದಾಗ ಅಲ್ಲಿನ ಊಟ ತಿಂಡಿಗಳು ರುಚಿಸದೆ ಅನೇಕ ಮಿತ್ರರು ಕಷ್ಟಪಟ್ಟದ್ದನ್ನು ಗಮನಿಸಿದ್ದೇನೆ. ಅವರಿಗೆ ಸಂತೋಷವಾಗಲಿ ಎಂಬ ಕಾರಣಕ್ಕಾಗಿ ಅನೇಕ ಬಾರಿ ತಿನ್ನುತ್ತಿರುವ ಊಟವನ್ನು ಹಳಿದದ್ದೂ ಇದೆ. ಆದರೆ ನಾನು ಮಾತ್ರ ಅಲ್ಲಿದ್ದ ಎಲ್ಲಾ ತಿಂಡಿತಿನಿಸುಗಳನ್ನು  ತಟ್ಟೆಯಲ್ಲಿ ತುಂಬಿಸಿಕೊಂಡು ಉಣ್ಣುತ್ತಿದ್ದೆ.  ಕರೋನಾ ಕಾಲದಲ್ಲಿ ರುಚಿ ವಾಸನೆಗಳು ಇಲ್ಲದಿದ್ದರೂ ಕ್ವಾರೆಂಟೈನ್ ನಲ್ಲಿ ಇದ್ದಾಗ ತಂದುಕೊಟ್ಟಿದ್ದ ಆಹಾರವನ್ನು ತಟ್ಟೆ ತುಂಬಾ ತಿನ್ನುತ್ತಿದ್ದೆ. ಕರೋನಾದಿಂದ ಗುಣಮುಖನಾಗಿ ನೆಗೆಟಿವ್ ಫಲಿತಾಂಶ ಬರಲು ಇದೂ ಒಂದು ಕಾರಣ ಎಂದು ನಂಬಿದ್ದೇನೆ.



ಇದೇನಿದು ತಾಯಂದಿರ ಬಗ್ಗೆ ಹೇಳಿ ಹೇಳುತ್ತೇನೆಂದು ಹೊರಟು ತನ್ನ ಬಗ್ಗೆಯೇ ಹೇಳಿಕೊಳ್ಳುತ್ತಿದ್ದಾನೆ ಎಂದುಕೊಳ್ಳಬೇಕಾಗಿಲ್ಲ. ಮತ್ತೆ ತಾಯಂದಿರ ವಿಷಯಕ್ಕೇ ಬರೋಣ. ಸಾಮಾನ್ಯವಾಗಿ ಮನೆಯಿಂದ ಹೊರಗಿರುವ (ಹಾಸ್ಟೆಲ್ ಪಿ.ಜಿ ಇತ್ಯಾದಿಗಳಲ್ಲಿ) ಮಕ್ಕಳ ಬಗ್ಗೆ ತಾಯಂದಿರು ತುಂಬಾ ಚಿಂತಿಸುತ್ತಾರೆ. ಅವರ ಮುಖ್ಯ ಚಿಂತೆಯಿರುವುದು ಊಟ-ತಿಂಡಿಗಳ ಬಗೆಗೆ. ಮಕ್ಕಳು ಕೂಡಾ ಫೋನ್ ಮಾಡಿದಾಗ ಊಟ ತಿಂಡಿಗಳ ವಿಚಾರದಲ್ಲಿ ಕಷ್ಟವಾಗುತ್ತಿದೆ, ಊಟ ರುಚಿಯಿಲ್ಲ ಎಂಬುದಾಗಿ ತಾಯಿಯ ಬಳಿ ಹೇಳುತ್ತಾರೆ. ತಾಯಂದಿರೂ ಮಕ್ಕಳ ಮಾತು ಕೇಳಿ ಮರುಗಿ ಮನೆಗೆ ಬಂದಾಗ ಅವರಿಗಿಷ್ಟದ ತಿಂಡಿ ಮಾಡಿಹಾಕಬೇಕು ಎಂದುಕೊಳ್ಳುತ್ತಾರೆ.

ಒಮ್ಮೆ ಹಾಸ್ಟೆಲ್'ನಲ್ಲಿರುವ ಹುಡುಗನ ತಾಯಿಯೊಬ್ಬರು ಭೇಟಿಯಾಗಿದ್ದರು. ತನ್ನ ಮಗ ಬರುತ್ತಾನೆ ಎಂಬ ಸಂಭ್ರಮದಲ್ಲಿದ್ದರು. ಅದೂ ಕೇವಲ ಎರಡು ದಿನಗಳ ರಜೆಗೋಸ್ಕರ ಮಗ ಬರುವವನಾಗಿದ್ದ. ತಾಯಿ ಹಿಂದಿನ ಎರಡು ಮೂರು ದಿನಗಳ ಕಾಲ ಕೆಲಸ ಮಾಡಿ ಸುಸ್ತಾಗಿದ್ದರು. ಅವರ ಸುಸ್ತು ಮುಖದಲ್ಲಿ ಕಾಣುತ್ತಿತ್ತು. ಮಗ 'ನಾನು ಬಂದಾಗ ಪುರಿ ಭಾಜಿ ಮಾಡು' ಎಂದು ಫೋನಿನಲ್ಲಿ ತಿಳಿಸಿದ್ದ. ಸುಸ್ತಾಗಿದ್ದ ಸಮಯದಲ್ಲಿ ವಿಶೇಷ ಅಡುಗೆಯನ್ನು ಮಾಡಬೇಕು ಎಂದರೆ ಎಂತಹ ಗೃಹಿಣಿಯರೂ ಕೆಂಡಾಮಂಡಲವಾಗುತ್ತಾರೆ. ಆದರೂ ಮಗ ಹೇಳಿದ್ದಾನೆ ಎಂಬ ಕಾರಣಕ್ಕೆ ಆ ತಾಯಿ ಅಡುಗೆಯ ತಯಾರಿಯಲ್ಲಿದ್ದರು. ಕಷ್ಟವಾದರೂ ಮಗನಿಗೆ ಇಷ್ಟವಾಗುವ ತಿಂಡಿಯನ್ನು ಮಾಡಿ ಬಡಿಸುತ್ತೇನೆ ಎಂಬ ಖುಷಿ ಸುಸ್ತಿನೊಂದಿಗೆ ಅವರ ಮುಖದಲ್ಲಿ ರಾರಾಜಿಸುತ್ತಿತ್ತು. 

ಆ ದಿನ ನನ್ನ ಮೇಲೆ ನನಗೇ ಬೇಸರವಾಯಿತು. ನನ್ನ ತಾಯಿಗೆ ಇಂತಹ ಸಂತೋಷಮಯವಾದ ಕಷ್ಟವನ್ನು ನಾನು ಯಾವತ್ತೂ ನೀಡಿದವನಲ್ಲ . ಮೊದಲೇ ಹೇಳಿದಂತೆ ಏನೇ ಮಾಡಿದರೂ ಚಪ್ಪರಿಸಿಕೊಂಡು ತಿನ್ನುತ್ತೇನೆ. ಫೋನಿನ ಮೂಲಕ ನಾನು ಹೋದ ಕಡೆಯ ತಿಂಡಿಯನ್ನು ಬೈದದ್ದೇ ಇಲ್ಲ. ಅದು ಮಾಡಿಕೊಡು ಇದು ಮಾಡಿಕೊಡು ಎಂದು ಹೇಳಿದ್ದಿಲ್ಲ. ತಾಯಿಯ ಇಚ್ಛೆಯಂತೆ ನಡೆದುಕೊಂಡು ಆಕೆಯನ್ನು ಸಂತೋಷಪಡಿಸುವುದಂತೂ ದೂರದ ಮಾತು. ಕೊನೆಯ ಪಕ್ಷ ತಾಯಿಗೆ ಕಷ್ಟ ಕೊಟ್ಟಾದರೂ ಸಂತೋಷ ನೀಡುವಂತಹ ಅವಕಾಶವನ್ನೂ ಇಷ್ಟು ವರ್ಷಗಳ ಕಾಲ ಬಳಸಿಕೊಳ್ಳಲಿಲ್ಲ. ಆದರೆ ಇನ್ನೂ ಕಾಲ ಮಿಂಚಿಲ್ಲ. ಯಾವುದಾದರೊಂದು ತಿಂಡಿಯನ್ನು ನನಗೆ ಇಷ್ಟದ ತಿಂಡಿ ಎಂದು ಹೇಳಿ ಅದನ್ನು ಮಾಡಿಕೊಡು ಎಂದು ತಾಯಿಯನ್ನು ಪೀಡಿಸಿ ಆಕೆಗೆ ಸಂತೋಷವನ್ನುಂಟು ಮಾಡುವುದೇನೂ ಕಷ್ಟದ ಕೆಲಸವಲ್ಲ.

ಶ್ರೀಮದ್ರಾಮಾಯಣೀ ಗಂಗಾ

ವಾಲ್ಮೀಕಿಗಿರಸಂಭೂತಾ ರಾಮಾಂಭೋನಿಧಿಸಂಗತಾ । ಶ್ರೀಮದ್ರಾಮಾಯಣೀ ಗಂಗಾ ಪುನಾತಿ ಭುವನತ್ರಯಮ್ ॥ ಎಂಬ ಮಾತಿನ ಮೂಲಕ ಹಿರಿಯರು ರಾಮಾಯಣವನ್ನು ಗಂಗೆಯೆಂದೇ ಕರೆದಿದ್ದಾರೆ. ರಾಮಾಯ...