ಮಂಗಳವಾರ, ಅಕ್ಟೋಬರ್ 27, 2020

ಶೋಷಣೆಯೆಂದು ಅಳುವುದೇ ಪೋಷಣೆಯೆಂದು ಸಂಭ್ರಮಿಸುವುದೇ?

ಕೆಲವೊಂದು ಕೆಲಸಗಳು ನಮ್ಮ ಅಭಿವೃದ್ಧಿಗೆ ಪೂರಕವಾಗಿರುತ್ತವೆ. ನಮ್ಮ ಅಭಿವೃದ್ಧಿಯಾಗಲಿ ಎಂಬ ಉದ್ದೇಶದಿಂದಲೇ ಹಿರಿಯರು ನಮಗೆ ಅನೇಕ ಕೆಲಸಗಳನ್ನು ವಹಿಸಿರುತ್ತಾರೆ. ಆ ಕೆಲಸಗಳನ್ನು ಮಾಡಿ ಮುಗಿಸಿದಾಗ ಯಾವುದೋ ಒಂದು ಅವ್ಯಕ್ತವಾದಂತಹ ಆನಂದ ನಮಗಿರುತ್ತದೆ. ವಹಿಸಿದ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸಿದ ನಂತರ ಹಿರಿಯರು ನಮಗೆ ಇನ್ನಷ್ಟು ಜವಾಬ್ದಾರಿಯುತ ಕೆಲಸಗಳನ್ನು ನೀಡಿ ನಮ್ಮನ್ನು ಪ್ರೋತ್ಸಾಹಿಸತೊಡಗುತ್ತಾರೆ. ಹೀಗೆ ಯಾವುದಾದರೊಂದು ಕೆಲಸದಲ್ಲಿ ನಿಪುಣತೆ ಕ್ರಮಶಃ ಪ್ರಾಪ್ತವಾಗುತ್ತದೆ. ನಾವು ಮಾಡಿದ ಕೆಲಸದಿಂದ ಮಾಡಿಸಿಕೊಂಡವರಿಗೆ ಲಾಭವಾದರೆ ಪಾರಿತೋಷಕವಾಗಿಯೋ, ಪ್ರೋತ್ಸಾಹಕ್ಕಾಗಿಯೋ ಕಿಂಚಿತ್ತನ್ನು ನಮಗೂ ನೀಡುವುದು ಸಜ್ಜನರ ಲಕ್ಷಣ. ದ್ರವ್ಯರೂಪದಲ್ಲಿ ನೀಡದಿದ್ದರೂ ನಾಲ್ಕು ಪ್ರೋತ್ಸಾಹದ ಮಾತುಗಳನ್ನಾಡಿ ಬೆನ್ನು ತಟ್ಟುವುದು, ಮಾಡಿದ ತಪ್ಪುಗಳನ್ನು ತಿದ್ದುವುದು ಮುಂತಾದುವುಗಳನ್ನು ಮಾಡಿಯೇ ಮಾಡುತ್ತಾರೆ.

 

ಜುಲೈ ತಿಂಗಳಲ್ಲಿ ಊರಿಗೆ ಹೋಗಿದ್ದಾಗ ಪ್ರತಿಷ್ಠಿತ ವಿಶ್ವವಿದ್ಯಾಲಯದ ಅಧಿಕಾರಿಯೊಬ್ಬರ ಕರೆ ಬಂತು. ನಮ್ಮ ವಿಶ್ವವಿದ್ಯಾಲಯದ ವತಿಯಿಂದ ಶಿಕ್ಷಕರ ಬೋಧನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಸಂಸ್ಕೃತಸಾಹಿತ್ಯ ಎಂಬ ವಿಷಯದ ಬಗ್ಗೆ ಮುಂದಿನ ಸೋಮವಾರದಿಂದ ಮೂರು ಗಂಟೆಗಳ ಕಾಲ ಬೋಧಿಸಬೇಕು. ಎಂದರು. ನಾನೂ ಒಪ್ಪಿಕೊಂಡಾಯಿತು. ಯಾವ ವಿಷಯವನ್ನು ಬೋಧಿಸಬೇಕು, ಹೇಗೆ ಬೋಧಿಸಬೇಕು, ಬೋಧಿಸುವ ಮಾಧ್ಯಮ ಯಾವುದು (online platform), ಎಷ್ಟು ಗಂಟೆಯಿಂದ ಬೋಧಿಸಬೇಕು ಮೊದಲಾದ ವಿಚಾರಗಳಲ್ಲಿ ಮಾಹಿತಿ ಇರಲಿಲ್ಲ. ಆಮೇಲೆ ಹೇಳುತ್ತೇನೆ ಎಂದು ಹೇಳಿದ್ದರು. ಆದರೆ ಭಾನುವಾರದವರೆಗೂ ಅವರ ಸುದ್ದಿ ಇಲ್ಲ. ಯಾರೋ ದೊಡ್ಡ ವಿದ್ವಾಂಸರು ಬರುತ್ತೇನೆ ಎಂದು ಹೇಳಿ ಕೈ ಕೊಟ್ಟ ಮೇಲೆ ನನ್ನನ್ನು ಕೇಳಿದ್ದಿರಬಹುದು, ಈಗ ಅವರು ಪುನಃ ಒಪ್ಪಿಕೊಂಡಿರಬೇಕು ಎಂದು ನಾನೂ ಸುಮ್ಮನಾಗಿದ್ದೆ. ಫೋನ್ ಮಾಡಿ ನಿಮ್ಮ ಬೋಧನೆ ರದ್ದಾಗಿದೆ ಎಂಬ ವಾಕ್ಯವನ್ನು ಹೇಳುವ ಮುಜುಗರ ಅವರಿಗೂ ಕೇಳುವ ಮುಜುಗರ ನನಗೂ ಆಗಬಾರದು ಎಂಬುವುದು ನನ್ನ ಉದ್ದೇಶವಾಗಿತ್ತು.

 

ಆದರೆ ನಡೆದದ್ದೇ ಬೇರೆ. ಸೋಮವಾರ ಅಮ್ಮನಿಗೆ ಔಷಧಿ ತರಬೇಕು ಎಂದು ಹತ್ತಿರದ ಆಸ್ಪತ್ರೆಗೆ ಹೋಗಿದ್ದೆ. ವೈದ್ಯರ ಬಳಿಯಿದ್ದಾಗ ವಿಶ್ವವಿದ್ಯಾಲಯದ ಮತ್ತೊಬ್ಬ ಕಿರಿಯ ಅಧಿಕಾರಿಯ ಕರೆ ಬಂತು. ನಿಮ್ಮ ಇಂದಿನ ಬೋಧನೆಯಲ್ಲಿ ಪಿಪಿಟಿ ಉಪಯೋಗಿಸುತ್ತೀರಾ ಎಂದು ಅವರು ಕೇಳಿದಾಗ ಅವಾಕ್ಕಾದೆ. ಯಾವ ವಿಷಯ, ಎಂತಹ ಬೋಧನೆ, ಬೋಧನಾ ಮಾಧ್ಯಮ ಯಾವುದು ಎಂಬುದರ ಬಗ್ಗೆ ನನಗೆ ಅರಿವೇ ಇಲ್ಲ. ಹೇಳಿದ ಅಧಿಕಾರಿಗಳು ಏನನ್ನೂ ತಿಳಿಸಿಲ್ಲ ಎಂದಾಗ ಅವರು ವಿಷಯಗಳ ಪಟ್ಟಿಯನ್ನು ವಾಟ್ಸ್ ಆಪ್ ನ ಮೂಲಕ ಕಳುಹಿಸಿ, ಹೇಗೆ ಬೋಧಿಸಬೇಕು ಎಂಬುವುದನ್ನು ಒಂದೇ ನಿಮಿಷದಲ್ಲಿ ವಿವರಿಸಿದರು. ಆವಾಗಲೇ ಗಂಟೆ 11.00 ದಾಟಿತ್ತು. 12.30 ರಿಂದ 1.30 ರವರೆಗೆ ನನ್ನ ಅವಧಿಯಿತ್ತು. ಮನೆಗೆ ವೇಗವಾಗಿ ತೆರಳಿ ಕೂಡಲೇ ಸಿಕ್ಕಿದ ಪುಸ್ತಕಗಳನ್ನು ತಡಕಾಡಿ ಹೇಗಾದರೂ ವಿಷಯವನ್ನು ಸಿದ್ಧಪಡಿಸಿದೆ. ನಮ್ಮ ಊರಿನಲ್ಲಿ ನೆಟ್ವರ್ಕ್ ಸಮಸ್ಯೆ ಇದ್ದುದರಿಂದ ಅಂತರ್ಜಾಲದಲ್ಲಿ ಸಿಗುವ ಮಾಹಿತಿಯನ್ನು ಪಡೆಯಲೂ ವಿಫಲನಾಗಿದ್ದೆ.

 

ಮನೆಯಲ್ಲಿ ನೆಟ್ವರ್ಕ್ ಇರಲಿಲ್ಲ ಎಂಬ ಕಾರಣಕ್ಕಾಗಿ ಸಮೀಪದ ಬೆಟ್ಟಕ್ಕೆ ತೆರಳಿದೆ. ಮಳೆಯೂ ಹೊಯ್ಯುತ್ತಿದ್ದುದರಿಂದ ಕಾರಿನೊಳಗೆ ಕುಳಿತು ಬೋಧಿಸುವುದು ಮಾಡುವುದು ಅನಿವಾರ್ಯವಾಗಿತ್ತು. ನಮ್ಮ ಕಾರಿನ ಹಿಂಭಾಗದಲ್ಲಿ ಆಗಷ್ಟೇ ಕೊಯ್ದ ತಾಳೆ ಹಣ್ಣುಗಳು ಸುಮಾರು 3 ಕ್ವಿಂಟಾಲ್ನಷ್ಟಿದ್ದವು. ಅವುಗಳನ್ನು ಇಳಿಸಲು ಸಮಯವಿಲ್ಲದ್ದರಿಂದ ತಾಳೆ ಹಣ್ಣುಗಳ ವಾಸನೆಯನ್ನೂ, ತಾಳೆ ಹಣ್ಣುಗಳ ಬಳಿ ಹಾರುತ್ತಿದ್ದ ಕೀಟಗಳ ಕಚ್ಚುವಿಕೆಯನ್ನೂ ತಡೆದುಕೊಂಡು ಹೇಗೋ ಒಂದು ಗಂಟೆಯ ಬೋಧನೆಯನ್ನು ಮುಗಿಸಿದೆ. ನಂತರದ ಎರಡು ದಿನಗಳಲ್ಲಿ ಪಿಪಿಟಿ ರಚಿಸಿ ಸ್ವಲ್ಪ ಚೆನ್ನಾಗಿಯೇ ಸಿದ್ಧತೆ ಮಾಡಿಕೊಂಡು ಬೋಧಿಸಿದೆ.

 

ಮೂರು ದಿನಗಳ ಬೋಧನೆಯ ನಂತರ ವಿಶ್ವವಿದ್ಯಾಲಯಕ್ಕೆ ನನ್ನ ವಿಚಾರವೇ ಮರೆತು ಹೋಗಿತ್ತು. ಹೀಗೆಯೇ ನನ್ನ ಆತ್ಮೀಯ ಮಿತ್ರರ ಬಳಿ ವಿಶ್ವವಿದ್ಯಾಲಯದ ಕತೆಯನ್ನು ಹಂಚಿಕೊಳ್ಳುತ್ತಿದ್ದೆ. ಅವರೆಲ್ಲರದೂ ಒಂದೇ ಸಲಹೆಯಾಗಿತ್ತು. ಅವಶ್ಯವಾಗಿ ವಿಶ್ವವಿದ್ಯಾಲಯಕ್ಕೆ ಈ ವಿಷಯವನ್ನು ನೀನು ಮುಟ್ಟಿಸಬೇಕು. ಹೀಗೆ ಬೋಧನೆಯನ್ನು ಮಾಡಿಸಿ ಮರೆಯುವುದು ಯಾವುದೇ ಸಂಸ್ಥೆಗೆ ಶೋಭೆ ತರುವಂತಹ ವಿಚಾರವಲ್ಲ. ಅವರ ಕಣ್ತಪ್ಪಿನಿಂದಾದ ವಿಚಾರವಾದರೆ ಅವರು ಸರಿಪಡಿಸಿಕೊಳ್ಳುತ್ತಾರೆ ಎಂದು ಅನೇಕರು ಅನೇಕ ರೀತಿಯಲ್ಲಿ ಬೋಧಿಸುತ್ತಿದ್ದರು.

 

3 ಗಂಟೆಗಳ ಕಾಲ ಬೋಧನೆಯ ಅನುಭವ ನನಗಾಗಿದೆ. ಇದಕ್ಕಾಗಿ ಧನ್ಯವಾದದ ನುಡಿಗಳನ್ನೋ ಗೌರವ ಧನವನ್ನೋ ಅಪೇಕ್ಷಿಸಿ ಸಿಗದೇ ಇರುವುದಕ್ಕಾಗಿ ಬೇಸರ ಮಾಡಿಕೊಳ್ಳುವುದು ಉಚಿತವಲ್ಲ ಎಂದು ನನಗನ್ನಿಸುತ್ತಿತ್ತು. ಇಂತಹ ಕಾರ್ಯಕ್ರಮಗಳಿಂದ ನಾನೂ ಒಂದಷ್ಟು ಕಲಿತಂತಾಗುತ್ತದೆ ಎಂಬ ತೃಪ್ತಿಯೂ ಇತ್ತು. ಆದರೆ ವಿಶ್ವವಿದ್ಯಾಲಯ ನಡೆಸಿಕೊಂಡ ರೀತಿ ಉಚಿತವಲ್ಲ ಎಂದು ನನಗನ್ನಿಸುತ್ತಿತ್ತು. ಆದ್ದರಿಂದ ಅನೇಕ ಬಾರಿ ಈ ವಿಚಾರವನ್ನು ವಿಶ್ವವಿದ್ಯಾಲಯಕ್ಕೆ ತಿಳಿಸಬೇಕು ಎಂದುಕೊಂಡಿದ್ದೆ. ಆದರೆ ಕಂಪ್ಯೂಟರ್ ತೆರೆದಾಗ ಈ ವಿಚಾರ ಮರೆಯುತ್ತಿತ್ತು. 3 ತಿಂಗಳ ನಂತರ ಯಾವುದೋ ವಿಚಾರಕ್ಕಾಗಿ ವಿಶ್ವವಿದ್ಯಾಲಯದ ವೆಬ್ ಸೈಟ್ ತೆರೆದಾಗ ಈ ವಿಚಾರ ನೆನಪಾಯಿತು. ವಿಶ್ವವಿದ್ಯಾಲಯದ ಇಮೇಲ್ ಐಡಿಗೆ ಸ್ವಲ್ಪ ಖಾರವಾಗಿಯೇ ಇಮೇಲೊಂದನ್ನು ರವಾನಿಸಿದೆ.

 

ನಾನು ಜುಲೈ ತಿಂಗಳ 13, 14, 15 ರಂದು ವಿಶ್ವವಿದ್ಯಾಲಯದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬೋಧನೆ ನಡೆಸಿದ್ದೆ. ಇದಕ್ಕೆ ಕನಿಷ್ಠಪಕ್ಷ ಪ್ರಮಾಣಪತ್ರವನ್ನಾದರೂ ನೀಡಬಹುದು ಎಂದು ನಾನು ಭಾವಿಸಿದ್ದೆ. ಆದರೆ ಬಾಯಿಮಾತಿನಲ್ಲೂ ಧನ್ಯವಾದಗಳನ್ನು ತಿಳಿಸಲಿಲ್ಲ. ಬೋಧನೆಯ ಸಮಯದಲ್ಲಿ ನಾನು ಊರಿನಲ್ಲಿದ್ದೆ. ಅಲ್ಲಿ ಇಂಟರ್ ನೆಟ್ ಸಿಗುವುದಿಲ್ಲ ಎಂಬ ಕಾರಣಕ್ಕಾಗಿ ಮಳೆ ಬರುತ್ತಿದ್ದಾಗಲೂ ಕಾರಿನಲ್ಲಿ ಕುಳಿತು ಬೋಧನೆ ನಡೆಸಿಕೊಟ್ಟಿದ್ದೆ. ನನ್ನ ಬೋಧನೆಯ ವಿಚಾರ ಬಾಲಿಶವೇ ಆಗಿರಬಹುದು ಆದರೂ ಕೂಡಾ ವಿಷಯವನ್ನು ಮಂಡಿಸಲು ಪ್ರಯತ್ನವನ್ನಂತೂ ಮಾಡಿದ್ದೇನೆ. ಅದಕ್ಕೋಸ್ಕರವಾಗಿ ಡಾಟಾ ಪ್ಯಾಕ್ ಕೂಡಾ ಹಾಕಿಸಿದ್ದೇನೆ. ಇಷ್ಟನ್ನೆಲ್ಲಾ ಮಾಡಿದರೂ ವಿಶ್ವವಿದ್ಯಾಲಯದ ಕಡೆಯಿಂದ ಪ್ರತಿಸ್ಪಂದವೇ ಇಲ್ಲ ಎಂಬ ಕಾರಣಕ್ಕಾಗಿ ಇಷ್ಟು ದಿನಗಳ ತನಕ ಕಾದು, ಈಗ ಮರ್ಯಾದೆ ಬಿಟ್ಟು ಹೇಳುತ್ತಾ ಇದ್ದೇನೆ. ಮುಂದೆ ಯಾರಿಗೂ ಹೀಗಾಗಬಾರದು, ವಿಶ್ವವಿದ್ಯಾಲಯದ ಗೌರವ ನಾಶವಾಗಬಾರದು ಎಂಬ ಇರಾದೆ ನನ್ನದು. ಆದ್ದರಿಂದ ಈ ನನ್ನ ನಿರ್ಲಜ್ಜ ವ್ಯವಹಾರ. ನಾನು ಮಾಡಿದ ಬೋಧನೆಯನ್ನು ವಿಶ್ವವಿದ್ಯಾಯ ಯೂಟ್ಯೂಬ್ ಚಾನಲ್ನಲ್ಲಿಯೂ ಅಪ್ಲೋಡ್ ಮಾಡಿದೆ ಅದರ ಲಿಂಕ್ ಈ ಕೆಳಗಿದೆ (ಇಲ್ಲಿ ಲಿಂಕ್ ಸೇರಿಸಿಲ್ಲ. ವಿಶ್ವವಿದ್ಯಾಲಯಕ್ಕೆ ಕಳುಹಿಸಿದ ಪತ್ರದಲ್ಲಿ ಸೇರಿಸಿದ್ದೆ.)

 

ಪತ್ರವನ್ನು ಕಳುಹಿಸಿದ ಒಂದು ವಾರದ ನಂತರ ವಿಶ್ವವಿದ್ಯಾಲಯ ಅಭಿನಂದನಾ ಪತ್ರವೊಂದನ್ನು ಮೇಲ್ ಮಾಡಿತು. ಪತ್ರವನ್ನು ನೋಡಿದ ನನಗೆ ಕಟಕಟೆ ದೇವರಿಗೆ ಮರದ ಜಾಗಟೆ ಎಂಬ ಗಾದೆ ನೆನಪಾಯಿತು.


ಶ್ರೀಮದ್ರಾಮಾಯಣೀ ಗಂಗಾ

ವಾಲ್ಮೀಕಿಗಿರಸಂಭೂತಾ ರಾಮಾಂಭೋನಿಧಿಸಂಗತಾ । ಶ್ರೀಮದ್ರಾಮಾಯಣೀ ಗಂಗಾ ಪುನಾತಿ ಭುವನತ್ರಯಮ್ ॥ ಎಂಬ ಮಾತಿನ ಮೂಲಕ ಹಿರಿಯರು ರಾಮಾಯಣವನ್ನು ಗಂಗೆಯೆಂದೇ ಕರೆದಿದ್ದಾರೆ. ರಾಮಾಯ...