ಬುಧವಾರ, ಜುಲೈ 8, 2020

ಮಿತಾದರ್ಶ, ಹಿತಾದರ್ಶ, ಸಕಾಲಾದರ್ಶ


ಹಾಸ್ಟೆಲ್ನ ಜೀವನವನ್ನು ಅನುಭವಿಸದಿದ್ದವರು ಜೀವನದಲ್ಲಿ ಮಹತ್ತ್ವವಾದ ಅಂಶವೊಂದನ್ನು ಕಳೆದುಕೊಂಡಂತೆಯೇ. ಹಾಸ್ಟೆಲ್ ನಲ್ಲಿ ಸಿಗುವ ಅನೇಕ ಅನುಭವಗಳಿಗೆ ಬದಲಿ(alternative) ಅನುಭವಗಳಿಲ್ಲ. ವಿವಿಧ ಊರುಗಳಿಂದ ವಿವಿಧ ಮನಃಸ್ಥಿತಿಯ ಬಗೆಬಗೆಯ ವಿದ್ಯಾರ್ಥಿಗಳು ಸೇರುವುದರಿಂದ ಅನೇಕರಿಗೆ ಅನೇಕ ವಿಷಯಗಳ ಪರಿಚಯವಾಗುತ್ತದೆ. ತಮ್ಮ ಅಧ್ಯಯನಕ್ಕಾಗಿ ಹಾಸ್ಟೆಲ್ ಸೇರಿದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವಾಸ ಕೊನೆಯಾದ ಹಲವು ವರ್ಷಗಳ ನಂತರವೂ ಅಧ್ಯಯನವೊಂದನ್ನು ಬಿಟ್ಟು ಬೇರೆಲ್ಲಾ ಅಂಶಗಳು ನೆನಪಿರುತ್ತವೆ ಎಂಬುವುದಂತೂ ಸತ್ಯ. ಅನೇಕ ಹಾಸ್ಟೆಲ್ ಗಳು ರ್ಯಾಗಿಂಗ್ ಮುಂತಾದ ಕೆಟ್ಟ ಕಾರಣಗಳಿಂದಾಗಿ ಯುವಪೀಳಿಗೆಯ ಹಾದಿ ತಪ್ಪಿಸುತ್ತಿದ್ದರೂ ಅನೇಕ ಹಾಸ್ಟೆಲ್ ಗಳಲ್ಲಿ ಹಿರಿಯ ವಿದ್ಯಾರ್ಥಿಗಳು ಕಿರಿಯರಿಗೆ ಮಾರ್ಗದರ್ಶನವನ್ನು ನೀಡಿ ಕಿರಿಯರ ಜೀವನವನ್ನು ರೂಪಿಸುತ್ತಿರುವುದನ್ನೂ ಕಾಣಬಹುದು.

ನಾನು ಶೃಂಗೇರಿಯಲ್ಲಿ ಹಾಸ್ಟೆಲ್ ಸೇರಿದಾಗ ಆ ಹಾಸ್ಟೆಲ್ ಆಗಷ್ಟೇ ನಿರ್ಮಾಣವಾಗಿತ್ತು. ಹೊಸ ಹಾಸ್ಟೆಲ್ ನಲ್ಲಿ ವಾಸ ಮಾಡಿದ ಎರಡನೇ ಬ್ಯಾಚ್ ನಮ್ಮದು. ಹೀಗಾಗಿ ಹಾಸ್ಟೆಲ್ ದೃಷ್ಟಿಯಿಂದ ನೋಡಿದರೆ ಹಿರಿಯರು ಕಿರಿಯರು ಎಂಬ ಭೇದಭಾವವಿರಲಿಲ್ಲ. ಈ ಹಾಸ್ಟೆಲ್ ನಲ್ಲಿ ಎಲ್ಲರೂ ಹೊಸಬರೇ. ಅನೇಕರಿಗೆ ಬೇರೆ ಹಾಸ್ಟೆಲ್ ಗಳಲ್ಲಿ ವಾಸವಾಗಿದ್ದ ಅನುಭವವನ್ನು ಗಣನೆಗೆ ತೆಗೆದುಕೊಂಡರಷ್ಟೇ ಹಿರಿಯರು ಕಿರಿಯರು ಎಂಬ ಎರಡು ವರ್ಗಗಳನ್ನು ಹೇಳಬಹುದಾಗಿತ್ತು.


ವಿದ್ಯಾರ್ಥಿಜೀವನದಲ್ಲಿ ಚಟಗಳು ಅಂಟುವುದು ಸಾಮಾನ್ಯ. ಅನೇಕರು ವಿದ್ಯಾರ್ಥಿಜೀವನದಲ್ಲಂಟಿದ ಚಟಗಳಿಂದ ತಮ್ಮ ಜೀವನವನ್ನೇ ಬಲಿಯಾಗಿಸಿದ ಘಟನೆಗಳೂ ಇವೆ. ಮತ್ತೂ ಕೆಲವರಿಗೆ ಅಂಟಿದ ಚಟವನ್ನು ಬಿಡಲಾಗದಿದ್ದರೂ ನಾನು ಮಾಡುತ್ತಿರುವ ಚಟ ಒಳ್ಳೆಯದಲ್ಲ ಎಂಬ ಅರಿವೂ ಇರುತ್ತದೆ. ಅಲ್ಲದೇ, ನನ್ನಿಂದಾಗಿ ಇತರರು ಚಟವನ್ನು ಕಲಿಯಬಾರದು ಎಂಬ ಕಳಕಳಿಯೂ ಇರುತ್ತದೆ. ಇಂತಹವರು ತುಂಬಾ ವಿರಳ. ನನ್ನ ಹಾಸ್ಟೆಲ್ ನಲ್ಲಿ ವಾಸಿಸುತ್ತಿದ್ದ ಹಿರಿಯ ವಿದ್ಯಾರ್ಥಿಯೊಬ್ಬನಿಗೆ (ಮೊದಲೇ ಹೇಳಿದಂತೆ ಬೇರೆ ಕಡೆ ವಿದ್ಯಾಭ್ಯಾಸವನ್ನು ಮುಗಿಸಿ ಉನ್ನತ ವಿದ್ಯಾಭ್ಯಾಸಕ್ಕಾಗಿ ನಮ್ಮ ವಿದ್ಯಾಪೀಠವನ್ನು ಸೇರಿದವನು) ಗುಟಕಾ ತಿನ್ನುವ ಚಟವಿತ್ತು. ಹಾಗೆಂದು ಹೊಸದಾಗಿ ಯಾರಾದರೂ ಚಟವನ್ನು ಆರಂಭಿಸಿದರೆ ಮನಮುಟ್ಟುವಂತೆ ಅವರಿಗೆ ಬುದ್ಧಿಹೇಳಿ ಅವರನ್ನು ಚಟಮುಕ್ತರನ್ನಾಗಿಸುತ್ತಿದ್ದ.

ಆತ ಸುಮಾರು 20ರ ಸಂಖ್ಯೆಯಲ್ಲಿದ್ದ  ವಿದ್ಯಾರ್ಥಿಗಳಿಗೆ(ಹಾಸ್ಟೆಲ್ ನ ಒಂದು ಭಾಗದಲ್ಲಿ ವಾಸಿಸುತ್ತಿದ್ದ) ನಾಯಕನೂ ಆಗಿದ್ದ. ಹಾಗೆಂದು ಆತನೂ ಘೋಷಿಸಿಕೊಂಡಿರಲಿಲ್ಲ, ಹಾಸ್ಟೆಲ್ ವಾರ್ಡನ್ ಕೂಡಾ ಘೋಷಿಸಿರಲಿಲ್ಲ. ಆದರೂ ವಿದ್ಯಾರ್ಥಿಗಳಿಗೆಲ್ಲರಿಗೂ ಸೂಕ್ತವಾದ ಸಮಯದಲ್ಲಿ ಸೂಕ್ತ ಮಾರ್ಗದರ್ಶನವನ್ನು ನೀಡುತ್ತಿದ್ದ. ಈ 20 ಜನರಲ್ಲೇ  7-8 ಜನರ ಆಪ್ತವಲಯವಿತ್ತು (ಅದರಲ್ಲಿ ನಾನೂ ಒಬ್ಬ). ವಿಶೇಷವಾಗಿ ತಿಂಡಿಯನ್ನೇನಾದರೂ ಯಾರಾದರೂ ತಿಂದರೆ ಹಂಚಿಕೊಂಡು ತಿನ್ನುವುದು ನಮ್ಮ ಅಭ್ಯಾಸವಾಗಿತ್ತು. ಹೀಗೆ ತಿನ್ನುವ ಸಮಯದಲ್ಲಿ ಯಾರೂ ಬರಬಾರದು. (ಬೇರೆಯವರಿಗೆ ಕೊಡಬಾರದೆಂದಲ್ಲ. ಇರುವ ಇಷ್ಟರಲ್ಲೇ ಬೇರೆಯವರಿಗೆ ಕೊಟ್ಟರೆ ನಮಗೇನೂ ಉಳಿಯದೇ ಕಷ್ಟವಾಗುತ್ತಿತ್ತು.) ತಿನ್ನುವ ವೇಳೆಯಲ್ಲಿ ಯಾರಾದರೂ ಬಂದರೆ ಉಪಾಯವಾಗಿ ಅವರನ್ನು ಹೊರಗಟ್ಟುತ್ತಿದ್ದೆವು.


ಹೀಗೆ ಒಂದು ಬಾರಿ ಗೆಳೆಯನೊಬ್ಬ ಹಲಸಿನ ಹಣ್ಣಿನ ಚಿಪ್ಸ್ (ಸೋಂಟೆ) ತಂದಿದ್ದ. ತಿನ್ನುತ್ತಿರುವಾಗ ವಿದ್ಯಾಪೀಠದ ನಾಯಕನ ಆಗಮನವಾಯಿತು. ವಿದ್ಯಾಪೀಠದ ನಾಯಕ ನಮ್ಮೆಲ್ಲರಿಗೂ ಅಣ್ಣನಂತೆ ಆತ್ಮೀಯನಾಗಿ ಅಚ್ಚುಮೆಚ್ಚಿನವನಾಗಿದ್ದರಿಂದ ಒಕ್ಕೊರಲಿನಿಂದ ಆತನನ್ನು ಸ್ವಾಗತಿಸಿದೆವು. ಬಾಗಿಲಿಗೆ ಚಿಲಕ ಜಡಿದು ಹೊಟ್ಟೆಗೆ ತಿಂಡಿ ಜಡಿಯಲಾರಂಭಿಸಿದೆವು. ಆ ದಿನದ ಉಪಾಹಾರ ಅಂತಿಮ ಹಂತಕ್ಕೆ ಬಂದಿತ್ತು. ಬಂದ ಅತಿಥಿ ವಿದ್ಯಾಪೀಠದ ನಾಯಕನಾಗಿದ್ದರಿಂದ ಯಾವುದೋ ಕೆಲಸಕ್ಕೆ ಆತನನ್ನು ಹುಡುಕಿಕೊಂಡು ಬಂದಿದ್ದ ನಾಲ್ಕೈದು ವಿದ್ಯಾರ್ಥಿಗಳು ಬಾಗಿಲು ಬಡಿಯಲಾರಂಭಿಸಿದರು. ಬಾಗಿಲು ತೆಗೆಯದೇ ನಿರ್ವಾಹವಿಲ್ಲ. ಬಾಗಿಲು ತೆಗೆದ ತಕ್ಷಣ ತಿಂಡಿಯನ್ನು ಕಂಡರೆ ವಿದ್ಯಾರ್ಥಿಗಳು ಬಿಡುವವರಲ್ಲ. ತಿನ್ನಬೇಡಿ ಎಂದು ಹೇಳಲೂ ಸಾಧ್ಯವಿಲ್ಲ. (ಆತಿಥ್ಯಕ್ಕೆ ಹೆಸರಾದ ಉತ್ತರಕನ್ನಡದ ಹವ್ಯಕರು ಯಾರಿಗೂ ಗೊತ್ತಾಗದಂತೆ ತಿಂದು ಮುಗಿಸಿಯಾರು, ಆದರೆ ತಿನ್ನುವ ವೇಳೆಯಲ್ಲಿ ಯಾರಾದರೂ ಎದುರಿಗೆ ಬಂದರೆ ಅವರಿಗೆ ನೀಡದೇ ತಿನ್ನುವುದಂತೂ ಸಾಧ್ಯವಿಲ್ಲ. ನನ್ನೊಬ್ಬನನ್ನು ಬಿಟ್ಟರೆ ಗೆಳೆಯರೆಲ್ಲಾ ಉತ್ತರಕನ್ನಡದ ಹವ್ಯಕರೇ). ಉಪಾಯವಾಗಿ ಅವರನ್ನು ಹೊರಗಟ್ಟಲು ನಮ್ಮ ನಾಯಕ ಚಿಲಕ ತೆಗೆಯುವುದಕ್ಕೂ ಮುಂಚೆ ವಿದ್ಯಾಪೀಠದ ನಾಯಕನನ್ನುದ್ದೇಶಿಸಿ ಎರಡು ಮಾತುಗಳನ್ನಾಡಿದ.

ಈಗ ಬಂದವರು ತಿಂಡಿ ತಿಂದರೆ ನಾಳೆಗೆ ತಿಂಡಿ ಉಳಿಯುವುದಿಲ್ಲ. ಹೀಗಾದುದಕ್ಕೆ ನೀನೇ ಕಾರಣನಾಗುತ್ತೀ. ಎನ್ನುತ್ತಲೇ ಚಿಲಕ ತೆಗೆದು ಬನ್ನಿ ತಗೋಳಿ, ತಿನ್ನಿ ಎನ್ನುತ್ತಾ ಬಂದವರನ್ನು ಸ್ವಾಗತಿಸಿದ. ಚಾಣಾಕ್ಷಮತಿಯಾದ ವಿದ್ಯಾಪೀಠದ ನಾಯಕನಿಗೆ ನಮ್ಮ ನಾಯಕನ ಮಾತುಗಳ ಆಂತರ್ಯ ಅರ್ಥವಾಯಿತು.  ಕೂಡಲೇ ತಾನೇ ನಾಲ್ಕು ಚಿಪ್ಸ್(ಸೋಂಟೆ)ಗಳನ್ನು ಕೈಯಲ್ಲಿ ಹಿಡಿದುಕೊಂಡು ಅವರಿಗೂ ಕೊಟ್ಟು ಬಂದವರನ್ನೆಲ್ಲರನ್ನೂ ಹೊರಗೊಯ್ದ.  ಹೀಗೆ ಯಾರ ಮನಸ್ಸಿಗೂ ನೋವುಂಟುಮಾಡದೇ ಯಾರೂ ತಿಂಡಿಯನ್ನು ತಿನ್ನದಂತೆ ಪರಿಸ್ಥಿತಿಯ ನಿರ್ವಾಹವಾಯಿತು. (ವಿದ್ಯಾಪೀಠದ ನಾಯಕನಿಗೂ ಬೇಜಾರಾಗಲು ಸಾಧ್ಯವಿಲ್ಲ. ಆತನೂ ಇಂತಹ ಅನೇಕ ಪರಿಸ್ಥಿತಿಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದರಿಂದಲೇ ವಿದ್ಯಾಪೀಠದ ನಾಯಕನಾದುದಲ್ಲವೇ.)

ಸಂಸ್ಕೃತ ವಿದ್ಯಾರ್ಥಿಗಳಾದ ನಮಗೂ ಆಧುನಿಕತೆಯ ಸ್ಪರ್ಶವಾಗಲಾರಂಭಿಸಿತ್ತು. ನಮ್ಮ 7-8 ವಿದ್ಯಾರ್ಥಿಗಳಲ್ಲಿ ಯಾರದಾದರೂ ಹುಟ್ಟುಹಬ್ಬವಿದ್ದರೆ ಕೇಕ್ ತಂದು ಕತ್ತರಿಸಿ ಆಚರಿಸುವ ಪರಂಪರೆಯಿತ್ತು. 100 ರೂಪಾಯಿಗೆ ಕೇಕ್ ಸಿಗುತ್ತಿದ್ದ ಆ ಕಾಲದಲ್ಲಿ ಪ್ರತಿಯೊಬ್ಬರೂ 10-15 ರೂಪಾಯಿಗಳನ್ನು ಹಾಕಿದ್ದರೆ ಕೇಕ್ ತರಬಹುದಾಗಿತ್ತು. ಹೀಗೆ ಕೇಕ್ ತಂದು ಕತ್ತರಿಸಿ ತಿನ್ನುತ್ತಿದ್ದೆವು. ನಮ್ಮಲ್ಲೊಬ್ಬನ ಬಳಿ ಚೈನೀಸ್ ಮೊಬೈಲ್ ಸೆಟ್ ಇತ್ತು. ಆ ಮೊಬೈಲ್ ಸೆಟ್ ನಲ್ಲಿ ನಗುತಾನಗುತಾ ಬಾಳು ನೀನು ನೂರು ವರುಷ ಎಂಬ ಹಾಡನ್ನು ಪ್ಲೇ ಮಾಡುತ್ತಾ ಕೇಕ್ ತಿನ್ನುತ್ತಾ ಹುಟ್ಟುಬ್ಬವನ್ನಾಚರಿಸುತ್ತಿದ್ದೆವು.

ನಾನು ಹಾಸ್ಟೆಲ್ ಸೇರಿದ ಮರು ವರ್ಷವೇ ನಮ್ಮ ಸ್ನೇಹಿತರ ಬಳಗಕ್ಕೆ ಮತ್ತೊಬ್ಬನ ಪ್ರವೇಶವಾಯಿತು. ವರ್ಷಾರಂಭದಲ್ಲೇ ಆತನ ಹುಟ್ಟುಹಬ್ಬ. ಆತನೋ ಧೃಢಮತಿ. ಏನನ್ನಾದರೂ ನಿರ್ಧರಿಸಿದರೆ ತನ್ನ ನಿರ್ಧಾರವನ್ನು ಬದಲಾಯಿಸುವುದೇ ಇಲ್ಲ. ನಾನು ಕೇಕ್ ತಿನ್ನುವುದಿಲ್ಲ ಹಾಗೂ ಕತ್ತರಿಸುವುದಿಲ್ಲ ಎಂಬ ನಿರ್ಣಯವನ್ನು ಅವನು ಮಾಡಿದ್ದನಂತೆ. ಈ ವಿಚಾರ ಗೊತ್ತಿಲ್ಲದ ನಾವು ಕೇಕ್ ತಂದುಬಿಟ್ಟಿದ್ದೆವು. ಆತನನ್ನು ಕರೆದು ಕತ್ತರಿಸಲು ಹೇಳಿದಾಗ ತಮ್ಮ ನಿರ್ಣಯವನ್ನು ತಿಳಿಸಿ ನಿಮಗೆ ಬೇಜಾರಾದರೂ ಕೂಡಾ ನನ್ನ ನಿರ್ಧಾರದಿಂದ ನಾನು ಹಿಂದೆ ಸರಿಯುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿಬಿಟ್ಟ. ಕೇಕನ್ನು ತಂದು ಸಂತೋಷದಿಂದ ಹುಟ್ಟುಹಬ್ಬವನ್ನು ಆಚರಿಸುತ್ತೇವೆಂದು ಕಾತರರಾಗಿದ್ದ ನಮಗೆ ಬರಸಿಡಿಲು ಬಡಿದಂತಾಯಿತು. ವಿವಿಧರೀತಿಯಲ್ಲಿ ಕೇಕ್ ತಿನ್ನುವಂತೆ ಹೇಳಿದ ಪ್ರಯತ್ನಗಳೆಲ್ಲಾ ವಿಫಲವಾದುವು. ಕೊನೆಯ ಪ್ರಯತ್ನವಾಗಿ ನೀನು ತಿನ್ನದಿದ್ದರೆ ನಾವೂ ತಿನ್ನುವುದಿಲ್ಲ ಎಂದು ಹೇಳಿದ ನಮ್ಮ ನಾಯಕನ ನುಡಿಗೂ ಆತ ಜಗ್ಗಲಿಲ್ಲ. ತಂದಿದ್ದ ಕೇಕ್, ಆತನ ನಿರ್ಣಯ ಹಾಗೂ ನಮ್ಮ ಬಾಡಿದ ಮುಖಗಳು ಹಾಗೆಯೇ ಉಳಿದವು.


ಮರುದಿನ ನಾಯಕ ತನ್ನ ರೂಮಿಗೆ ನಮ್ಮನ್ನೆಲ್ಲ ಕರೆದ. ಕೇಕ್ ಕತ್ತರಿಸಲು ನಿರಾಕರಿಸಿದ ಸ್ನೇಹಿತ ಇರಲಿಲ್ಲ. ಆತ ಹಾಗೆ ಹೇಳಿದ ಎಂದು ಬೇಜಾರಾಗಿ ಕೇಕ್ ಬಿಸಾಡುವುದರಲ್ಲಿ ಅರ್ಥವಿಲ್ಲ. ಯಾರದೋ ಮೇಲಿರುವ ಬೇಜಾರಿಗೆ ತಿನ್ನುವ ವಸ್ತುವನ್ನು ಹಾಳು ಮಾಡುವ ಅಧಿಕಾರ ನಮಗಿಲ್ಲ. ನಿನ್ನೆಯೇನೋ ನೀನು ತಿನ್ನದಿದ್ದರೆ ನಾವೂ ತಿನ್ನುವುದಿಲ್ಲ ಎಂದು ಹೇಳಿಬಿಟ್ಟೆವು. ಆದರೆ ಈಗ ಆತನ ಹುಟ್ಟುಹಬ್ಬದ ಕೇಕ್ ಅಂತಲ್ಲ, ತಿನ್ನುವ ವಸ್ತುವೊಂದಿದೆ ಅಂದುಕೊಂಡು ತಿಂದು ಮುಗಿಸೋಣ ಎನ್ನುತ್ತಾ ಕೇಕ್ ಕೊಯ್ದು ಎಲ್ಲರಿಗೂ ಹಂಚಿದ. ಈ ಘಟನೆಯಿಂದಾಗಿ ನಮ್ಮ ಸ್ನೇಹಿತರ ವಲಯದಲ್ಲಿ ಕೇಕ್ ತಂದು ಹುಟ್ಟುಹಬ್ಬವನ್ನಾಚರಿಸುವ ಸಂಪ್ರದಾಯ ನಿಂತೇ ಹೋಯಿತು.

ಹೀಗೆ ಉನ್ನತ ಆದರ್ಶಗಳನ್ನು ತಿಳಿದಿದ್ದರೂ ವಾಸ್ತವ ಬದುಕಿನಲ್ಲಿ ಎಷ್ಟರ ಮಟ್ಟಿಗೆ ಅವುಗಳನ್ನು ಅನುಸರಿಬೇಕು ಎಂಬುದರ ಬಗ್ಗೆ ಕಲ್ಪನೆ ಅನೇಕರ ಇಂತಹ ವ್ಯವಹಾರಗಳಿಂದ ತಿಳಿದುಬರುತ್ತದೆ. ಈ ವಿಚಾರಕ್ಕೆ ಪೂರಕವಾಗಿ ತತ್ಕ್ಷಣದಲ್ಲಿ ನೆನಪಾದ ಘಟನೆಗಳನ್ನು ಉದಾಹರಿಸಿದೆ ಅಷ್ಟೇ.

ಶ್ರೀಮದ್ರಾಮಾಯಣೀ ಗಂಗಾ

ವಾಲ್ಮೀಕಿಗಿರಸಂಭೂತಾ ರಾಮಾಂಭೋನಿಧಿಸಂಗತಾ । ಶ್ರೀಮದ್ರಾಮಾಯಣೀ ಗಂಗಾ ಪುನಾತಿ ಭುವನತ್ರಯಮ್ ॥ ಎಂಬ ಮಾತಿನ ಮೂಲಕ ಹಿರಿಯರು ರಾಮಾಯಣವನ್ನು ಗಂಗೆಯೆಂದೇ ಕರೆದಿದ್ದಾರೆ. ರಾಮಾಯ...