ಭಾನುವಾರ, ಜುಲೈ 28, 2019

ಸಂದರ್ಶನದಿಂದ some ದರ್ಶನ

ಶೇಕಡಾ ೯೦ ರಷ್ಟು ಸರ್ಕಾರಿ ನೌಕರರು ಲಂಚವನ್ನು ನೀಡಿಯೋ ಶಿಫಾರಸ್ಸಿನಿಂದಲೋ ಕೆಲಸಕ್ಕೆ ಸೇರಿರುತ್ತಾರೆಂಬುದು ಕಟು ಸತ್ಯ. ಯೋಗ್ಯ ಅಭ್ಯರ್ಥಿಯೂ ಕೂಡಾ ಹಣಬಲ, ಶಿಫಾರಸ್ಸಿನ ಬಲವಿಲ್ಲದಿದ್ದರೆ ಉನ್ನತ ಹುದ್ದೆಯಲ್ಲಿ ನಿಯುಕ್ತನಾಗಲಾರ. ಜಗತ್ತಿನ ವೃತ್ತಿಗಳಲ್ಲಿ ಪವಿತ್ರ ವೃತ್ತಿಯೆಂದು ಹೆಸರಾದ ಶಿಕ್ಷಕವೃತ್ತಿಯ ನಿಯುಕ್ತಿಯಲ್ಲೂ ಲಂಚ, ಶಿಫಾರಸ್ಸುಗಳು ಪ್ರಭಾವ ಬೀರುತ್ತಿವೆ ಎಂಬುವುದು ನಾಚಿಕೆಯ ಸಂಗತಿ. ಶಿಕ್ಷಕ ವೃತ್ತಿಯಲ್ಲಿ ಅಕ್ರಮವಾಗಿ ಹಣಗಳಿಸುವ ಅವಕಾಶಗಳು ಕಡಿಮೆ ಇರುವುದರಿಂದಲೋ ಏನೋ ಲಂಚ ಕೊಟ್ಟು ಕೆಲಸಕ್ಕೆ ಸೇರಲು ಇತರ ವೃತ್ತಿಗಳಂತೆ ಹಪಾಹಪಿ ಇರುವುದಿಲ್ಲ. ಆದರೂ ಕೂಡಾ ಜೀವನದ ಭದ್ರತೆಯ ದೃಷ್ಟಿಯಿಂದ ಅನೇಕರು ಲಂಚ ಕೊಟ್ಟು ಕೆಲಸಕ್ಕೆ ಸೇರಿರುತ್ತಾರೆ. ಅನುದಾನಿತ ಸಂಸ್ಥೆಗಳಲ್ಲಿ ಶಿಕ್ಷಕ ನಿಯುಕ್ತಿಗಾಗಿ ತೆಗೆದುಕೊಳ್ಳುವಂತಹ ಹಣದಿಂದ ಸಾಮಾನ್ಯವಾಗಿ ಸಂಸ್ಥೆಯ ಅಭಿವೃದ್ಧಿಯನ್ನೇ ಮಾಡುತ್ತಾರೆ. ಯಾವನೋ ಒಬ್ಬ ಭ್ರಷ್ಟ ಕೊಟ್ಟ ಹಣವನ್ನು ತಿಂದು ತೇಗುವುದಿಲ್ಲ. ಆದ್ದರಿಂದ ಇದು ಲಂಚದ ವ್ಯಾಪ್ತಿಗೆ ಬರುವುದಿಲ್ಲ. ನಾವು ಕೊಟ್ಟದ್ದು ದೇಣಿಗೆ ಎಂದು ಸಮಾಧಾನಪಟ್ಟುಕೊಳ್ಳುವವರೂ ಅನೇಕರಿದ್ದಾರೆ.

ನನ್ನ ಮಿತ್ರನೊಬ್ಬ ಅಧ್ಯಾಪಕ ಹುದ್ದೆಗೆ ಅರ್ಜಿ ಹಾಕಿದ್ದ. ಲಂಚವನ್ನೂ ಶಿಫಾರಸ್ಸುಗಳನ್ನೂ ಮಾಡಿ ಹುದ್ದೆಯು ಆತನಿಗೇ ಆಗುವಂತೆ ವ್ಯವಸ್ಥೆಯೂ ಆಗಿತ್ತು. ಆದರೆ ಸರ್ಕಾರಿ ನಿಯಮಗಳ ಪ್ರಕಾರ ಹುದ್ದೆ ಮಂಜೂರಾಗಬೇಕಾದರೆ ಅರ್ಜಿ ಹಾಕಿದವರಲ್ಲಿ ಅರ್ಧದಷ್ಟಾದರೂ ಮಂದಿ ಸಂದರ್ಶನಕ್ಕೆ ಹಾಜರಾಗಬೇಕು ಎಂಬ ನಿಯಮವಿದೆಯಂತೆ. ಲಂಚ, ಶಿಫಾರಸ್ಸುಗಳ ಮೂಲಕ ಸಂದರ್ಶನಕ್ಕಿಂತ ಮೊದಲೇ ನಿಯುಕ್ತಿಯ ನಿರ್ಣಯವಾಗುವುದರಿಂದ ಅರ್ಜಿ ಹಾಕಿದವರೆಲ್ಲಾ ಸಂದರ್ಶನಕ್ಕೆ ಬರುವುದಿಲ್ಲ ಎಂಬ ನಿಶ್ಚಯವಿತ್ತು. ನನ್ನ ಗೆಳೆಯನೂ ಇಂತಹ ಸಂದರ್ಭಕ್ಕಿರಲಿ ಎಂದು ನನ್ನ ಹೆಸರಿನಲ್ಲೂ ಅರ್ಜಿ ಹಾಕಿದ್ದ. "ಅರ್ಜಿ ಹಾಕಿದವರಲ್ಲಿ ಅನೇಕರು ಸಂದರ್ಶನಕ್ಕೆ ಬರುವುದಿಲ್ಲಂತೆ. ಆದ್ದರಿಂದ ನನ್ನ ಹುದ್ದೆ ಮಂಜೂರಾತಿಗೆ ಸಮಸ್ಯೆಯಾಗಬಾರದು ನೀನೂ ಕೂಡಾ ಸಂದರ್ಶನಕ್ಕೆ ಬಾ" ಎಂದು ನನ್ನನ್ನು ಕೇಳಿಕೊಂಡ. ನಾನೂ "ಆಯಿತು ಟಿಕೆಟ್ ಬುಕ್ ಮಾಡು" ಎಂದು ಹೇಳಿದೆ. ಪ್ರವಾಸ ಮಾಡದೇ ತುಂಬಾ ದಿನಗಳಾಗಿದ್ದವು. ಅಲ್ಲದೇ ಸಂದರ್ಶನಕ್ಕೆ ಹಾಜರಾಗುವ ಅನುಭವವೂ ಆಗುತ್ತಿತ್ತು. ನಿಃಶುಲ್ಕವಾಗಿ ಪ್ರವಾಸವೂ ಅನುಭವವೂ ಆಗುತ್ತದೆಯೆಂದಾದರೆ ಯಾಕೆ ತಪ್ಪಿಸಿಕೊಳ್ಳಬೇಕು ಎಂಬ ದೃಷ್ಟಿಯಿಂದ ಸಂದರ್ಶನಕ್ಕೆ ಹಾಜರಾದೆ.

ಸಂಸ್ಕೃತ ಶಿಕ್ಷಕ ಹುದ್ದೆಗೆ ಸಂದರ್ಶನವಿತ್ತು. ಮೊದಲಿಗೆ ಮೂಲಪ್ರಮಾಣಪತ್ರಗಳ ಪರಿಶೀಲನೆಯನ್ನು ನಡೆಸಿದರು. ನನ್ನ ಪ್ರಮಾಣಪತ್ರಗಳು ಮನೆಯಲ್ಲಿದ್ದು ನಾನು ಬೆಂಗಳೂರಿನಿಂದ ಸಂದರ್ಶನಕ್ಕೆ ಹೋದ್ದರಿಂದ ಮೂಲಪ್ರಮಾಣಪತ್ರಗಳನ್ನು ಜೊತೆಯಲ್ಲಿ ಒಯ್ದಿರಲಿಲ್ಲ. ಆದರೂ ಕೂಡಾ ಸ್ವಲ್ಪವೂ ಹೆದರಿಕೆಯಾಗಲಿ ಆತಂಕವಾಗಲೀ ಮನಸ್ಸಿನಲ್ಲಿರಲಿಲ್ಲ. ಮೂಲಪ್ರಮಾಣಪತ್ರಗಳನ್ನು ಹಾಜರುಪಡಿಸದಿದ್ದರೆ ಸಂದರ್ಶನ ನಡೆಸುವುದು ಅಸಾಧ್ಯ ಆದರೂ ಒಂದು ಪತ್ರವನ್ನು ಬರೆದುಕೊಡಿ ನೋಡೋಣ ಎಂದರು. ಪತ್ರವನ್ನು ಬರೆದುಕೊಟ್ಟ ನಂತರ ಲಿಖಿತ ಪರೀಕ್ಷೆಗೆ ಅನುಮತಿಯನ್ನು ನೀಡಿದರು.

ಲಿಖಿತ ಪರೀಕ್ಷೆಯಲ್ಲಿ ಪ್ರಶ್ನೆಗಳು ಕಡಿಮೆಯಿದ್ದು ಸಮಯ ಯಥೇಷ್ಟವಾಗಿತ್ತು. ನಾಮಕಾವಸ್ತೆಗೆ ಬರೆಯುತ್ತಿರುವ ಪರೀಕ್ಷೆಯಲ್ಲಿ ಚೇಷ್ಟೆ ಮಾಡೋಣ ಎಂಬ ಮನಸ್ಸಾಯಿತು. ಪರೀಕ್ಷೆಯಲ್ಲಿ ಸ್ರಗ್ಧರಾ ಛಂದಸ್ಸಿನ ಲಕ್ಷಣವನ್ನೂ ಉದಾಹರಣೆಯನ್ನೂ ಬರೆಯಿರಿ ಎಂಬ ಪ್ರಶ್ನೆಯಿತ್ತು. ಲಕ್ಷಣವನ್ನು ಬರೆದು ಉದಾಹರಣಪದ್ಯವಾಗಿ ಸ್ವಯಂ ಪದ್ಯವೊಂದನ್ನು ಬರೆದೆ.
रक्षन्ती वेदशास्त्रे विलसति भुवने पाठशालेयमद्य
च्छात्राणां क्षेमकर्त्री सततमपि भवेत् रक्षणाच्छिक्षणाच्च।
भूयान्मन्मित्रमत्र प्रकटितमहिमाध्यापको योग्यलोकः
तस्मात्सूर्यः परीक्षां लिखति न तु पदप्राप्तिचित्तस्तु सत्यम्॥
(ಪರೀಕ್ಷೆಯನ್ನು ಬರೆದು ಬಂದ ನಂತರ ಧಾರಣೆಯ ಮೂಲಕ ಮೇಲ್ಕಂಡ ಪದ್ಯವನ್ನು ಬರೆದಿದ್ದೇನೆ. ಆದ್ದರಿಂದ ಅಭಿಪ್ರಾಯ ಇದೇ ಆದರೂ ಪರೀಕ್ಷೆಯಲ್ಲಿ ಬರೆದ ಪದ್ಯದಲ್ಲಿ ಕೆಲವು ಪದಗಳು ಬೇರೆ ಇರಬಹುದು.)

ಸಂದರ್ಶನಕಾಲದಲ್ಲಂತೂ ತುಂಬಾ ಸಂತೋಷವಾಯಿತು. ಅವರು ಕೇಳಿದ ಪ್ರಶ್ನೆಗಳಿಗೆಲ್ಲ ಉತ್ತರಿಸಿದೆ. ಗೊತ್ತಿಲ್ಲದಿದ್ದರೆ ನನಗೆ ಗೊತ್ತಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಸಂದರ್ಶನದ ಸಂದರ್ಭದಲ್ಲಿ ಇರಬಹುದಾದಂತಹ ಹೆದರಿಕೆಯಾಗಲೀ, ಸಂದರ್ಶನದ ನಂತರ ಆಗುವ ನಿರಾಸೆಯಾಗಲೀ ಆಗಲಿಲ್ಲ. ಗೆಳೆಯನ ಮನೆಯಲ್ಲೇ ಊಟ ತಿಂಡಿ ನಿದ್ದೆಗಳನ್ನು ಮಾಡಿ ಹಿಂದಿರುಗಿದೆ. ಮತ್ತೊಂದು ವಿಶೇಷವೆಂದರೆ ನನಗೆ ಆ ಹುದ್ದೆ ಸಿಗಲಿಲ್ಲವೆಂಬ ಬೇಜಾರೂ ಇರಲಿಲ್ಲ. ಏಕೆಂದರೆ ನನ್ನ ಮಿತ್ರ ಆ ಹುದ್ದೆಗೆ ಎಲ್ಲ ವಿಧವಾಗಿಯೂ ಅರ್ಹನಾಗಿದ್ದ. ಆದರೂ ಕೂಡಾ ಪರಿಸ್ಥಿತಿಯ ಕೈಗೊಂಬೆಯಾಗಿ ಲಂಚ, ದೇಣಿಗೆಯನ್ನು ಕೊಡಬೇಕಾಗಿ ಬಂದದ್ದು ವಿಪರ್ಯಾಸವೇ ಸರಿ. ಪುಕ್ಕಟೆಯಾಗಿ ಪ್ರವಾಸ ಹಾಗೂ ಸಂದರ್ಶನದ ಅನುಭವವಾಗಿದ್ದು ನನ್ನ ಭಾಗ್ಯ.

ಶ್ರೀಮದ್ರಾಮಾಯಣೀ ಗಂಗಾ

ವಾಲ್ಮೀಕಿಗಿರಸಂಭೂತಾ ರಾಮಾಂಭೋನಿಧಿಸಂಗತಾ । ಶ್ರೀಮದ್ರಾಮಾಯಣೀ ಗಂಗಾ ಪುನಾತಿ ಭುವನತ್ರಯಮ್ ॥ ಎಂಬ ಮಾತಿನ ಮೂಲಕ ಹಿರಿಯರು ರಾಮಾಯಣವನ್ನು ಗಂಗೆಯೆಂದೇ ಕರೆದಿದ್ದಾರೆ. ರಾಮಾಯ...