ಬಾಡಿಗೆ ಬೈಕೊಂದನ್ನು ಪಡೆದು ಬೇಕಾದ ಸ್ಥಳಗಳಿಗೆ ಪ್ರಯಾಣಿಸುವ ವ್ಯವಸ್ಥೆಯೇ ಬೌನ್ಸ್ ಬೈಕ್. ಬೌನ್ಸ್ ಬೈಕ್ ಅಪ್ಲಿಕೇಶನ್ ಡೌನ್ ಲೋಡ್ ಮಾಡಿಕೊಂಡು ನಮ್ಮ ಡ್ರೈವಿಂಗ್ ಲೈಸೆನ್ಸ್ ಹಾಗೂ ಸೆಲ್ಫಿಯನ್ನು ಅಪ್ ಲೋಡ್ ಮಾಡಬೇಕು. ಮೊಬೈಲ್ ನಲ್ಲಿ ಲೊಕೇಶನ್ ಆನ್ ಮಾಡಿ ಬೌನ್ಸ್ ಬೈಕ್ ಅಪ್ಲಿಕೇಶನ್ ಓಪನ್ ಮಾಡಿದರೆ ನಮ್ಮ ಹತ್ತಿರ ಇರುವ ಬೈಕನ್ನು ತೋರಿಸುತ್ತದೆ. ಸಾಮಾನ್ಯವಾಗಿ ಮೆಟ್ರೋ ಸ್ಟೇಶನ್ ಗಳಲ್ಲಿ ಬೈಕ್ ಗಳಿರುತ್ತವೆ. ಅಲ್ಲದೇ ಕೆಲವು ಜನನಿಬಿಡ ಪ್ರದೇಶಗಳಿಂದಲೂ ಬೈಕ್ ಗಳನ್ನು ಪಡೆಯಬಹುದು. ಲೊಕೇಶನ್ ಆಧಾರದಿಂದ ಮ್ಯಾಪ್ ಸಹಾಯ ಪಡೆದುಕೊಂಡು ಬೈಕ್ ನ ಬಳಿ ಹೋಗಬೇಕು. ಬೈಕ್ ನಲ್ಲಿ ಕೀ ಇರುವುದಿಲ್ಲ. ನಮಗೆ ಬಂದ ಓಟಿಪಿಯನ್ನು ಬೈಕ್ ನಲ್ಲಿರುವ ಕೀಬೋರ್ಡ್ನಲ್ಲಿ ಒತ್ತಿದರೆ ಬೈಕ್ ಅನ್ ಲಾಕ್ ಆಗುತ್ತದೆ. ಬೈಕಿನ ಡಿಕ್ಕಿಯಲ್ಲಿ ಹೆಲ್ಮೆಟ್ ಇರುತ್ತದೆ. ನಾವು ಹೋಗಬೇಕಾದಲ್ಲಿಗೆ ಹೋಗಿ, ಹೆಲ್ಮೆಟ್ ಡಿಕ್ಕಿಯಲ್ಲಿಟ್ಟು ಎಂಡ್ ಟ್ರಿಪ್ ಎಂದು ಒತ್ತಿದರೆ ಬೈಕ್ ಲಾಕ್ ಆಗುತ್ತದೆ. ನಮ್ಮ ಫೋನಿಗೆ ಬಿಲ್ ಬರುತ್ತದೆ. ಆನ್ ಲೈನ್ ನಲ್ಲಿ ಹಣ ಪಾವತಿಸಬೇಕು.
ಆದರೆ ಇಂತಹ ವ್ಯವಸ್ಥೆಯಲ್ಲಿ ಬೈಕನ್ನು ಪಡೆಯಬೇಕಾದರೆ ಸಾಮಾನ್ಯವಾಗಿ ೧೦ ನಿಮಿಷ ನಡೆಯಬೇಕಾಗುತ್ತದೆ. ಹಲವರು ಹೆಲ್ಮೆಟನ್ನು ಇಡಲು ಮರೆತಿರುತ್ತಾರೆ. ಆದ್ದರಿಂದ ಅನೇಕ ಬಾರಿ ಡಿಕ್ಕಿ ಖಾಲಿಯೇ ಇರುತ್ತದೆ. ಹೆಲ್ಮೆಟ್ ಇಲ್ಲದಿರುವ ಬೈಕನ್ನು ಪಡೆದ ಅನುಭವ ನನಗೂ ಆಯಿತು. ಮೊದಲೆರಡು ಬಾರಿ ಕಸ್ಟಮರ್ ಕೇರ್ ಗೆ ಫೋನ್ ಮಾಡಿ ವಿಚಾರಿಸಿದಾಗ ಟ್ರಿಪ್ ಕ್ಯಾನ್ಸಲ್ ಮಾಡಿ ಎಂಬ ಉತ್ತರ ಬಂದಿತು. ಮೂರನೇ ಬಾರಿಯೂ ೧೦ ನಿಮಿಷ ನಡೆದು ಬೈಕ್ ನಲ್ಲಿ ಹೆಲ್ಮೆಟ್ ಕಾಣದಾಗ ಸಿಟ್ಟು ಬಂತು. ಬಡವನ ಸಿಟ್ಟು ದವಡೆಗೆ ಮೂಲ ಆದ್ದರಿಂದ ಟ್ರಿಪ್ ಕ್ಯಾನ್ಸಲ್ ಮಾಡು ಎಂದು ಒಂದು ಮನಸ್ಸು ಎಚ್ಚರಿಸಿತು. ಆದರೂ ಮನಸ್ಸಿನ ಇನ್ನೊಂದು ಮೂಲೆಯಲ್ಲಿ ಹೆಲ್ಮೆಟ್ ಧರಿಸದೇ ಪ್ರಯಾಣಿಸುವ ಭಂಡಧೈರ್ಯವಿತ್ತು. ಮನಸ್ಸಿನಲ್ಲಿ ವಿಚಾರಗಳ ಸಂಘರ್ಷ ನಡೆದು ಕೊನೆಗೂ ಭಂಡಧೈರ್ಯವೇ ಗೆದ್ದಿತು. ಹೆಲ್ಮೆಟ್ ಇಲ್ಲದೇ ಬೈಕ್ ಓಡಿಸಿದ್ದಕ್ಕಾಗಿ ೧೦೦ ರೂ ದಂಡವನ್ನು ತೆತ್ತಾಯಿತು.
ಗಮ್ಯಸ್ಥಾನವನ್ನು ತಲುಪಿದ ನಂತರ ಕಸ್ಟಮರ್ ಕೇರ್ ಗೆ ಫೋನಾಯಿಸಿದೆ. ಹೆಲ್ಮೆಟ್ ಇಲ್ಲದೇ ಪ್ರಯಾಣ ಮಾಡಬಾರದು ಆದ್ದರಿಂದ ನೀವು ದಂಡವನ್ನು ಕಟ್ಟಿದ್ದಕ್ಕೆ ಬೌನ್ಸ್ ಬೈಕ್ ಜವಾಬ್ದಾರನಾಗುವುದಿಲ್ಲ. ನಿಮ್ಮ ಹಣವನ್ನು ಮರಳಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ನುಡಿದರು. ಆ ಕ್ಷಣಕ್ಕೆ ಸಿಟ್ಟಾದರೂ ಶಾಂತನಾಗಿ ಯೋಚಿಸಿದೆ. ಗೂಗಲ್ ನ ಮೂಲಕ ಬೌನ್ಸ್ ಬೈಕ್ ಸಿ.ಇ.ಓ ಮೇಲ್ ಐಡಿ ಪಡೆದುಕೊಂಡೆ. ನನಗಾದ ಸಮಸ್ಯೆಯನ್ನು ಮೇಲ್ ಮೂಲಕ ವಿವರಿಸಿದೆ. ೧ ಗಂಟೆಯ ಬಳಿಕ ಬೌನ್ಸ್ ಬೈಕ್ ನ ಮಾರ್ಕೆಟಿಂಗ್ ವಿಭಾಗದಿಂದ ಪ್ರತ್ಯುತ್ತರವೂ ದೊರಕಿತು. ನಿಮಗಾದ ತೊಂದರೆಗೆ ವಿಷಾದವಿದೆ. ನಾವು ನಿಮ್ಮ ದಂಡವನ್ನು ಮರಳಿಸುತ್ತೇವೆ. ಅಂತೆಯೇ ನಿಮಗೆ ಒಂದು ಹೆಲ್ಮೆಟನ್ನೂ ನೀಡುತ್ತೇವೆ. ನಿಮ್ಮ ವಿಳಾಸವನ್ನು ಕಳುಹಿಸಿ ಎಂದು ಬರೆದಿದ್ದರು. ಚುನಾವಣೆಯ ಸಮಯವಾಗಿದ್ದರಿಂದ ರಾಜಕಾರಣಿಗಳಂತೆಯೇ ಸುಳ್ಳು ಆಶ್ವಾಸನೆಯನ್ನು ನೀಡುತ್ತಿದ್ದಾರೆ. ಆದರೂ ಅಡ್ರೆಸ್ ಕಳುಹಿಸಿದರೆ ನನಗೆ ನಷ್ಟವೇನಿಲ್ಲ ಎಂದು ಅಡ್ರೆಸ್ ಕಳುಹಿಸಿದೆ. ಅಚ್ಚರಿಯೆಂದರೆ ಅಡ್ರೆಸ್ ಕಳುಹಿಸಿದ ಎರಡನೆಯ ದಿನವೇ ಕೊರಿಯರ್ ನ ಮೂಲಕ ಹೆಲ್ಮೆಟ್ ತಲುಪಿತು. ಆದರೆ ದಂಡದ ಹಣ ಪಾವತಿಯಾಗಲಿಲ್ಲ. ಪುನಃ ಹೆಲ್ಮೆಟ್ ಕಳುಹಿಸಿದ್ದಕ್ಕೆ ಧನ್ಯವಾದಗಳನ್ನು ತಿಳಿಸಿ ದಂಡದ ಹಣ ತಲುಪಲಿಲ್ಲ ಎಂದು ಸೂಚಿಸಿದೆ. ೧ ಗಂಟೆಯೊಳಗೆ ಬೌನ್ಸ್ ಬೈಕ್ ವ್ಯಾಲೆಟ್ ಗೆ ದಂಡದ ಹಣ ಸೇರ್ಪಡೆಯಾಯಿತು. ಬಹುಶಃ ನ್ಯಾಯವನ್ನು ತಪ್ಪದೇ ಅನಿವಾರ್ಯವಾಗಿ ಅನ್ಯಾಯ ಮಾಡಿದರೆ ಅನ್ಯಾಯದ ಪಾಪ ನಮಗೆ ಅಂಟುವುದಿಲ್ಲವೇನೋ.
ಭಾಗ ೨
ಬೌನ್ಸ್ ಬೈಕ್ ಗಳು ಜನಪ್ರಿಯವಾಗತೊಡಗಿದಂತೆ ಬೈಕ್ ಗಳಿಂದ ಹೆಲ್ಮೆಟ್ ಕದಿಯುವುದನ್ನು ತಡೆಯಲು ಬೌನ್ಸ್ ಸಂಸ್ಥೆಯಿಂದ ವಿಭಿನ್ನ ಯತ್ನಗಳು ಆರಂಭವಾದುವು. ಆಯಕಟ್ಟಿನ ಸ್ಥಳಗಳಲ್ಲಿ ಸಿಬ್ಬಂದಿಯನ್ನು ನಿಲ್ಲಿಸಿ ಬೇರೆ ಬೈಕ್ ಗಳಲ್ಲಿ ಬೌನ್ಸ್ ಹೆಲ್ಮೆಟ್ ಗಳನ್ನು ಹಾಕಿಕೊಂಡು ಹೋಗುವವರನ್ನು ಹಿಡಿಯುವುದು ಅದರಲ್ಲೊಂದು. ಹೀಗೆ ಹಿಡಿಯಲೆಂದು ನಿಂತವರಿಗೆ ನಾವು ಹೇಳುವುದನ್ನು ಕೇಳುವ ವ್ಯವಧಾನವಿರುವುದಿಲ್ಲ. ಬೌನ್ಸ್ ಹೆಲ್ಮೆಟ್ ಸಿಕ್ಕಿದರೆ ಸಾಕು ಧಮಕಿ ಹಾಕಿ ಒಯ್ಯುತ್ತಾರೆ. ನನ್ನ ಸ್ನೇಹಿತ ನನಗೆ ಸಿಕ್ಕಿದ ಬೌನ್ಸ್ ಹೆಲ್ಮೆಟ್ ಧರಿಸಿ ತನ್ನ ಸ್ವಂತದ ಬೈಕ್ ನಲ್ಲಿ ಹೋಗುತ್ತಿದ್ದ. ಬೌನ್ಸ್ ಸಿಬ್ಬಂದಿ ಹೆಲ್ಮೆಟ್ ಕಿತ್ತುಕೊಂಡರು. ಅಲ್ಲದೆ ಆತನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿಯೂ ಇದ್ದರು. ಇದರಿಂದಾಗಿ ಪುನಃ ಬೌನ್ಸ್ ಸಂಸ್ಥೆಯ ಅಧಿಕಾರಿಗಳಿಗೆ ಮೇಲ್ ಮಾಡಿದೆ. ಈ ಬಾರಿ ನನ್ನ ವಾಟ್ಸ್ ಆ್ಯಪ್ ಸಂಖ್ಯೆಯನ್ನು ತೆಗೆದುಕೊಂಡ ಅಧಿಕಾರಿ ನನ್ನ ಬಳಿ ಪ್ರೀತಿಯಿಂದಲೇ ಮಾತನಾಡಿದರು. ಈಗ ಹೊಸ ಡಿಜೈನ್ ಹೆಲ್ಮೆಟ್ ಗಳು ಬಂದಿವೆ. ಅದನ್ನು ನಿಮಗೆ ಕೊಡುತ್ತೇವೆ ಎಂದು ಹೇಳುತ್ತಲೇ ಮೂರು ತಿಂಗಳುಗಳ ಕಾಲ ಕಾಲವನ್ನು ದೂಡಿದರು. ಹೆಲ್ಮೆಟ್ ದೊರೆಯುವ ಆಸೆ ದೂರವಾಗುತ್ತಾ ಬಂತು. ಆದರೂ ನಾನು ಕೇಳುವುದನ್ನು ಬಿಟ್ಟಿರಲಿಲ್ಲ. ಅಂತಿಮವಾಗಿ ೩ ತಿಂಗಳುಗಳ ನಂತರ ಹೆಲ್ಮೆಟ್ ದೊರೆಯಿತು.
