ಶುಕ್ರವಾರ, ನವೆಂಬರ್ 9, 2018

ಕರಾರಸಾನಿ


ಮೂಡಬಿದರೆಯಿಂದ ಬೆಂಗಳೂರಿಗೆ ಹೊರಟಿದ್ದ ಕರ್ನಾಟಕ ವೈಭವ್ ಬಸ್ಸು ರಾತ್ರಿ 10 ಗಂಟೆಗೆ ಬೆಳ್ತಂಗಡಿಯಲ್ಲಿ ಕೆಟ್ಟು ನಿಂತಿತು. ಬೇರೆ ಬಸ್ಸಿನ ಮೂಲಕ ಧರ್ಮಸ್ಥಳದ ಹೊಸ ಬಸ್ ನಿಲ್ದಾಣಕ್ಕೆ ಪ್ರಯಾಣಿಕರನ್ನು ತಂದಿಳಿಸಲಾಯಿತು. 11 ಗಂಟೆಗೆ ಹೊರಡುವ ಸಾಮಾನ್ಯ ಬಸ್ಸನ್ನು ಹತ್ತಿಕೊಂಡು ಬೆಂಗಳೂರಿಗೆ ತೆರಳಿ ಎಂದು ಪ್ರಯಾಣಿಕರಿಗೆ ಸೂಚಿಸಲಾಯಿತು. ಅಲ್ಲದೇ ಕರ್ನಾಟಕ ವೈಭವದ ಹೆಚ್ಚುವರಿ ಪ್ರಯಾಣಶುಲ್ಕವನ್ನು ಹಿಂದಿರುಗಿಸಲು ಸಾಧ್ಯವಿಲ್ಲ ಎಂಬ ಸ್ಪಷ್ಟ ನಿರ್ಧಾರವನ್ನು ಕಂಡೆಕ್ಟರ್ ತಿಳಿಸಿದ. ಬೆಂಗಳೂರಿಗೆ ಹೊರಟ 11 ಗಂಟೆಯ ಬಸ್ಸಿನಲ್ಲಿ ಕೊನೆಯ ಕೆಲವು ಆಸನಗಳು ಮಾತ್ರ ಖಾಲಿಯಿದ್ದವು. ದುಬಾರಿ ಶುಲ್ಕವನ್ನು ಕೊಟ್ಟು ಮುಂಚಿತವಾಗಿ ಆಸನವನ್ನು ಕಾಯ್ದಿರಿಸಿದರೂ ಸಾಮಾನ್ಯ ಬಸ್ಸಿನಲ್ಲಿ ಜನಸಂದಣಿಯ ಮಧ್ಯೆ ಪ್ರಯಾಣಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದೆವು. ಮೇಲಧಿಕಾರಿಗಳಂತೂ ನಿರ್ಲಕ್ಷ್ಯದ ಮಾತುಗಳನ್ನೇ ಆಡುತ್ತಿದ್ದರು. ತಮ್ಮದೇ ಇಲಾಖೆಯ ಮೇಲಧಿಕಾರಿಯ ಬಳಿ ಪ್ರಯಾಣಿಕರಿಗಾಗುತ್ತಿರುವ ಸಮಸ್ಯೆಯನ್ನು ವಿವರಿಸಲು ಕಂಡಕ್ಟರಿಗೂ ಕಷ್ಟವಾಯಿತು. ಬಡವನ ಸಿಟ್ಟು ದವಡೆಗೆ ಮೂಲ ಎಂಬಂತೆ ಮೇಲಧಿಕಾರಿಯ ಬಳಿ ಪ್ರಯಾಣಿಕರ ಪರವಾಗಿ ಮಾತನಾಡಿದರೆ ನನಗೇ ತೊಂದರೆಯಾಗಬಹುದು ಎಂದು ಹೆದರುತ್ತಾ ಮಾತನಾಡುತ್ತಿದ್ದ. ಅಹಂಕಾರವೇ ಮೂರ್ತಿವೆತ್ತು ಬಂದಂತೆ ಕಾಣುವ ಸರ್ಕಾರಿ ಅಧಿಕಾರಿಗಳ ಬಳಿ ಆತ ಇಷ್ಟನ್ನು ನಿವೇದಿಸಿಕೊಂಡದ್ದು ದೊಡ್ಡ ಸಾಹಸವೇ ಸರಿ. ಪ್ರಯಾಣಿಕರ ಗದ್ದಲ ಹೆಚ್ಚಾದಾಗ ರಿಸರ್ವೇಶನ್ ಕೌಂಟರ್ ನ ಅಧಿಕಾರಿಯೊಬ್ಬ ಬಸ್ ಗಳನ್ನು ವ್ಯವಸ್ಥಾಪಿಸಲು ಪ್ರಯತ್ನಿಸುವಂತೆ ನಟಿಸುತ್ತಿದ್ದ. ವಸ್ತ್ರೇಣ ವಪುಷಾ ವಾಚಾ ವಿದ್ಯಯಾ ವಿನಯೇನ ವಾ | ವಕಾರೈಃ ಪಂಚಭಿರ್ಯುಕ್ತಃ ನರೋ ಭವತಿ ಪೂಜಿತಃ || ಎಂಬ ಮಾತಿನಂತೆ ಮನುಷ್ಯನೊಬ್ಬನನ್ನು ನೋಡಿ ಗೌರವಭಾವ ಹುಟ್ಟಬೇಕಾದರೆ ತೊಟ್ಟ ಬಟ್ಟೆ, ಆತನ ದೇಹ, ಮಾತು, ವಿದ್ಯೆ, ವಿನಯಗಳೆಂಬ ಐದು ಅಂಶಗಳು ಸಮಂಜಸವಾಗಿರಬೇಕು. ಕನಿಷ್ಠ ಪಕ್ಷ ಒಂದಂಶವಾದರೂ ಇದ್ದರೆ ಸ್ವಲ್ಪವಾದರೂ ಗೌರವಭಾವ ಮೂಡುತ್ತದೆ. ಆದರೆ ಬಸ್ಸನ್ನು ವ್ಯವಸ್ಥಾಪಿಸುವಂತೆ ನಟಿಸುತ್ತಿದ್ದ ಕೆ.ಎಸ್. ಆರ್. ಟಿ ಸಿಯ ಅಧಿಕಾರಿಯಲ್ಲಿ ಇದಾವುದೂ ಇರಲಿಲ್ಲ. ಬರ್ಮುಡ ಚಡ್ಡಿಯನ್ನು ಧರಿಸಿದ್ದ, ಕೃಶಕಾಯದ, ಬೇಕಾಬಿಟ್ಟಿಯಾಗಿ ಮಾತನಾಡುತ್ತಿದ್ದ, ವಿದ್ಯೆಯ ಸ್ಪರ್ಶವೇ ಇಲ್ಲದಂತೆ ಕಾಣುತ್ತಿದ್ದ, ಉಡಾಫೆ ವರ್ತನೆಯನ್ನು ಮಾಡುತ್ತಿದ್ದ ಆ ಅಧಿಕಾರಿ ಏನೂ ಕಿಸಿಯುದಿಲ್ಲ ಎಂದು ಎಲ್ಲರಿಗೂ ತಿಳಿಯಿತು. ನಮ್ಮೊಂದಿಗಿದ್ದ ಸಹಪ್ರಯಾಣಿಕರೊಬ್ಬರು ಭಗೀರಥಪ್ರಯತ್ನವನ್ನು ನಡೆಸಿ ಕ.ರಾ.ರ.ಸಾ.ನಿ ಯ ಮೇಲಧಿಕಾರಿಗಳಿಗೆ ಫೋನಾಯಿಸಿ, ಅವರ ಮನವೊಲಿಸಿ ಧರ್ಮಸ್ಥಳದಲ್ಲಿದ್ದ ರಾಜಹಂಸ ಬಸ್ಸೊಂದನ್ನು ಪ್ರಯಾಣಕ್ಕೆ ವ್ಯವಸ್ಥಾಪಿಸಿದರು. ಕಂಡಕ್ಟರ್ ಡಿಪೋದಿಂದ ಬಸ್ಸನ್ನು ತರಲು ತೆರಳಿದ್ದ. ಮಧ್ಯರಾತ್ರೆ ಹನ್ನೆರಡು ಗಂಟೆಯ ವೇಳೆಗೆ ಧರ್ಮಸ್ಥಳದ ಹೊಸ ಬಸ್ ನಿಲ್ದಾಣ ಮೌನವಾಗಿತ್ತು. ನಮ್ಮ ಬಸ್ಸಿನ ಪ್ರಯಾಣಿಕರು ಮಾತ್ರವೇ ನಿಲ್ದಾಣದಲ್ಲಿದ್ದರು. ಅದೇ ಸಮಯಕ್ಕೆ ಕಾರೊಂದು ಬಸ್ ನಿಲ್ದಾಣವನ್ನು ಪ್ರವೇಶಿಸಿತು. ಅಲ್ಲೇ ಮಲಗಿದ್ದ ನಾಯಿಯೊಂದು ಕಾರನ್ನು ಕಂಡ ತಕ್ಷಣ ಒಂದೇ ಸಮನೆ ಬೊಗಳಲಾರಂಭಿಸಿತು. ಚಾಲಕ ಕಾರನ್ನಿಳಿದ ಕೂಡಲೇ ಬೊಗಳುತ್ತಾ ಆತನನ್ನು ಹಿಂಬಾಲಿಸತೊಡಗಿತು. ಇದನ್ನು ನೋಡಿದ ಪ್ರಯಾಣಿಕರೊಬ್ಬರು ಈ ನಾಯಿಗಿರುವಷ್ಟು ಶ್ರದ್ಧೆ ಕೂಡಾ ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳಿಗಿಲ್ಲ ಎಂದಾಗ ಬಸ್ಸಿನ ರಗಳೆಯಿಂದ ಬೇಸತ್ತ ಪ್ರಯಾಣಿಕರೆಲ್ಲರೂ ನಗೆಗಡಲಲ್ಲಿ ತೇಲಾಡುತ್ತಿದ್ದರು. ಅಂತೂ ಇಂತೂ ಅಧಿಕಾರಿಗಳ ನಿರ್ಲಕ್ಷ್ಯವಿದ್ದರೂ ಕೂಡಾ ಪ್ರಯಾಣಿಕರ ಹಾಗೂ ಕಂಡಕ್ಟರ್ ನ ಶ್ರಮದಿಂದ ಹನ್ನೆರಡು ಗಂಟೆಯ ವೇಳೆಗೆ ರಾಜಹಂಸ ಬಸ್ಸಿನ ವ್ಯವಸ್ಥೆಯಾಯಿತು. ಮೊದಲು ಪಾವತಿಸಿದ್ದ ದರದಲ್ಲೇ ರಾಜಹಂಸ ಬಸ್ಸಿನ ಪ್ರಯಾಣಕ್ಕೆ ಅವಕಾಶ ದೊರಕಿದ್ದು ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಂತಾಗಿತ್ತು.

ಶ್ರೀಮದ್ರಾಮಾಯಣೀ ಗಂಗಾ

ವಾಲ್ಮೀಕಿಗಿರಸಂಭೂತಾ ರಾಮಾಂಭೋನಿಧಿಸಂಗತಾ । ಶ್ರೀಮದ್ರಾಮಾಯಣೀ ಗಂಗಾ ಪುನಾತಿ ಭುವನತ್ರಯಮ್ ॥ ಎಂಬ ಮಾತಿನ ಮೂಲಕ ಹಿರಿಯರು ರಾಮಾಯಣವನ್ನು ಗಂಗೆಯೆಂದೇ ಕರೆದಿದ್ದಾರೆ. ರಾಮಾಯ...